ಕೊರೋನ ಸರಕಾರ, ಲಾಕ್ಡೌನ್ ಪ್ರತಿಪಕ್ಷ

Prasthutha|

-ರಮೇಶ್ ಎಸ್.ಪೆರ್ಲ

- Advertisement -

 ಸರಕಾರ ಎಂಬ ವ್ಯವಸ್ಥೆಗೆ ಭ್ರಷ್ಟಾಚಾರವೆಂಬ ಕೊರೋನ ಬಡಿದಂತಿದೆ. ಈ ವೈರಸ್ ನಿಯಂತ್ರಣಕ್ಕೆ ಹಲವು ಕ್ರಮಗಳಿದ್ದರೂ ವ್ಯವಸ್ಥೆಯಲ್ಲಿ ಉಳ್ಳವರು ಅದನ್ನು ಪಾಲಿಸದಿದ್ದರೆ ಪರಿಹಾರ ಕಾಣದ ಕಾಯಿಲೆಯಾಗಿ ಕಾಡುತ್ತದೆ. ಇದರಿಂದ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ ಎಲ್ಲ ರೀತಿಯ ವ್ಯವಹಾರಸ್ಥರಿಗೆ ಮತ್ತು ವತ್ತಿಯವರಿಗೂ ಕೂಡ ಸಮಸ್ಯೆ ತಪ್ಪಿದ್ದಲ್ಲ.

ಕುದುರೆ ವ್ಯಾಪಾರದಿಂದ ಅಧಿಕಾರ ಹಿಡಿದ ಸರಕಾರವೊಂದರಿಂದ ಹೆಚ್ಚೇನು ನಿರೀಕ್ಷೆ ಮಾಡುವಂತಿಲ್ಲ. ಭ್ರಷ್ಟಾಚಾರ ಅದಕ್ಕೊಂದು ದೈನಂದಿನ ಕಾರ್ಯಕ್ರಮ. ಉಪ ಚುನಾವಣೆ ಗೆಲ್ಲುವ ಏಕೈಕ ಗುರಿ ಇರಿಸಿಕೊಂಡು ಬೇಕಾಬಿಟ್ಟಿ ಅನುದಾನ ಘೋಷಣೆ ಆಗುತ್ತಿದೆ. ಸಾಮಾಜಿಕ ನ್ಯಾಯವಾಗಲಿ, ಸ್ಥಾಪಿತ ನಿಯಮಗಳ ಕಡೆಗಣಿಸಿ ಇಂತಹ ಹಣದ ಹೊಳೆ ಹರಿಸಲಾಗುತ್ತಿದೆ.

- Advertisement -

ಕರ್ನಾಟಕ ರಾಜ್ಯದ ಸರಕಾರಿ ವ್ಯವಸ್ಥೆ, ರಾಜಕೀಯ ಎಷ್ಟೊಂದು ಕೆಟ್ಟು ಹೋಗಿದೆ ಅಂದರೆ ಹೆಸರಿಗೊಂದು ಸರಕಾರವಿದೆ. ಅದಕ್ಕೂ ಕೊರೋನ ಕಾಯಿಲೆ ಬಡಿದಂತಿದೆ. ಪ್ರತಿಪಕ್ಷ ಅದಕ್ಕಿಂತಲೂ ಕುಲಗೆಟ್ಟು ಹೋಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಅಂದಾದುಂಬಿ ದರ್ಬಾರ್ ನಡೆಸುತ್ತಿದ್ದರೂ ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಮುಖಂಡರು ಈ ಸೆಖೆ ಕಾಲದಲ್ಲೂ ಕಂಬಳಿ ಹೊದ್ದು ಮಲಗಿದ್ದಂತೆ ವರ್ತಿಸುತ್ತಿದ್ದಾರೆ. ಸರಕಾರದ ವೈಫಲ್ಯದ ವಿರುದ್ಧವಾಗಲಿ, ಕೊರೋನ ಸಂದರ್ಭದಲ್ಲಿ ಕಳಪೆ ನಿರ್ವಹಣೆ ಬಗ್ಗೆಗಾಗಲಿ, ಮಿತಿಮೀರಿದ ಲಂಚಾವಾತಾರ ಹಾಗೂ ಜಾತಿ ರಾಜಕೀಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಯನ್ನಾಗಲಿ, ಜನರಿಗೆ ಇಂತಹ ವಿಚಾರಗಳನ್ನು ಮುಟ್ಟಿಸುವ ಆಂದೋಲನಕ್ಕಾಗಲಿ ಕಾಂಗ್ರೆಸ್ ಎಂಬ ಹಳೆಯ ರಾಜಕೀಯ ಪಕ್ಷ ಮುಂದಾಗಿಲ್ಲ ಎಂಬುದು ವಿಷಾದನೀಯ. ಆಡಳಿತರೂಢ ಭಾರತೀಯ ಜನತಾ ಪಾರ್ಟಿಯ ವೈಫಲ್ಯ ಎಷ್ಟಿದೆಯೋ ಅಷ್ಟೇ ಪ್ರತಿಪಕ್ಷದ ಮುಖಂಡರ ವೈಫಲ್ಯವೂ ಇದೆ.

