ಕೃಷಿ ಕಾಯ್ದೆ ವಿರೋಧಿಸಿ ಫೆಬ್ರವರಿ 1ರಂದು ಸಂಸತ್ ಭವನಕ್ಕೆ ರೈತರಿಂದ ಮುತ್ತಿಗೆ

Prasthutha|

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳುಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ. ಇದರ ಜೊತೆಗೆ ಫೆಬ್ರವರಿ 1 ರಂದು ಸಂಸತ್ ಭವನಕ್ಕೆ ವಿವಿಧ ಪ್ರದೇಶಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ನಾಯಕ ದರ್ಶನ್ ಪಾಲ್ ಸೋಮವಾರ ಪ್ರಕಟಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಳೆದ ವರ್ಷ ನವೆಂಬರ್ 26 ರಿಂದ ದೆಹಲಿಯ ಹಲವು ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಆದರೆ, ತಿಂಗಳ ಅಂತ್ಯದ ವೇಳೆಗೆ ತಮ್ಮ ಬೇಡಿಕೆಗಳು ಈಡೇರದಿದ್ದರೆ, ಫೆಬ್ರವರಿ 1 ರಂದು ವಿವಿಧ ಪ್ರದೇಶಗಳಿಂದ ದೆಹಲಿಯ ಸಂಸತ್ ಭವನದವರೆಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ದರ್ಶನ್ ಪಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ 2021-22ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಿದೆ.
ಈ ತಿಂಗಳ 29 ರಿಂದ ಸಂಸತ್ತು ಬಜೆಟ್ ಅಧಿವೇಶನ ಆರಂಭಗೊಳ್ಳಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ರೈತರು ಸಂಸತ್ ಗೆ ಪಾದಯಾತ್ರೆ ನಡೆಸಲಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಯಾವ ರೀತಿ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Join Whatsapp