ನ್ಯಾಯಾಂಗ ನಿಂದನೆ | ಪ್ರಶಾಂತ್ ಭೂಷಣ್ ಬೆಂಬಲವಾಗಿ #HumDekhenge ಟ್ರೆಂಡಿಂಗ್ | ಪ್ರತಿಭಟನೆ

Prasthutha|

ನವದೆಹಲಿ : ನ್ಯಾಯಾಂಗ ವ್ಯವಸ್ಥೆಯಲ್ಲಿನ ಇತ್ತೀಚಿನ ಕೆಲವು ಬದಲಾವಣೆಗಳ ಬಗ್ಗೆ ಟೀಕಿಸಿ ಟ್ವೀಟ್ ಮಾಡಿ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಗುರುತಿಸಲ್ಪಟ್ಟಿರುವ ನ್ಯಾಯವಾದಿ ಪ್ರಶಾಂತ್ ಭೂಷಣ್ ಪರವಾಗಿ ಇಂದು #HumDekhenge ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಪ್ರಶಾಂತ್ ಭೂಷಣ್ ಗೆ ಶಿಕ್ಷೆಯ ಪ್ರಮಾಣ ಘೋಷಣೆ ಕುರಿತ ವಾದವು ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದ ವೇಳೆ, ಟ್ವಿಟರ್ ನಲ್ಲಿ ಭಾರೀ ಸಂಖ್ಯೆಯ ಜನರು #HumDekhenge ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಬೆಂಬಲವನ್ನು ಸೂಚಿಸಿದರು. ಅಲ್ಲದೆ, ಇದೇ ವೇಳೆ ಗುಂಪೊಂದು ಪ್ರಶಾಂತ್ ಭೂಷಣ್ ಅವರನ್ನು ಬೆಂಬಲಿಸಿ ಸುಪ್ರೀಂ ಕೋರ್ಟ್ ಹೊರಗೆ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ, ಪ್ರತಿಭಟನೆ ನಡೆಸಿತು. 

- Advertisement -

ಪ್ರಶಾಂತ್ ಅವರಿಗೆ ನ್ಯಾಯ ದೊರಕುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಸಂದೇಶಗಳು ಹರಿದಾಡಿದವು. ಇತ್ತೀಚೆಗೆ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಫೈಝ್ ಅಹಮದ್ ಫೈಝ್ ಎಂಬವರು ಬರೆದ ಉರ್ದು ಕವಿತೆ ‘ಹಮ್ ದೇಕೇಂಗೆ’ ಭಾರೀ ಸುದ್ದಿಯಾಗಿತ್ತು. ಈಗ ಅದೇ ಕವಿತೆಯ ಶೀರ್ಷಿಕೆ ‘ಹಮ್ ದೇಕೇಂಗೆ’ ಪ್ರಶಾಂತ್ ಭೂಷಣ್ ವಿಷಯದಲ್ಲೂ ಮತ್ತೊಮ್ಮೆ ಸುದ್ದಿ ಮಾಡಿದೆ.

ಮತ್ತೊಂದು ನ್ಯಾಯಪೀಠದಿಂದ ತಮ್ಮ ಪ್ರಕರಣ ವಿಚಾರಣೆ ನಡೆಯಬೇಕೆಂಬ ಪ್ರಶಾಂತ್ ಭೂಷಣ್ ರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಕೊರ್ಟ್ ಮತ್ತು ಸಿಜೆಐ ಎಸ್ ಎ ಬೋಬ್ಡೆ ವಿರುದ್ಧ ಲಾಕ್ ಡೌನ್ ವೇಳೆ ಪ್ರಶಾಂತ್ ಭೂಷಣ್ ಮಾಡಿದ್ದ ಎರಡು ಟ್ವೀಟ್ ಗಳು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರೊಬ್ಬರ ದುಬಾರಿ ಬೈಕ್ ನಲ್ಲಿ ಸಿಜೆಐ ಸವಾರಿ ಮಾಡಿದ್ದುದನ್ನು ಟೀಕಿಸಿ ಭೂಷಣ್ ಟ್ವೀಟ್ ಮಾಡಿದ್ದರು. ಅಲ್ಲದೆ, ನ್ಯಾಯಾಂಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಪ್ರಶ್ನೆಗಳನ್ನೆತ್ತಿದ್ದರು. ನ್ಯಾಯಾಂಗ ನಿಂದನೆ ವಿಷಯದಲ್ಲಿ ಪ್ರಶಾಂತ್ ಭೂಷಣ್ ಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ 1,800ಕ್ಕೂ ಅಧಿಕ ನ್ಯಾಯವಾದಿಗಳು ಅವರಿಗೆ ಬೆಂಬಲ ಸೂಚಿಸಿ ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ.



Join Whatsapp