ಇತ್ತೀಚಿಗಿನ ಸಂಪುಟ ಸಚಿವರ ಬದಲಾವಣೆಯೇ ಆಡಳಿತ ಪಕ್ಷ ನೀತಿಗೆಟ್ಟ ರಾಜಕೀಯಕ್ಕೆ ಉದಾಹರಣೆಯಾಗಿದೆ. ಸರಕಾರ ರಚನೆಯಾಗುವಲ್ಲಿ ನೆರವಾದ ಆಪರೇಷನ್ ಕಮಲದ ಫಲಾನುಭವಿಗಳನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಫಲಾನುಭವಿಗಳು ಕೆಲವರನ್ನು, ಮೂಲ ನಿವಾಸಿ ಬಿಜೆಪಿಗರನ್ನು ಸಚಿವರಾಗಿ ಮಾಡದಿರುವುದಕ್ಕೆ ಅಸಮಾಧಾನ ಮಾತುಗಳು ಕೇಳಿ ಬಂದವು. ಅನಂತರ ನಡೆದ ಖಾತೆ ಹಂಚಿಕೆ ಕೂಡ ಖ್ಯಾತೆ ತೆಗೆಯಲು ಕಾರಣವಾಯಿತು. ಅನಂತರ ಮತ್ತೆ ಇಲಾಖೆಗಳ ಮರುಹಂಚಿಕೆ ಕೂಡ ನಡೆಯಿತು.

ಹೊಸ ಸಚಿವರ ಆಯ್ಕೆ ಮತ್ತು ಖಾತೆ ಹಂಚಿಕೆ ನಿರ್ಧಾರಗಳು ಮುಖ್ಯಮಂತ್ರಿಯವರ ಕಚೇರಿಯಲ್ಲಿ ನಡೆಯದೆ ಮುಖ್ಯಮಂತ್ರಿಯವರ ಕುಟುಂಬದ ನಿವಾಸದಲ್ಲಿ ನಡೆದಿರುವುದೇ ಇವೆಲ್ಲ ಅವಾಂತರಕ್ಕೆ ಕಾರಣ. ಸಚಿವರ ಆಯ್ಕೆ ಮುಖ್ಯಮಂತ್ರಿ ಮತ್ತು ಪಕ್ಷದ ಮುಖಂಡರ ನಿರ್ಧಾರ ಆಗಿರುತ್ತದೆ. ಪ್ರಮಾಣ ವಚನ ಸ್ವೀಕರಿಸಿದ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರ ಎನ್ನಲಾಗುತ್ತದೆ. ಎಷ್ಟರ ಮಟ್ಟಿಗೆ ಇಂದಿನ ಮುಖ್ಯಮಂತ್ರಿ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡಿದ್ದಾರೆ ಎಂಬುದು ಚರ್ಚಾಸ್ಪದ ವಿಚಾರವಾಗಿದೆ.

ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ಸೂಚನೆ ನೀಡಿರುವುದು ಎರಡು ಹೆಸರುಗಳು ಒಂದು ದಕ್ಷಿಣ ಕನ್ನಡ ಜಿಲ್ಲೆಯ ಅಂಗಾರ ಮತ್ತು ಇನ್ನೊಂದು ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾದ ಸಿ.ಯೋಗೀಶ್ವರ್. ಅರವಿಂದ ಲಿಂಬಾವಳಿ ಮೂಲ ಬಿಜೆಪಿಗರು ಮತ್ತು ಪಕ್ಷದ ಹಿರಿಯ ಮುಖಂಡರಾಗಿದ್ದರು ಕೂಡ ಅವರ ಆಯ್ಕೆ ಆಗಿದ್ದು ಹೈಕಮಾಂಡ್ ಕೋಟಾದಲ್ಲಿ ಅಲ್ಲ. ಈ ಮಧ್ಯೆ, ಸೀಡಿ ಇದೆ ಎಂಬ ಬೆದರಿಕೆಯ ಮೂಲಕ ಸಚಿವರಾಗಿದ್ದಾರೆ ಎಂದು ಬಿಜೆಪಿಯ ಅತೃಪ್ತ ಶಾಸಕರೇ ಬಹಿರಂಗ ಹೇಳಿಕೆ ನೀಡಿದ್ದರು. ಈ ರಹಸ್ಯ ಸೀಡಿ ಬಗ್ಗೆ ಹೆಚ್ಚೇನು ಮಾಹಿತಿ ಹೊರ ಬಂದಿಲ್ಲ. ಆದುದರಿಂದ, ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಕೂಡ ಅಗತ್ಯವಿಲ್ಲ. ಆದರೆ, ಪ್ರತಿಪಕ್ಷಗಳಿಗೆ ಇದೊಂದು ಗಂಭೀರ ವಿಚಾರ ಆಗಬೇಕಾಗಿತ್ತು. ಪ್ರತಿಪಕ್ಷ ಮುಖಂಡರು ಪತ್ರಿಕಾ ಹೇಳಿಕೆಗೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸಿದರೇ ವಿನಾ ರಾಜಕೀಯ ಅಥವ ನ್ಯಾಯಾಂಗ ಹೋರಾಟಕ್ಕೆ ಮುಂದಾಗಲಿಲ್ಲ.

ಬಲ್ಲ ಮೂಲಗಳ ಪ್ರಕಾರ, ಹೊಸ ಮಂತ್ರಿಗಳ ಆಯ್ಕೆ ಮಾಡಿರುವುದು ಮುಖ್ಯಮಂತ್ರಿ ಅವರಲ್ಲ ಎನ್ನಲಾಗುತ್ತಿದೆ. ಇಂದಿನ ಬಿಜೆಪಿ ಸರಕಾರದ ಅಧಿಕಾರದ ನಿಯಂತ್ರಣ ಹೊಂದಿರುವುದು ಯಾರು ಎಂಬುದು ಬಹಿರಂಗ ರಹಸ್ಯ. ಸಚಿವರಿಗೆ ಖಾತೆಗಳನ್ನು ಹಂಚುವಾಗ, ಕೆಲವು ಸಚಿವರ ಖಾತೆ ಅದಲು ಬದಲು ಮಾಡಿದಾಗಲೇ ಅಪ್ರಬುದ್ಧ ರಾಜಕಾರಣಿಯ ಕೆಲಸ ಇದೆಂದು ಖಚಿತವಾಗಿದೆ. ಯಡಿಯೂರಪ್ಪ ಅವರಂತಹ ಅನುಭವಿ ರಾಜಕೀಯ ಮುಖಂಡರು ಈ ರೀತಿಯಲ್ಲಿ ಖಾತೆಗಳ ಅದಲು ಬದಲು ಮಾಡಲು ಸಾಧ್ಯತೆಗಳು ಇಲ್ಲ. ಹಾಗಿದ್ದರೆ, ಮುಖ್ಯಮಂತ್ರಿಯವರಿಗೆ ಹೊರತಾಗಿ ಅಷ್ಟೊಂದು ರಾಜಕೀಯ ಅನುಭವ ಇಲ್ಲದ ವ್ಯಕ್ತಿ ಕೈ ಆಡಿಸಿರುವುದು ತುಂಬಾ ಸ್ಪಷ್ಟವಾಗಿದೆ.

