ಉ.ಪ್ರ. | ವೈದ್ಯಕೀಯ ವಿದ್ಯಾರ್ಥಿನಿಯ ನಿಗೂಢ ಸಾವು | ವೈದ್ಯ ವಶಕ್ಕೆ

Prasthutha|

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ದೆಹಲಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ನಿಗೂಢ ಸಾವು ಸಂಭವಿಸಿದೆ. ಯುವತಿಯ ಮೃತದೇಹದಲ್ಲಿ ಗಾಯಗಳಾಗಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಕ್ರಿಮಿನಲ್ ಗಳು ಅಟ್ಟಹಾಸ ಮೆರೆಯುತ್ತಿರುವ ಉತ್ತರ ಪ್ರದೇಶದಲ್ಲಿ ಸಾಕಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಇದೀಗ ಈ ಪ್ರಕರಣ ಮತ್ತೊಮ್ಮೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶ ಹುಟ್ಟುಹಾಕುವಂತೆ ಮಾಡಿದೆ. ವಿದ್ಯಾರ್ಥಿನಿಯ ಸಾವಿಗೆ ಸಂಬಂಧಿಸಿ, ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ವೈದ್ಯರೊಬ್ಬರನ್ನು ವಶಕ್ಕೆ ಪಡೆಯಲಾಗಿದೆ.

- Advertisement -

ಆಗ್ರಾದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಅಪಹರಣ ಪ್ರಕರಣ ದಾಖಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ವಿದ್ಯಾರ್ಥಿನಿ ಅಧ್ಯಯನ ನಡೆಸುತ್ತಿದ್ದ ಕಾಲೇಜಿನಿಂದ ಕೆಲವು ಕಿ.ಮೀ.ಗಳ ದೂರದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಯುವತಿಗೆ ವೈದ್ಯರೊಬ್ಬರು ಕಿರುಕುಳ ನೀಡುತ್ತಿದ್ದರು ಮತ್ತು ಬೆದರಿಕೆಯನ್ನೂ ಒಡ್ಡಿದ್ದರು ಎಂದು ಆಕೆಯ ಕುಟುಂಬಸ್ಥರು ಆಪಾದಿಸಿದ್ದಾರೆ. ವಿದ್ಯಾರ್ಥಿನಿಯ ದೇಹದ ತಲೆ ಹಾಗೂ ಕುತ್ತಿಗೆಗಳಲ್ಲಿ ಗಾಯಗಳಾಗಿವೆ. ಹತ್ತಿರದ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಮೂಡಿಸುವ ಹಲವು ಭೀಕರ ಘಟನೆಗಳು ವರದಿಯಾಗಿವೆ. ಇದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಪ್ರತಿಪಕ್ಷಗಳಿಗೆ ವಾಗ್ದಾಳಿ ನಡೆಸಲು ಅಸ್ತ್ರವನ್ನು ನೀಡಿದಂತಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್ ಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಆ.10ರಂದು ಬುಲಂದ್ ಶಹರ್ ನಲ್ಲಿ ಸುದೀಕ್ಷಾ ಎಂಬ ಪ್ರತಿಭಾನ್ವಿತ ವಿದ್ಯಾರ್ಥಿನಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಳು, ಬೈಕ್ ನಲ್ಲಿ ಹೋಗುವಾಗ ಕೆಲವು ದುಷ್ಕರ್ಮಿಗಳು ಅವರಿಗೆ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇನ್ನೊಂದೆಡೆ ಹಾಪುರದಲ್ಲಿ ಆರು ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಲಾಗಿತ್ತು. ಲಖೀಂಪುರ ಖೇರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳನ್ನು ಭೀಕರವಾಗಿ ಅತ್ಯಾಚಾರ ನಡೆಸಿ, ಆಕೆಯ ನಾಲಿಗೆ ಕತ್ತರಿಸಿ, ಕಣ್ಣು ಕಿತ್ತು ಹತ್ಯೆ ಮಾಡಿದ್ದುದು ದೇಶವನ್ನೇ ಬೆಚ್ಚಿಬೀಳಿಸಿತ್ತು.

Join Whatsapp