ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವಂತೆ ಬಿಎಸ್ಎಫ್ ಜನರಿಗೆ ಬೆದರಿಕೆ ಹಾಕುತ್ತಿದೆ ಎಂದು ಸಚಿವ ಫಿರ್ಹಾದ್ ಹಕೀಮ್ ಗಂಭೀರ ಆರೋಪ ಮಾಡಿದ್ದಾರೆ. ಬಂಗಾಳದ ಚುನಾವಣಾ ಪರಿಸ್ಥಿತಿಯನ್ನು ಪರಿಶೀಲಿಸಲು ಬಂದ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಿದೆ. ಆದರೆ ಯಾವುದೇ ಕೋಮುವಾದಿ ಪಕ್ಷಕ್ಕೂ ಬಂಗಾಳದಲ್ಲಿ ಭಿನ್ನತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಫಿರ್ಹಾದ್ ಹಕೀಮ್ ಹೇಳಿದ್ದಾರೆ.
“ಗಡಿ ಗ್ರಾಮಗಳಿಗೆ ಬಿಜೆಪಿಯು ಬಿಎಸ್ ಎಫ್ ಅನ್ನು ಕಳುಹಿಸುತ್ತಿದೆ ಎಂದು ನಾವು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅವರು ಜನರನ್ನು ಬೆದರಿಸಲು ಸೇನೆಯನ್ನು ಬಳಸುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ” ಎಂದು ಫಿರ್ಹಾದ್ ಹಕೀಂ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖಂಡರಾದ ಸುಬ್ರತಾ ಬಕ್ಷಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರು ಚುನಾವಣಾ ಆಯೋಗವನ್ನು ಭೇಟಿಯಾಗಿದ್ದಾರೆ.
ಏತನ್ಮಧ್ಯೆ ಶೇಕಡಾ 10 ರಷ್ಟು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಸಿದ್ದಪಡಿಸುವುದರಿಂದ ಇದು ಚುನಾವಣಾ ಆಯೋಗದ ವಿರುದ್ಧದ ಆರೋಪವಾಗಿದೆ ಎಂದು ತೃಣಮೂಲ ನಾಯಕರು ಪ್ರತಿಕ್ರಿಯಿಸಿದ್ದಾರೆ.