ಗಲಭೆ ಪೀಡಿತ ಈಶಾನ್ಯ ದೆಹಲಿಯಲ್ಲಿ ಬಿಜೆಪಿಯಿಂದ ರಥಯಾತ್ರೆ

Prasthutha|

- Advertisement -

ಗಲಭೆ ಪೀಡಿತ ಪ್ರದೇಶವಾದ ಈಶಾನ್ಯ ದೆಹಲಿಯಲ್ಲಿ ಬಿಜೆಪಿ ರಥಯಾತ್ರೆ ನಡೆಸಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಈಶಾನ್ಯ ದೆಹಲಿಯ ಸಂಸದ ಮನೋಜ್ ತಿವಾರಿ ತಮ್ಮ ಕ್ಷೇತ್ರದಲ್ಲಿ ರಥಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ‘ಶ್ರೀ ರಾಮ ಜನ್ಮಭೂಮಿ ನಿರ್ಮಾಣ್ ನಿಧಿ ಅಭಿಯಾನ್’ ಎಂದು ಕರೆಯಲ್ಪಡುವ ಈ ರಥ ಯಾತ್ರೆಯು ತನ್ನ ಜನ್ಮದಿನವಾದ ಫೆಬ್ರವರಿ 1 ರಂದು ಪ್ರಾರಂಭಿಸಲಿದ್ದೇವೆ ಎಂದು ಬಿಜೆಪಿ ಮಾಜಿ ಅಧ್ಯಕ್ಷರೂ ಆದ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

“ನಾನು ರಾಮ ಮಂದಿರ ನಿರ್ಮಾಣಕ್ಕಾಗಿ ಸಮಾಜದ ಎಲ್ಲಾ ವರ್ಗದ ಜನರಿಂದಲೂ ದೇಣಿಗೆ ಸ್ವೀಕರಿಸಲಿದ್ದೇನೆ. ಅಲ್ಪಸಂಖ್ಯಾತ ಸಮುದಾಯದ ಬಹಳಷ್ಟು ಜನರು ದೇಣಿಗೆ ನೀಡಲು ಆಸಕ್ತಿ ಹೊಂದಿದ್ದಾರೆ. ನಾನು ಅವರ ಮನೆ ಮತ್ತು ಅಂಗಡಿಗಳಿಗೆ ಭೇಟಿ ನೀಡಲಿದ್ದೇನೆ” ಎಂದು ತಿವಾರಿ ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ 53 ಜನರನ್ನು ಬಲಿ ಪಡೆದ ಮುಸ್ಲಿಂ ವಿರೋಧಿ ಹಿಂಸಾಚಾರ ಈಶಾನ್ಯ ದೆಹಲಿಯಲ್ಲಿ ನಡೆದಿತ್ತು.

- Advertisement -

ಮೊದಲನೇ ದಿನ ಈ ಯಾತ್ರೆಯು ತಿಮಾರ್‌ಪುರದಿಂದ ಪ್ರಾರಂಭವಾಗಿ ಚಾಂದ್ ಬಾಗ್ ಮತ್ತು ಯಮುನಾ ವಿಹಾರ್ ತಲುಪಲಿದೆ ಎಂದು ಬಿಜೆಪಿ ಮುಖಂಡ ಮತ್ತು ತಿವಾರಿ ಅವರ ಸಹಾಯಕ ನೀಲಕಾಂತ್ ಬಕ್ಷಿ ಹೇಳಿದ್ದಾರೆ. ಗಲಭೆ ಪೀಡಿತ ಸ್ಥಳಗಳಲ್ಲಿ ಚಾಂದ್ ಬಾಗ್ ಕೂಡ ಒಂದು.

ಒಂಬತ್ತು ಆಸನಗಳ ಟೆಂಪೊ ಟ್ರಾವೆಲರ್ ಸಹ ಯಾತ್ರೆಗಾಗಿ ಸಿದ್ಧಪಡಿಸಲಾಗಿದೆ. ರಥಯಾತ್ರೆಯ ವ್ಯಾನ್ ಅನ್ನು ರಾಮ, ರಾಮ ಮಂದಿರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಚಿತ್ರಗಳಿಂದ ಅಲಂಕರಿಸಲಾಗುವುದು. ಯಾತ್ರೆ ಹಾದುಹೋಗುವ ಸ್ಥಳಗಳಿಂದ ಗರಿಷ್ಠ ದೇಣಿಗೆ ಪಡೆಯಲು ತಾವು ಪ್ರಯತ್ನಿಸಲಿದ್ದೇವೆ ಎಂದು ಬಕ್ಷಿ ಹೇಳಿದ್ದಾರೆ.

Join Whatsapp