ಬಾಂಗ್ಲಾ ರಾಜಕಾರಣಿಯ ಪುತ್ರನೊಂದಿಗೆ ಚೆನ್ನೈ ಯುವತಿಯ ಮದುವೆ; ಎಫ್ಐಆರ್ ನಲ್ಲಿ ಝಾಕೀರ್ ನಾಯ್ಕ್ ಹೆಸರು !

Prasthutha|

ಚೆನ್ನೈ ಮೂಲದ ಉದ್ಯಮಿಯೊಬ್ಬರ ಪುತ್ರಿ ಲಂಡನ್ ನಲ್ಲಿ ಕಲಿಯುತ್ತಿದ್ದಾಗ ಇಸ್ಲಾಂಗೆ ಮತಾಂತರ ಹೊಂದಿ ಬಾಂಗ್ಲಾದೇಶದ ರಾಜಕಾರಣಿಯೊಬ್ಬರ ಪುತ್ರನನ್ನು ವಿವಾಹವಾದ ಪ್ರಕರಣದ ತನಿಖೆಗೆ ಎನ್ಐಎ ತಂಡ ಬಾಂಗ್ಲಾಕ್ಕೆ ತೆರಳಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಇಸ್ಲಾಮಿಕ್ ಪ್ರಬೋಧಕ ಝಾಕಿರ್ ನಾಯ್ಕ್ ಮತ್ತು ಪಾಕಿಸ್ತಾನ ಮೂಲದ ಇಬ್ಬರು ಪ್ರಬೋಧಕರನ್ನು ಎಫ್ ಐಆರ್ ನಲ್ಲಿ ಸೇರಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಎನ್ ಐಎ ಮೂಲಗಳು ತಿಳಿಸಿವೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮಿ ದೂರು ನೀಡಿ, ತಮ್ಮ ಮಗಳನ್ನು ಲಂಡನ್ ನಲ್ಲಿ ಬಲವಂತವಾಗಿ ಮತಾಂತರ ಮಾಡಿ, ಬಾಂಗ್ಲಾದೇಶದ ರಾಜಕಾರಣಿಯ ಮಗನಿಗೆ ಮದುವೆ ಮಾಡಲಾಗಿದೆ ಎಂದು ದೂರು ನೀಡಿದ್ದರು.
ಎನ್ಐಎ ತಂಡ, ಯುವತಿ ಮತ್ತು ಬಾಂಗ್ಲಾದೇಶದ ರಾಜಕಾರಣಿ ಪುತ್ರ ನಫೀಸ್ ಅವರನ್ನು ವಿಚಾರಣೆ ನಡೆಸಲು ಬಾಂಗ್ಲಾದೇಶಕ್ಕೆ ತೆರಳಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಈಗಾಗಲೇ ಒಂದು ಬಾರಿ ಯುವತಿಯನ್ನು ವಾಟ್ಸಪ್ ಮೂಲಕ ಸಂಪರ್ಕಿಸಿ ವಿಚಾರಣೆ ನಡೆಸಲಾಗಿತ್ತು. ತಾನು ಸ್ವ ಇಚ್ಛೆಯಿಂದ ಇಸ್ಲಾಂಗೆ ಮತಾಂತರ ಹೊಂದಿ ಮದುವೆಯಾಗಿದ್ದೇನೆ. ಇದರಲ್ಲಿ ಯಾವುದೇ ಬಲವಂತ ಇಲ್ಲ ಎಂದು ಯುವತಿ ಎನ್ಐಎ ಅಧಿಕಾರಿಗಳಿಗೆ ವಾಟ್ಸಪ್ ಮೂಲಕ ಉತ್ತರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಯುವತಿ ಮತ್ತು ಬಾಂಗ್ಲಾ ರಾಜಕಾರಣಿಯ ಮಗ ಲಂಡನ್ ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಗ ಪರಸ್ಪರ ಪರಿಚಯವಾಗಿತ್ತು.
ಬಾಂಗ್ಲಾದಲ್ಲಿರುವ ಎನ್ಐಎ ತಂಡ, ರಾಜಕಾರಣಿ ನಫೀಸ್, ಅವರ ತಂದೆ ಸರ್ದಾರ್ ಶೇಖಾವತ್ ಹುಸೈನ್ ಅವರನ್ನು ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಕೆಲವು ಸಂಘಟನೆಗಳು ಕರೆದಿವೆ. ಇದೇ ವೇಳೆ ಎನ್ಐಎ ಅಧಿಕಾರಿಗಳು ಬಾಂಗ್ಲಾದಲ್ಲಿರುವ ಝಾಕಿರ್ ನಾಯ್ಕ್ ಮತ್ತು ಪಾಕಿಸ್ತಾನ ಮೂಲದ ಇತರ ಇಬ್ಬರು ಧರ್ಮ ಬೋಧಕರ ಹೆಸರನ್ನು ಎಫ್ಐಆರ್ ಗೆ ಸೇರಿಸಿದ್ದಾರೆ.



Join Whatsapp