ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ 2020 ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ್ ಮಿತ್ತಬೈಲ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ಪರವಾಗಿ ಹಿರಿಯ ವಕೀಲ ಜಮೀರ್ ಪಾಷ ವಿಚಾರಣೆಗೆ ಹಾಜರಾಗಿದ್ದು, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಫೆಬ್ರವರಿ 26ರಂದು ಅರ್ಜಿ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದೂಮ್ ನೇತೃತ್ವದ ಪೀಠದಲ್ಲಿ ವಿಚಾರಣೆಗೆ ಬರಲಿದೆ.
ಸುಗ್ರೀವಾಜ್ಞೆಯ ಸೆಕ್ಷನ್ 8ರಡಿ ಸಬ್ ಇನ್ಸ್ ಪೆಕ್ಟರ್ ಮಟ್ಟದ ಅಧಿಕಾರಿಗೆ ಶೋಧ ನಡೆಸಲು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಿಯಮವನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ಸುಗ್ರೀವಾಜ್ಞೆಯ ಸೆಕ್ಷನ್ 12ರಲ್ಲಿ ತಪ್ಪಿತಸ್ಥರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. 3 ವರ್ಷಕ್ಕಿಂತ ಕಡಿಮೆ ಇಲ್ಲದ ಜೈಲು ಶಿಕ್ಷೆ, 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಕೂಡ ಅಸಮರ್ಪಕವಾಗಿದೆ. ಅದೇ ರೀತಿ ಗೋವುಗಳ ರಕ್ಷಣೆಗೆ ಸಹಕಾರ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವಂತಿಲ್ಲ ಎಂಬ ನಿಯಮ ಅರಾಜಕತೆಗೆ ಕಾರಣವಾಗಲಿದ್ದು, ದುಷ್ಕರ್ಮಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ 1964ರ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ಕೂಡ ಜಾನುವಾರು ಸಂರಕ್ಷಣೆಗೆ ಪೂರಕವಾಗಿದೆ. ಆದ್ದರಿಂದ ಈ ಕಾಯ್ದೆಯ ಜಾಗದಲ್ಲಿ ಹೊರಡಿಸಿರುವ ಸುಗ್ರೀವಾಜ್ಞೆ ಕಾನೂನುಬಾಹಿರವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಪಿಐಎಲ್
Prasthutha|