ಬಡ ಬಾಣಂತಿಯರಿಗೆ ಸೇರಬೇಕಿದ್ದ ಹಣ ಭ್ರಷ್ಟರ ಪಾಲು | ಅಧಿಕಾರಿಗಳ ನಕಲಿ ಸಹಿ ಮಾಡಿ ವಂಚನೆ

Prasthutha|

ರಾಮನಗರ : ಭ್ರಷ್ಟಾಚಾರಿಗಳಿಗೆ ಯಾವ ಹಣವಾದರೂ ಪರವಾಗಿಲ್ಲ, ಕದಿಯುವುದೊಂದೇ ಅವರ ಪರಮ ಗುರಿಯಿರಬೇಕು. ಇಲ್ಲೊಂದು ಕಡೆ, ಬಡ ಮಹಿಳೆಯರಿಗೆ ಹೆರಿಗೆ ನಂತರ ಸರಕಾರ ನೀಡುವ ಅಲ್ಪಮೊತ್ತದ ಪ್ರೋತ್ಸಾಹಧನದ ಮೇಲೂ ಭ್ರಷ್ಟಾಚಾರಿಗಳ ಕಣ್ಣು ಬಿದ್ದಿದೆ. ಜನನಿ ಸುರಕ್ಷಾ ಯೋಜನೆ ಮೂಲಕ ಬಾಣಂತಿಯರಿಗೆ ಸೇರಬೇಕಿದ್ದ ಸುಮಾರು 1.46 ಲಕ್ಷ ರೂಪಾಯಿಯನ್ನು ಹಿರಿಯ ಅಧಿಕಾರಿಗಳ ಸಹಿ ಮಾಡಿ ದೋಚಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಜನನಿ ಸುರಕ್ಷಾ ಯೋಜನೆಯಡಿ ರಾಮನಗರ ಆರೋಗ್ಯಾಧಿಕಾರಿ ಮತ್ತು ಸೀನಿಯರ್ ಇನ್ಸ್ ಪೆಕ್ಟರ್ ಅವರ ಜಂಟಿ ಖಾತೆಗೆ ಪ್ರತಿವರ್ಷದಂತೆ ಅನುದಾನ ಬಿಡುಗಡೆಯಾಗಿತ್ತು. ಈಗ ಆ ಅನುದಾನದಿಂದ ಏಕಾಏಕಿ 1.46 ಲಕ್ಷ ಮಾಯವಾಗಿದೆ. ಇಬ್ಬರು ಅಧಿಕಾರಿಗಳ ಸಹಿ ನಕಲು ಮಾಡಿ, ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ. ವಿಶೇಷವೆಂದರೆ, ಇಷ್ಟೊಂದು ಬೃಹತ್ ಮೊತ್ತದ ಹಣ ಎಗರಿಸಿರುವುದು ಆರೋಗ್ಯ ಇಲಾಖೆಗೇ ಗೊತ್ತಿಲ್ಲ. ಈಗ ದೂರು ದಾಖಲಾಗಿದ್ದು, ಇಲಾಖೆಯ ಅಕೌಂಟೆಂಟ್ ಮೇಲೆ ಶಂಕೆಯಿದೆ. ತನಿಖೆಯಿಂದಷ್ಟೇ ಅಪರಾಧಿಗಳ ಪತ್ತೆಯಾಗಬೇಕಿದೆ.ಜನನಿ ಸುರಕ್ಷಾ ಯೋಜನೆಯಡಿ ಮನೆಯಲ್ಲಿ ಹೆರಿಗೆಯಾದರೆ ರೂ.500, ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆದರೆ ರೂ.700 ಪ್ರೋತ್ಸಾಹಧನ ನೀಡಲಾಗುತ್ತದೆ. ಬಡ ತಾಯಂದಿರಿಗೆ ತಲುಪಬೇಕಾದ ಈ ಹಣದ ಮೇಲೂ ದುಷ್ಟರ ಕಣ್ಣು ಬಿದ್ದಿರುವುದು ನಿಜಕ್ಕೂ ವಿಷಾದನೀಯ.



Join Whatsapp