ಟಿಕೆಟ್​ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದ ಪೊಲೀಸರು | ದಂಡ ಕೇಳಿದಾಗ ಹೇಳಿದ್ದೇನು ಗೊತ್ತೇ?

Prasthutha|

ಲಖನೌ: ರೈಲಿನಲ್ಲಿ ಟಿಕೆಟ್​ ಇಲ್ಲದೆ ಪ್ರಯಾಣಿಸಿ 20 ಪೊಲೀಸರು ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ)ನ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

- Advertisement -

ದೆಹಲಿಯಿಂದ ಬಿಹಾರದ ರಾಜ್​ಗಿರ್​ಗೆ ತೆರಳುತ್ತಿದ್ದ ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಟಿಟಿಇ ಬರೇಲಿ ಮತ್ತು ಲಖನೌ ನಡುವೆ ಟಿಕೆಟ್​ ಪರೀಕ್ಷಿಸಲು ಬಂದಾಗ 20 ಪೊಲೀಸರು ಸಿಕ್ಕಿಬಿದ್ದಿದ್ದಾರೆ.

ಟಿಟಿಇ ಪೊಲೀಸರ ಬಳಿ ದಂಡ ಪಾವತಿಸಲು ಕೇಳಿಕೊಂಡಾಗ ಪೊಲೀಸರು ಧರಿಸಿದ್ದ ಯೂನಿಫಾರ್ಮ್​ ತೋರಿಸಿ ಪೊಲೀಸ್​ ಇಲಾಖೆಗೆ ಕಪ್ಪು ಮಸಿ ಬಳಿದಿದ್ದಾರೆ. “ಒಂದು ವೇಳೆ ನನ್ನನ್ನು ಹಿಡಿದರೆ ನಿಮ್ಮ ವಿರುದ್ಧ ಅನೇಕ ಪ್ರಕರಣಗಳನ್ನು ಬರೆದು ನೀವು ಜೀವನ ಪೂರ್ತಿ ನನ್ನನ್ನು ನೆನಪಿಸಿಕೊಳ್ಳುವಂತೆ ಮಾಡುತ್ತೇನೆ” ಎಂದು ಓರ್ವ ಪೊಲೀಸ್​ ಟಿಟಿಇಗೆ ಧಮ್ಕಿ ಹಾಕಿದ್ದಾರೆ. “ನೀವು ದಂಡವನ್ನು ಪಡೆದರೆ, ನೀವೇನು ರೈಲ್ವೆ ಸಚಿವರಾಗುವುದಿಲ್ಲ” ಎಂದು ಮತ್ತೊರ್ವ ಟಿಟಿಇ ಕುರಿತು ವ್ಯಂಗ್ಯವಾಡಿದ್ದಾರೆ.

- Advertisement -

ಇಡೀ ಘಟನೆಯನ್ನು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಭಾರಿ ವೈರಲ್​ ಆಗಿದೆ.

ಟಿಟಿಇ ಪೊಲೀಸರ ಬೆದರಿಕೆಗಳಿಗೆ ಬಗ್ಗದೆ ಎಲ್ಲರಿಂದಲೂ ದಂಡವನ್ನು ವಸೂಲಿ ಮಾಡಿ ಅಲ್ಲಿಂದ ಕಳಿಹಿಸಿದ್ದಾರೆ. ರೈಲಿನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರು ಟಿಕೆಟ್​ ಇಲ್ಲದೆ ಪ್ರಯಾಣಿಸುತ್ತಿದ್ದರು. ಅದರಲ್ಲಿ 20 ಮಂದಿ ಪೊಲೀಸರಾಗಿದ್ದರು. ಎಲ್ಲರಿಂದ ಒಟ್ಟು 22,350 ರೂ. ದಂಡವನ್ನು ಸಂಗ್ರಹಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್​ ಆಗಿದ್ದು, ಪೊಲೀಸರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಪ್ಪು ಮಾಡುವ ಜನರಿಗೆ ಬುದ್ಧಿ ಹೇಳಬೇಕಾದ ಪೊಲೀಸರೇ ಹೀಗೆ ಮಾಡಿದರೆ ನಾವು ಯಾರನ್ನೂ  ನಂಬಲು ಸಾಧ್ಯವಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Whatsapp