ಹದಿನಾರು ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಲ್ಪಮಟ್ಟಿನ ಸಡಿಲಿಕೆ ಮಾಡಲಾಗಿದೆ.
ಅಗತ್ಯ ವಸ್ತುಗಳ ಖರೀದಿ ಅವಧಿಯನ್ನು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಉಳಿದಂತೆ ಎಲ್ಲಾ ನಿರ್ಬಂಧಗಳು ಮುಂದುವರಿಯಲಿದ್ದು, ಮುಂದಿನ ವಾರ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಈ ವಿಷಯ ತಿಳಿಸಿದರು.
ಜಿಲ್ಲೆಯಾದ್ಯಂತ ರಾತ್ರಿ.7ರಿಂದ ಬೆ.7ರವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯದ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆ. 7ರವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ. ಜಿಲ್ಲೆಯಾದ್ಯಂತ ಯಾವುದೇ ಬಸ್ ಸಂಚಾರಕ್ಕೂ ಅನುಮತಿ ಇಲ್ಲ ಎಂದು ಅವರು ತಿಳಿಸಿದರು.
ಸೋಮವಾರದಿಂದ ಜುಲೈ 5ರ ಸಂಜೆಯವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಬೀದಿ ಬದಿ ವ್ಯಾಪಾರ ಮತ್ತು ಮದ್ಯ ಪಾರ್ಸೆಲ್ ಗಷ್ಟೇ ಮಧ್ಯಾಹ್ನ 1ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಪಾರ್ಕ್ ಮತ್ತು ಸಾರ್ವಜನಿಕ ಉದ್ಯಾನ ತೆರೆಯಲು ಅವಕಾಶ ಇಲ್ಲ. ನಿರ್ಮಾಣ ಚಟುವಟಿಕೆ ಮತ್ತು ಸ್ಟೀಲ್, ಸಿಮೆಂಟ್ ಅಂಗಡಿಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಅಟೋ ರಿಕ್ಷಾ ಮತ್ತು ಟ್ಯಾಕ್ಸಿ ಇಬ್ಬರು ಪ್ರಯಾಣಿಕರ ಸಹಿತ ಸಂಚರಿಸಬಹುದು ಎಂದು ಅವರು ತಿಳಿಸಿದರು.
ಕೆಎಸ್ಆರ್ ಟಿಸಿ ಬಸ್ಸು ಜಿಲ್ಲೆಯಿಂದ ಹೊರಗೆ ಹಾಗೂ ಒಳಗೆ ಸಂಚರಿಸುವುದಿಲ್ಲ. ಹೊರ ಜಿಲ್ಲೆಯಿಂದಲೂ ಕೆಎಸ್ ಆರ್ ಟಿಸಿ ಬಸ್ಸು ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.