ಬಸ್ ನಿರ್ವಾಹಕನಿಗೆ ಚೂರಿ ಇರಿತ ; ಉನ್ನತ ಮಟ್ಟದ ತನಿಖೆಗೆ SDPI ಒತ್ತಾಯ

Prasthutha|

- Advertisement -

ಸುರತ್ಕಲ್ : ಸುರತ್ಕಲ್ ಸಮೀಪದ ಕಾಟಿಪಳ್ಳದ ಕೈಕಂಬದಲ್ಲಿ ಬುಧವಾರ ತಡರಾತ್ರಿ ಖಾಸಗಿ ಬಸ್ ನಿರ್ವಾಹಕ ಕೃಷ್ಣಾಪುರ  ನಿವಾಸಿ  ಜಾಬಿರ್ ಎಂಬ ಯುವಕನಿಗೆ ಬೈಕ್‌ನಲ್ಲಿ ಬಂದ ಮೂರು ಮಂದಿ ಅಪರಿಚಿತರು ಚೂರಿ ಇರಿದು ಪರಾರಿಯಾಗಿದ್ದು, ಈ ಕೃತ್ಯವನ್ನು ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದಾವೂದ್ ನೌಷಾದ್  ತೀರ್ವವಾಗಿ ಖಂಡಿಸಿದ್ದಾರೆ.

  ಜಿಲ್ಲೆಯ ವಿವಿಧ ಕಡೆಗಳಲ್ಲಿ ಇತ್ತೀಚೆಗೆ ಸಮಾಜ ವಿರೋಧಿ ಶಕ್ತಿಗಳು ಬಾಲ ಬಿಚ್ಚುತ್ತಿದ್ದು, ಇವರ ಕಿಡಿಕೇಡಿ ಕೃತ್ಯಗಳಿಗೆ ಅಮಾಯಕ ಯುವಕರು ಬಲಿಪಶುಗಳಾಗುತ್ತಿದ್ದಾರೆ. ಜಿಲ್ಲೆಯ  ವಿವಿಧ ಕಡೆಗಳಲ್ಲಿ ಸಂಘಪರಿವಾರದ ನಾಯಕರಾದ ಶರಣ್ ಪಂಪ್‌ವೆಲ್, ರಾಜಶೇಖರಾನಂದ ಸ್ವಾಮಿ,ಭುಜಂಗ ಕುಲಾಲ್ ಹಾಗೂ ಇತರ ಮುಖಂಡರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿದ ಪ್ರಚೋದನಾಕಾರಿ ಭಾಷಣಗಳಿಂದ ಪ್ರೇರಿತವಾದ ಕಿಡಿಗೇಡಿ ಯುವಕರು ಇಂತಹ ಹೀನ ಕೃತ್ಯಗಳನ್ನು ಮಾಡುತ್ತಿದ್ದಾರೆ. 1999ರಲ್ಲಿ ಸುರತ್ಕಲ್‌ನಲ್ಲಿ ಸಂಘಪರಿವಾರ ನಡೆಸಿದ ಹಿಂಸಾಕೃತ್ಯ ವನ್ನು ನೆನಪಿಸಿಕೊಳ್ಳಿ ಅಲ್ಲಿ ನಾವು ಎಷ್ಟು ವಿಕೆಟ್ ತೆಗೆದಿದ್ದೇವೆ ಎಂಬುದು ನೆನಪಿದೆಯಾ ಎಂದು ಸಭೆಯನ್ನುದ್ದೇಶಿಸಿ ಶರಣ್ ಪಂಪ್‌ವೆಲ್ ಮಾಡಿದ ಉದ್ರೇಕಕಾರಿ ಬಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ದುಷ್ಕೃತ್ಯಗಳಿಗೆ ಪ್ರೇರಣೆಯಾಗಿದೆ.

- Advertisement -

  ಮಂಗಳೂರಿಗೆ ನೂತನವಾಗಿ ಬಂದ ಪೊಲೀಸ್ ಕಮಿಷನರ್ ರವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದನ್ನು ಎಸ್‌ಡಿಪಿಐ ಅಭಿನಂದಿಸುತ್ತದೆ. ಆದರೆ ಇಲ್ಲಿ ನಡೆಯುವ ಎಲ್ಲಾ ಸಮಾಜ ವಿರೋಧಿ ಶಕ್ತಿಗಳ ಅಟ್ಟಹಾಸದ ಹಿನ್ನಲೆಯಲ್ಲಿ ಸಂಘಪರಿವಾರದ ಕಾಣದ ಕೈಗಳು ಕೆಲಸ ಮಾಡುತ್ತಿದೆ. ಇದನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಇಲ್ಲಿರುವ ಬಜರಂಗದಳ, ವಿ.ಹೆಚ್.ಪಿ ನಾಯಕರನ್ನು ಹದ್ದು ಬಸ್ತಿನಲ್ಲಿಟ್ಟು ಅವರ ಮೇಲೆ ಇಲಾಖೆ ನಿಗಾ ಇಟ್ಟಲ್ಲಿ ಖಂಡಿತವಾಗಿ ಜಿಲ್ಲೆಯಲ್ಲಿ ಶಾಂತಿ ನೆಲೆಸಬಹುದು. ಕೋಮು ಸೂಕ್ಷ್ಮ ಪ್ರದೇಶವೆಂದು ಕುಖ್ಯಾತಿ ಪಡೆದಿರುವ ದ.ಕ ಜಿಲ್ಲೆಯ ಇತಿಹಾಸವನ್ನು ಅವಲೋಕಿಸಿದರೆ ಸಂಘಪರಿವಾರದ ನಾಯಕರ ಪ್ರಚೋಧನಾಕಾರಿ ಹೇಳಿಕೆ, ಭಾಷಣಗಳು ನಡೆದ ಕೆಲವೇ ಸಮಯದಲ್ಲಿ ಇಲ್ಲಿ ಗಲಭೆ, ಕೊಲೆ, ಚೂರಿ ಇರಿತ, ಹಲ್ಲೆ ಯಂತಹ ಅಹಿತಕರ ಘಟನೆಗಳು ಸಂಭವಿಸುವುದನ್ನು ನಮಗೆ ಕಾಣಲು ಸಾಧ್ಯವಾಗಿದೆ.

  ಆದ ಕಾರಣ ಇಂತಹ ಘಟಣೆಗಳು ನಡೆದಾಗ ಪಾತ್ರದಾರಿ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಘಟನೆಯ ಸೂತ್ರದಾರರನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಜಿಲ್ಲೆಯ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬುದನ್ನು ಪೊಲೀಸ್ ಇಲಾಖೆ ಅರಿತು ಕಾರ್ಯ ಪ್ರವೃತವಾಗಬೇಕು ಎಂದು ಎಸ್ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ದಾವೂದ್ ನೌಷಾದ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp