ಕಾನೂನು ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ | ಲಾಠಿಚಾರ್ಜ್ | ಕಲ್ಲೆಸೆತ, ಪೊಲೀಸ್ ಜೀಪ್ ಜಖಂ

Prasthutha|

ಕುಷ್ಟಗಿ : ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ ನಡೆಸಿದ ಗುಂಪನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ಉತ್ಸವ ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ ಮತ್ತು ಜೀಪ್ ಜಖಂ ಮಾಡಲಾಗಿದೆ. ಈ ಸಂಬಂಧ ಸುಮಾರು 50 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಅವಧೂತ ಶುಕಮುನಿ ಆರಾಧನಾ ಮಹೋತ್ಸವದ ಸಂದರ್ಭ ಈ ಘಟನೆ ನಡೆದಿದೆ.

- Advertisement -

ಕೋವಿಡ್ 19 ಕಾರಣದಿಂದ ಆರಾಧನಾ ಮಹೋತ್ಸವವನ್ನು ಸಾರ್ವಜನಿಕವಾಗಿ ನಡೆಸಲು ಅನುಮತಿಯಿರಲಿಲ್ಲ. ದೇವಸ್ಥಾನದ ಒಳಗೆ ಸರಳವಾಗಿ ನಡೆಸುವಂತೆ ತಹಶೀಲ್ದಾರ್ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಪೂಜೆ ನಂತರ ಪಲ್ಲಕ್ಕಿಯನ್ನು ಹೊತ್ತುಕೊಂಡು ಗುಂಪೊಂದು ಮಠದ ಹೊರಗಡೆ ಬಂದಿತ್ತು. ನಿಷೇಧದ ನಡುವೆಯೂ ದೋಟಿಹಾಳ-ಕೇಸೂರು ಗ್ರಾಮಗಳಲ್ಲಿ ಪಲ್ಲಕ್ಕಿ ಹೊತ್ತುಕೊಂಡು ಹೋಗಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ಮಾತಿಗೆ ಮನ್ನಣೆ ದೊರೆಯಲಿಲ್ಲ. ಹೀಗಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಈ ಸಂದರ್ಭ ಗುಂಪು ಪಲ್ಲಕ್ಕಿಯನ್ನು ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆಸಿ, ಜಖಂ ಮಾಡಿದ್ದಾರೆ. ಪೊಲೀಸರು ಲಾಠಿಚಾರ್ಜ್ ಆರಂಭಿಸುತ್ತಿದ್ದಂತೆ ಪಲ್ಲಕ್ಕಿ ಬಿಟ್ಟು ಪರಾರಿಯಾದರೆಂದು ವರದಿಯೊಂದು ತಿಳಿಸಿದೆ.

- Advertisement -

ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಪದಗಳಿಂದ ನಿಂದನೆ, ಜೀವಬೆದರಿಕೆ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join Whatsapp