ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ| ಮುಸ್ಲಿಮರು ಸಹಕರಿಸಬಾರದು : ಇಮಾಮ್ಸ್ ಕೌನ್ಸಿಲ್

Prasthutha|

- Advertisement -

ಹೊಸದಿಲ್ಲಿ: ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಘ ಪರಿವಾರ ರಾಷ್ಟ್ರವ್ಯಾಪಿ ನಡೆಸುತ್ತಿರುವ ನಿಧಿಸಂಗ್ರಹಕ್ಕೆ ಸಹಕರಿಸಬಾರದು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸೆಕ್ರೇಟರಿಯೇಟ್ ಮುಸ್ಲಿಮರಿಗೆ ಕರೆ ನೀಡಿದೆ. ಬಾಬರಿ ಮಸೀದಿಯು ಧ್ವಂಸಗೊಳ್ಳುವ ಮೊದಲು ಇದ್ದಂತೆಯೇ ಕೊನೆಯ ದಿನದವರೆಗೂ ಮಸೀದಿಯಾಗಿ ಉಳಿಯಲಿದೆ. ಮುಸ್ಲಿಮರ ಮನೆಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಸಂಘ ಪರಿವಾರ ನಡೆಸುತ್ತಿರುವ ಪ್ರಯತ್ನವು ಸತ್ಯ ಮತ್ತು ನ್ಯಾಯಕ್ಕೆ ಬೆಲೆ ಕೊಡದ ನ್ಯಾಯಾಲಯದ ದುರದೃಷ್ಟಕರ ತೀರ್ಪಿನಿಂದ ದುಃಖಿಸುತ್ತಿರುವ ಜನತೆಯ ಗಾಯಕ್ಕೆ ಬರೆ ಎಳೆಯುವುದಕ್ಕೆ ಸಮಾನವಾಗಿದೆ ಎಂದು ಇಮಾಮ್ಸ್ ಕೌನ್ಸಿಲ್ ಹೇಳಿದೆ.

ಅಂದು ಕೋಮು ಗಲಭೆಗಳನ್ನು ನಡೆಸಲು ಬಾಬರಿ ಮಸೀದಿ ವಿರುದ್ಧ ಆರ್‌ಎಸ್‌ಎಸ್ ನಡೆಸಿದ ರಥಯಾತ್ರೆಯ ಭಾಗವಾಗಿದೆ ಇಂದು ಅವರು ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿರುವುದು. ಅವರು ಕೋಮು ಧ್ರುವೀಕರಣವನ್ನು ಸೃಷ್ಟಿಸುವ ಮೂಲಕ  ಗಲಭೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಸಂಘ ಪರಿವಾರದ ಇಂತಹ ಗಲಭೆಯ ಪ್ರಯತ್ನಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಸಮಾಜ ಸಿದ್ಧವಾಗಿರಬೇಕು. ರಾಮ ಮಂದಿರ ನಿರ್ಮಾಣ ನಿಧಿಗೆ ದೇಣಿಗೆ ನೀಡುವುದನ್ನು ಇಸ್ಲಾಮಿಕ್ ಷರಿಯಾ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಆದ್ದರಿಂದ ದೇಣಿಗೆ ಸಂಗ್ರಹಿಸಲು ಮುಸ್ಲಿಂ ಮನೆಗಳಿಗೆ ಬರುವ ಸಂಘ ಪರಿವಾರದ ಬಗ್ಗೆ ಎಚ್ಚರವಹಿಸಿ ಅರಿಂದ ಸಂಪೂರ್ಣವಾಗಿ ದೂರ ನಿಲ್ಲಬೇಕು. ಅವರ ರಾಷ್ಟ್ರ ವಿರೋಧಿ ಮತ್ತು ದೇಶದ್ರೋಹ ಅಜೆಂಡಾಗಳನ್ನು ವಿರೋಧಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸೆಕ್ರೇಟರಿಯೇಟ್ ಸಭೆ ನೆನಪಿಸಿದೆ.

Join Whatsapp