ಜಮ್ಮು-ಕಾಶ್ಮೀರ | ವಿಧಾನಸಭಾ ಚುನಾವಣೆ ನಡೆಸುವ ಲಕ್ಷಣವಿಲ್ಲ | ಸ್ಥಳೀಯಾಡಳಿತದ ಹೊಸ ವ್ಯವಸ್ಥೆ

Prasthutha|

ಶ್ರೀನಗರ : ರಾಜ್ಯದ ಸ್ಥಾನಮಾನ ಕಳೆದುಕೊಂಡು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಜಮ್ಮು-ಕಾಶ್ಮೀರದಲ್ಲಿ ಸದ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯುವ ಲಕ್ಷಣಗಳಿಲ್ಲ. ನೇರವಾಗಿ ಸ್ಥಳೀಯಾಡಳಿತ ಚುನಾವಣೆಗಳನ್ನು ನಿರ್ವಹಿಸಿ, ಆ ಮೂಲಕ ಸ್ಥಳೀಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಲಕ್ಷಣಗಳು ಕಂಡು ಬಂದಿದೆ.

- Advertisement -

ಮೆಹಬೂಬ ಮುಫ್ತಿ ಸೇರಿದಂತೆ ಎಲ್ಲ ಹಿರಿಯ ನಾಯಕರನ್ನು ಬಿಡುಗಡೆಗೊಳಿಸಿದ ಬಳಿಕ, ಶನಿವಾರ ಕೇಂದ್ರ ಜಮ್ಮು-ಕಾಶ್ಮೀರ ಪಂಚಾಯತಿ ರಾಜ್ ಕಾಯ್ದೆ, 1989ರ ತಿದ್ದುಪಡಿ ಮಾಡಿದೆ. ಕೇಂದ್ರಾಡಳಿತ ಪ್ರದೇಶದ ಜಿಲ್ಲೆಗಳಲ್ಲಿ ಜಿಲ್ಲಾ ಅಭಿವೃದ್ಧಿ ಕೌನ್ಸಿಲ್ ಗಳನ್ನು ರಚಿಸುವ ಮತ್ತು ಅವುಗಳ ಸದಸ್ಯರನ್ನು ನೇರವಾಗಿ ಮತದಾರರಿಂದ ಚುನಾವಣೆ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಪ್ರತಿಯೊಂದು ಜಿಲ್ಲೆಯನ್ನು 14 ವಿಭಾಗಗಳಾಗಿ ವಿಭಜಿಸಲಾಗುತ್ತದೆ. ಅವುಗಳಿಗೆ ಚುನಾವಣೆಗಳು ನಡೆಯುತ್ತದೆ ಮತ್ತು ಅದರಲ್ಲಿ ಆಯ್ಕೆಯಾದ ಸದಸ್ಯರು ಕೌನ್ಸಿಲ್ ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಜಿಲ್ಲಾ ಅಭಿವೃದ್ಧಿ ಬೋರ್ಡ್ ಗಳ ಸ್ಥಾನದಲ್ಲಿ ಇನ್ನು ಮುಂದೆ ಜಿಲ್ಲಾ ಅಭಿವೃದ್ಧಿ ಕೌನ್ಸಿಲ್ ಇರಲಿದೆ. ಈ ಹಿಂದಿನ ಬೋರ್ಡ್ ಗಳಲ್ಲಿ ಕ್ಯಾಬಿನೆಟ್ ಸಚಿವರು, ಸ್ಥಳೀಯ ಶಾಸಕರು, ಎಂಎಲ್ ಸಿಗಳು ಮತ್ತು ಸಂಸದರು ಭಾಗವಹಿಸಬಹುದಾಗಿತ್ತು.

- Advertisement -

ಇದು ಜಮ್ಮು-ಕಾಶ್ಮೀರದ ಜನತೆಗೆ ಸಾಮೂಹಿಕ ಧ್ವನಿಯಿಲ್ಲದಂತೆ ಮಾಡುವ ಉದ್ದೇಶ ಹೊಂದಿದೆ. ಅಂತಿಮ ಅಧಿಕಾರ ಆಡಳಿತಾಧಿಕಾರಿಗಳಲ್ಲೇ ಉಳಿಯಲಿದೆ ಎಂದು ಪಿಡಿಪಿ ನಾಯಕ ನಯೀಂ ಅಖ್ತರ್ ಹೇಳಿದ್ದಾರೆ. ಶಾಸಕರ ಪಾತ್ರ ಕುಗ್ಗಿಸುವಲ್ಲಿ ಇದು ದೀರ್ಘಕಾಲೀನ ಪರಿಣಾಮ ಬೀರಲಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್ ಮುಖಂಡರೊಬ್ಬರು ಹೇಳಿದ್ದಾರೆ.

Join Whatsapp