‘ಫೇಮಸ್’ ಆಗಲು ಬಾಂಬ್ ಕರೆ | ಹೆಸರಿನ ಆಧಾರದಲ್ಲಿ ಆರೋಪಿ ಮಾನಸಿಕ ‘ಅಸ್ವಸ್ಥ’ನಾಗುವ ಮಾಧ್ಯಮ ವರದಿಗಳ ಹಿನ್ನೆಲೆ ಏನು?

Prasthutha|

“ಸರ್ಟಿಫಿಕೇಟ್ ಇಲ್ಲದೆ ಆತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗುವುದಿಲ್ಲ”

ಮಂಗಳೂರು : ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ತಂದಿರಿಸಿ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಆದಿತ್ಯರಾವ್ ಮಾದರಿಯಲ್ಲಿ, ತಾನೂ ‘ಫೇಮಸ್’ ಆಗಬೇಕೆಂದು ಹೋಟೆಲ್ ಕಾರ್ಮಿಕ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದನೆಂದು ತಿಳಿದುಬಂದಿದೆ. ಈ ಹಿಂದಿನ ಪ್ರಕರಣದಂತೆ ಪ್ರಸಿದ್ಧಿ ಪಡೆಯಬೇಕೆಂಬ ಉದ್ದೇಶದಿಂದ ಕಾರ್ಕಳದ ವಸಂತ (33) ಎಂಬಾತ ಈ ರೀತಿ ಹುಸಿಬಾಂಬ್ ಕರೆ ಮಾಡಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

- Advertisement -

 ಈ ಬಗ್ಗೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿಗಳನ್ನು ನೀಡಿರುವ ವಿಕಾಸ್ ಕುಮಾರ್,  “ಏರ್ ಪೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಉಡುಪಿಯ ಕಾರ್ಕಳ ತಾಲೂಕು ಮುದ್ರಾಡಿಯ ವಸಂತ ಶೇರಿಗಾರ್ (33)ನನ್ನು ಈಗಾಗಲೇ ಬಂಧಿಸಲಾಗಿದ್ದು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ಕೋವಿಡ್ ಸೋಂಕು ಪರೀಕ್ಷೆ ನಡೆಸಬೇಕಾಗಿರುವುದರಿಂದ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು’’ ಎಂದು ಹೇಳಿದ್ದಾರೆ.

ಬಂಧಿತ ಈ ಹಿಂದೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ 3-4 ವರ್ಷ ಕೆಲಸ ಮಾಡಿದ್ದ. ಬಳಿಕ ಉಡುಪಿಯ ಹೋಟೆಲ್ ನಲ್ಲಿ ಕೆಲಸ ಮಾಡಿದ್ದ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿದ್ದು, ಗೂಗಲ್ ಮೂಲಕ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ್ ಅವರ ಮೊಬೈಲ್ ನಂಬರ್ ಪಡೆದುಕೊಂಡು ಬಾಂಬ್ ಇರಿಸಿದುದಾಗಿ ಬೆದರಿಕೆ ಹಾಕಿದ್ದ. ಕೇವಲ ನಾಲ್ಕು ತಾಸುಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಆದರೆ, ಇನ್ನೊಂದೆಡೆ ಬಂಧಿತನ ಹೆಸರು ನೋಡುತ್ತಿದ್ದಂತೆ ಕೆಲವು ಮಾಧ್ಯಮ ಸಂಸ್ಥೆಗಳು ಆರೋಪಿಯು ‘ಮಾನಸಿಕ ಅಸ್ವಸ್ಥ’ ಎಂಬರ್ಥದಲ್ಲಿ ವರದಿ ಮಾಡಿದ್ದವು. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆಯೇ? ಎಂದು ಪ್ರಶ್ನಿಸಿದಾಗ, ಸರ್ಟಿಫಿಕೇಟ್ ಇಲ್ಲದೆ ಆತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲು ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತಿಬಾರಿಯೂ ಇಂತಹ ಘಟನೆಗಳಾದಾಗ, ದೇಶದ ಮಾಧ್ಯಮಗಳು ವರ್ತಿಸುತ್ತಿರುವ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಆರೋಪಿಯ ಹೆಸರು ನಿರ್ದಿಷ್ಟ ಕೋಮಿಗೆ ಸೇರಿದಾಗ, ಯಾವುದೇ ಪೊಲೀಸ್ ಮಾಹಿತಿಯಿಲ್ಲದಿದ್ದರೂ, ಆತನನ್ನು ಭಯೋತ್ಪಾದಕನೆಂದೂ, ಆತನಿಗೆ ವಿವಿಧ ಭಯೋತ್ಪಾದಕ ಸಂಘಟನೆಗಳ ನಂಟಿದೆಯೆಂದು ಕಪೋಲಕಲ್ಪಿತ ವರದಿಗಳನ್ನು ಸರಣಿಯಾಗಿ ಪ್ರಕಟಿಸುವುದನ್ನು ನಾವು ನೋಡುತ್ತಿರುತ್ತೇವೆ. ಅದೇ ಸಂದರ್ಭ, ಅಂತಹುದೇ ಸನ್ನಿವೇಶದಲ್ಲಿ ಆರೋಪಿಯ ಹೆಸರು ಇನ್ನೊಂದು ಕೋಮಿನ ವ್ಯಕ್ತಿಯದ್ದಾಗಿದ್ದರೆ, ಯಾವುದೇ ಪೊಲೀಸ್ ದೃಢೀಕರಣವಿಲ್ಲದೆಯೂ, ಆತನನ್ನು ಮಾನಸಿಕ ಅಸ್ವಸ್ಥ ಎಂದು ಇದೇ ಮಾಧ್ಯಮಗಳು ಬಿಂಬಿಸುತ್ತವೆ. ಮಾಧ್ಯಮಗಳ ಇಂತಹ ಪೂರ್ವಾಗ್ರಹ ಪೀಡಿತ ವರ್ತನೆ, ಮಾಧ್ಯಮ ರಂಗದೊಳಗೆ ನುಸುಳಿರುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳ ಬಣ್ಣ ಮತ್ತೊಮ್ಮೆ ಬಯಲು ಮಾಡಿದೆ. ಸಾರ್ವಜನಿಕ ವಲಯದಲ್ಲಿ ಇಂತಹ ಮಾಧ್ಯಮ ಸಂಸ್ಥೆಗಳನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ.



Join Whatsapp