ಜಾನುವಾರು ಕಳ್ಳಸಾಗಣೆ ಶಂಕೆಯ ಮೇಲೆ ಮೂವರು ಮುಸ್ಲಿಮ್ ಯುವಕರನ್ನು ಥಳಿಸಿ ಕೊಂದ ದುಷ್ಕರ್ಮಿಗಳು

Prasthutha|

ಜಾನುವಾರು ಕಳ್ಳಸಾಗಾಣಿಕೆದಾರರು ಎಂದು ಆರೋಪಿಸಿ ಮೂವರು ಮುಸ್ಲಿಮ್ ಯುವಕರನ್ನು ತೀವ್ರವಾಗಿ ಥಳಿಸಿ ಹತ್ಯೆ ಮಾಡಿರುವ ದಾರುಣ ಘಟನೆ ತ್ರಿಪುರಾದ ಖೋವಯಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಸೆಪಾಹಿಜಲಾ ಜಿಲ್ಲೆಯ ಸೋನಮುರಾ ನಿವಾಸಿಗಳಾದ ಜಾಯೆದ್ ಹುಸೇನ್ (28), ಬಿಲಾಲ್ ಮಿಯಾ (30) ಮತ್ತು ಸೈಫುಲ್ ಇಸ್ಲಾಂ (18) ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ ಎಂದು ಖೋವಾಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.


ಭಾನುವಾರ ಬೆಳಿಗ್ಗೆ, ಮೂವರು ಐದು ದನಗಳೊಂದಿಗೆ ವಾಹನದಲ್ಲಿ ಹೋಗುತ್ತಿದ್ದಾಗ ನಮಂಜೋಯ್ಪಾರ ಗ್ರಾಮಸ್ಥರು ಅವರನ್ನು ನೋಡಿದ್ದಾರೆ.
ಈ ವೇಳೆ ಗುಂಪು 10 ಕಿಲೋಮೀಟರ್ ದೂರದವರೆಗೆ ವಾಹನನನ್ನು ಹಿಂಬಾಲಿಸಿ ಉತ್ತರ ಮಹಾರಾನಿಪುರದಲ್ಲಿ ವಾಹನ ತಡೆದಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಗುಂಪು ಜಾಯೆದ್ ಮತ್ತು ಬಿಲಾಲ್ ಮೇಲೆ ಬರ್ಬರ ಹಲ್ಲೆ ನಡೆಸಿದೆ. ಅಲ್ಲಿಂದ ಸೈಫುಲ್ ಅವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಆದರೆ ಮುಂಗಿಯಾಕಾಮಿ ಎಂಬಲ್ಲಿ ದುಷ್ಕರ್ಮಿಗಳಿಗೆ ಅವರು ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಿಗೂ ಗುಂಪು ಯದ್ವಾತದ್ವ ಹಲ್ಲೆ ನಡೆಸಿದೆ.

- Advertisement -


ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ನಂತರ ಅಗರ್ತಲಾದ ಗೋವಿಂದ್ ವಲ್ಲಭ್ ಪಂತ್ (ಜಿಬಿಪಿ) ಆಸ್ಪತ್ರೆಗೆ ಕೊಂಡೊಯ್ಯುವಾಗ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಪಾಹೋವರ್ ಮತ್ತು ಕಾಯನ್‌ಪುರ ಪೊಲೀಸ್ ಠಾಣೆಗಳಲ್ಲಿ ಜಾನುವಾರು ಕಳ್ಳಸಾಗಣೆ ಮತ್ತು ಗುಂಪು ಹತ್ಯೆ ಕುರಿತು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಫೆಬ್ರವರಿಯಲ್ಲಿ ಧಲೈ ಜಿಲ್ಲೆಯ ಲಾಲ್‌ಚೇರಿ ಗ್ರಾಮದಲ್ಲಿ ಲಾರಿ ಚಾಲಕನನ್ನು ಕೆಲವು ಅಪರಿಚಿತ ವ್ಯಕ್ತಿಗಳು ಥಳಿಸಿದ ಘಟನೆ ನಡೆದಿತ್ತು. 2020ರ ಡಿಸೆಂಬರ್‌ನಲ್ಲಿ, ಕಳ್ಳತನದ ಶಂಕೆಯ ಮೇಲೆ 21 ವರ್ಷದ ಯುವಕನನ್ನು ಅಗರ್ತಲಾದಲ್ಲಿ ಗುಂಪು ಹತ್ಯೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.



Join Whatsapp