“ಗಟಾರ ಸ್ವಚ್ಛಗೊಳಿಸುವ ದಲಿತೆಗೆ ಪ್ರತಿಭಟಿಸುವ ಹಕ್ಕಿಲ್ಲ” ! ನೌದೀಪ್ ಕೌರ್ ಬಹಿರಂಗಪಡಿಸಿದ ಪೊಲೀಸ್ ಕ್ರೌರ್ಯದ ಭಯಾನಕ ಮುಖ !

Prasthutha|

- Advertisement -

ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೌದೀಪ್ ಕೌರ್ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ನೀಡಿದ ಕೆಲ ದಿನಗಳ ನಂತರ 24ವರ್ಷದ ಕೌರ್ ಜೈಲಿನಲ್ಲಿದ್ದಾಗ ತಾನು ಅನುಭವಿಸಿದ ಪೊಲೀಸ್ ದೌರ್ಜನ್ಯದ ಕುರಿತು ಮಾತಾಡಿದ್ದಾರೆ. “ಪೊಲೀಸರು ನನ್ನನ್ನು ದೈಹಿಕವಾಗಿ ಹಿಂಸಿಸಿದ್ದಾರೆ ಮತ್ತು ಜಾತಿಯ ಹೆಸರಲ್ಲಿ ನನ್ನನ್ನು ತುಂಬಾನೇ ನೋಯಿಸಿದ್ದಾರೆ” ಎಂದು ಅವರು ಬಹಿರಂಗಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಕಳೆದ 46 ದಿನಗಳಲ್ಲಿ ತಾನು ಅನುಭವಸಿದ ಆಘಾತಕಾರಿ ಅನುಭವವನ್ನು ಹಂಚಿಕೊಂಡ ಅವರು “ನನ್ನನ್ನು ಪೊಲೀಸರು ಹಿಂಸಿಸುವಾಗ ನೀನು ಒಬ್ಬ ದಲಿತೆ ಎಂಬುವುದು ನೆನಪಿರಲಿ ಎಂದು ಹೇಳುತ್ತಲೇ ಇದ್ದರು . ನಿಮ್ಮ ಕೆಲಸ ಗಟಾರನ್ನು ಸ್ವಚ್ಛಗೊಳಿಸುವುದು, ದೊಡ್ಡ ಜನರ ವಿರುದ್ಧ ಹೋರಾಡುವ ಹಕ್ಕನ್ನು ನಿಮಗೆ ನೀಡಿದವರಾರು? ಎಂದೆಲ್ಲಾ ನಿಂದಿಸಿ ನನ್ನನ್ನು ಪ್ರಶ್ನಿಸಲಾಗಿತ್ತು” ಎಂದವರು ಹೇಳಿದ್ದಾರೆ.

- Advertisement -

ಜೈಲಿನಲ್ಲಿರುವ ಇತರ ಮಹಿಳಾ ಖೈದಿಗಳ ಸ್ಥಿತಿ ಇದಕ್ಕಿಂತಲೂ ಭಯಾನಕವಾಗಿದೆ ಎಂದು ಹೇಳಿದ ನೌದೀಪ್ ಕೌರ್ “ 200ಕ್ಕೂ ಹೆಚ್ಚು ಬಡ ಮತ್ತು ಹಿಂದುಳಿದ ಸಮುದಾಯಕ್ಕೆ ಸೇರಿದ ಮಹಿಳೆಯರು ಸಣ್ಣಸಣ್ಣ ಆರೋಪಗಳಿಗಾಗಿ ಬಂಧಿಸ್ಪಟ್ಟು ಜೈಲಿನಲ್ಲಿ ಹಿಂಸಿಸಲ್ಪಡುತ್ತಿದ್ದಾರೆ” ಎಂದು ಹೇಳಿದರು.

ಫೆಬ್ರವರಿ 27 ರಂದು ಜಾಮೀನು ಪಡೆದ ನೌದೀಪ್ ಕೌರ್ ಅವರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳಲ್ಲಿ ಸಹ ಆರೋಪಿ ಆಗಿರುವ ಶಿವ ಕುಮಾರ್ ಅವರ ಬಿಡುಗಡೆಗಾಗಿ ಧ್ವನಿ ಎತ್ತಬೇಕೆಂದು ಅವರು ಜನರನ್ನು ಒತ್ತಾಯಿಸಿದರು. ನೌದೀಪ್ ಅವರನ್ನು ಬಂಧಿಸಿದ ಕೆಲವೇ ದಿನಗಳ ನಂತರ ಶಿವ ಕುಮಾರ್ ಅವರನ್ನು ಬಂಧಿಸಲಾಗಿತ್ತು. “ಶಿವ ಕುಮಾರ್ ಇಂದಿಗೂ ಜೈಲಿನಲ್ಲಿದ್ದಾರೆ. ಅವರು ನಿರಪರಾಧಿ. ಆತನನ್ನು ಪೊಲೀಸರು ತೀವ್ರವಾಗಿ ಥಳಿಸಿದ್ದಾರೆ, ಅವರ ಮೂಳೆಗಳು ಮುರಿದಿವೆ. ಅವರ ಜಾಮೀನುಗಾಗಿ ಧ್ವನಿ ಎತ್ತಬೇಕೆಂದು ನಾನು ಜನರನ್ನು ಕೋರುತ್ತೇನೆ” ಎಂದು ಪತ್ರಿಕಾಗೋಷ್ಠಿಯಲ್ಲಿ ನೌದೀಪ್ ಕೌರ್ ತಿಳಿಸಿದರು.

ಚಂಡೀಗಡ ಮೂಲದ ಆಸ್ಪತ್ರೆಯೊಂದು ನಡೆಸಿದ ಕುಮಾರ್ ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಕೈ ಮತ್ತು ಕಾಲಿಗೆ ಎರಡು ಮುರಿತಗಳು ಮತ್ತು ಅವರ ಕಾಲ್ಬೆರಳಿನಲ್ಲಿ ಕೆಲವು ಮುರಿದ ಉಗುರುಗಳು ಕಂಡುಬಂದಿವೆ ಎನ್ನಲಾಗಿದೆ.

Join Whatsapp