ನವದೆಹಲಿ: ಕೋವಿಡ್ ನಿಂದ ಮೃತಪಟ್ಟವರ ಕುಟುಂಬದವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ನೈಸರ್ಗಿಕ ವಿಪತ್ತುಗಳಿಂದ ಮೃತಪಟ್ಟರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಆದ್ದರಿಂದ ಕೋವಿಡ್ ನಿಂದ ಮೃತಪಟ್ಟವರಿಗೆ ಈ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನಿನ್ನೆ ತಡರಾತ್ರಿ ಸಲ್ಲಿಸಿದ 183 ಪುಟಗಳ ಪ್ರಮಾಣಪತ್ರದಲ್ಲಿ ಇದನ್ನು ಸರ್ಕಾರ ಸ್ಪಷ್ಟಪಡಿಸಿದ್ದು, ಕೋವಿಡ್ ಗೆ ಪರಿಹಾರ ನೀಡಿದರೆ, ಇತರ ಕಾಯಿಲೆಗಳಿಗೂ ನೀಡಬೇಕಾಗುತ್ತದೆ. ಇದು ಕಷ್ಟ ಸಾಧ್ಯ ಎಂದು ಕೇಂದ್ರವು ಪ್ರತಿಪಾದಿಸಿದೆ.
ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಸುಮಾರು 4 ಲಕ್ಷ ಜನರು ದೇಶದಲ್ಲಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಕರ್ನಾಟಕ, ಮಧ್ಯಪ್ರದೇಶದಂತಹ ರಾಜ್ಯಗಳು ಈಗಾಗಲೇ ಬಡ ಕುಟುಂಬದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ್ದರೆ ಅಂತಹ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರವನ್ನು ಘೋಷಿಸಿವೆ. ಆಮ್ಲಜನಕ ಕೊರತೆಯಿಂದ ಕೋವಿಡ್ ಸಾವು ಸಂಭವಿಸಿದ್ದರೆ ದೆಹಲಿ ಸರ್ಕಾರ 5 ಲಕ್ಷ ಪರಿಹಾರವನ್ನು ನೀಡುವುದಾಗಿ ಘೋಷಿಸಿದೆ.