ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) | ನಿಯಮ ರೂಪಿಸಲು 3 ತಿಂಗಳು ಹೆಚ್ಚುವರಿ ಸಮಯ ಕೋರಿದ ಗೃಹ ಸಚಿವಾಲಯ

Prasthutha|

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳನ್ನು ರೂಪಿಸಲು ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸಂಸದೀಯ ಕಾರ್ಯಗಳ ಕೈಪಿಡಿಯ ಪ್ರಕಾರ, ಅಧೀನ ಕಾನೂನುಗಳ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಇಲಾಖೆಗೆ ಈ ಮನವಿ ಮಾಡಲಾಗಿದೆ.

- Advertisement -

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ದೌರ್ಜನ್ಯಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಕುರಿತ ವಿವಾದಿತ ಸಿಎಎ ಎಂಟು ತಿಂಗಳ ಹಿಂದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿದ್ದು, ಈ ಸಂಬಂಧ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ರಾಷ್ಟ್ರಪತಿಯವರು ಈ ಕಾಯ್ದೆಗೆ 2019, ಡಿಸೆಂಬರ್ 12ರಂದು ಸಮ್ಮತಿ ಸೂಚಿಸಿದ್ದಾರೆ.

“ಸಿಎಎಗೆ ನಿಯಮಗಳನ್ನು ರೂಪಿಸಲು ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶವನ್ನು ಗೃಹ ಸಚಿವಾಲಯ ಕೇಳಿದೆ. ಅಧೀನ ಕಾನೂನುಗಳ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಇಲಾಖೆಯಲ್ಲಿ ಮನವಿ ಮಾಡಲಾಗಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿಎಎ ನಿಯಮಗಳನ್ನು ರಚಿಸುವ ಕಾರ್ಯದ ಸ್ಥಿತಿಗತಿಗಳ ಕುರಿತಂತೆ ಸಮಿತಿಯು ವಿವರಣೆ ಕೇಳಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ಮನವಿ ಮಾಡಿದೆ. ಸಮಿತಿಯು ಸಚಿವಾಲಯದ ಬೇಡಿಕೆ ಮನ್ನಿಸುವ ಎಲ್ಲಾ ಸಾಧ್ಯತೆಗಳಿವೆ.

- Advertisement -

ಸಂಬಂಧಪಟ್ಟ ಕಾನೂನು ಜಾರಿಯಾದ ದಿನಾಂಕದಿಂದ ಆರು ತಿಂಗಳೊಳಗೆ ಉಪ ಕಾನೂನುಗಳು, ನಿಯಮಗಳು, ಉಪ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಅಷ್ಟರೊಳಗೆ ಸಂಬಂಧಪಟ್ಟ ಸಚಿವಾಲಯ/ಇಲಾಖೆ ತನ್ನ ಕಾರ್ಯಗಳನ್ನು ಪೂರ್ಣಗೊಳಿಸದಿದ್ದಲ್ಲಿ, ಹೆಚ್ಚುವರಿ ಕಾಲಾವಕಾಶವನ್ನು ಕೋರಿ ಸಮಿತಿಗೆ ಮನವಿ ಮಾಡಬೇಕಾಗುತ್ತದೆ. ಅವಧಿ ವಿಸ್ತರಣೆಗೆ ಕಾರಣವನ್ನೂ ನೀಡಬೇಕಾಗುತ್ತದೆ. ಅದು ಮೂರು ತಿಂಗಳು ಮೀರದಂತಿರಬೇಕಾಗುತ್ತದೆ. ಸಿಎಎ ಸಂಸತ್ತಿನಲ್ಲಿ ಜಾರಿಯಾದ ಬಳಿಕ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಸಿಎಎ ಧಾರ್ಮಿಕ ಆಧಾರದಲ್ಲಿ ತಾರತಮ್ಯವನ್ನು ಎಸಗುತ್ತದೆ, ಇದು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂಬ ಆಕ್ಷೇಪಗಳು ಕೇಳಿಬಂದಿವೆ. ಸಿಎಎ ಜೊತೆ ಎನ್ ಆರ್ ಸಿ ಜಾರಿ ಮಾಡುವ ಮೂಲಕ ಭಾರತೀಯ ಮುಸ್ಲಿಮರನ್ನು ಗುರಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಪ್ರತಿಭಟನಕಾರರು ಆಪಾದಿಸಿದ್ದಾರೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರು ಸೇರಿದಂತೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಕಾನೂನಿನ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ.

Join Whatsapp