ಇದಕ್ಕೆ ಮುಖ್ಯ ಉದಾಹರಣೆ ಯಡಿಯೂರಪ್ಪ ಸಂಪುಟದ ಹಿರಿಯ ಸಚಿವ ಮಾಧುಸ್ವಾಮಿಯಂತಹ ಮಾಧುಸ್ವಾಮಿಯ ಖಾತೆಗಳಿಗೆ ಕೈ ಹಾಕಿರುವುದು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿರಾಗಿದ್ದ ಮಾಧುಸ್ವಾಮಿಯವರು ಸಂಸದೀಯ ವ್ಯವಹಾರ ಖಾತೆಯನ್ನು ವಾಪಾಸ್ ಪಡೆದಿರುವುದು ಮತ್ತು ಅದರ ಬದಲು ವೈದ್ಯಕೀಯ ಶಿಕ್ಷಣದಂತಹ ಖಾತೆ ನೀಡಿರುವುದು ಮೂರ್ಖತನದ ಕೆಲಸ. ಮಾಧುಸ್ವಾಮಿ ಕುರಿತು ಸಾರ್ವಜನಿಕರ ಅಭಿಪ್ರಾಯಗಳು ಏನೇ ಇದ್ದರೂ ಪಕ್ಷದ ನೆಲೆಯಲ್ಲಿ ಕ್ಲಿಷ್ಟಕಾಲದಲ್ಲಿ ಸರಕಾರವನ್ನು ಆ ಮೂಲಕ ಮುಖ್ಯಮಂತ್ರಿ ಪರವಾಗಿ ಸದನದಲ್ಲಿ ವಕಾಲತ್ತು ಮಾಡಿದ ಸಂಸದೀಯ ಪಟು ಮಾಧುಸ್ವಾಮಿ ಎಂಬುದನ್ನು ಮರೆಯಬಾರದಿತ್ತು. ಗೃಹ ಇಲಾಖೆಯಲ್ಲಿ ಸೋತಿರುವ ಬಸವರಾಜ ಬೊಮ್ಮಾಯಿ ಅವರಿಗೆ ಸದನದಲ್ಲಿ ಮಿಂಚಬೇಕೆಂಬ ಆಸೆ ಬಂದಿರುವುದು ಕೂಡ ಖಾತೆ ಅದಲು ಬದಲಾಗಲು ಮತ್ತೊಂದು ಅಂಶವಾಗಿದೆ.

ಕೊರೋನ ಸಂದರ್ಭದಲ್ಲಿ ಸಮತೋಲನ ಇರಲಿ ಎಂದು ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಡಾ.ಸುಧಾಕರ್ ಅವರಿಗೆ ನೀಡಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಒಂದೇ ಇಲಾಖೆಗೆ ಸೇರಿದ ವ್ಯವಹಾರಗಳು. ಕೊರೋನದ ಪರಿಸ್ಥಿತಿ ಇನ್ನು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಿಭಜಿಸಿ ಮತ್ತೊಬ್ಬರಿಗೆ ನೀಡುವ ಅಗತ್ಯ ಇರಲಿಲ್ಲ. ಅದರಲ್ಲೂ, ಮೂಗಿನ ಮೇಲೆ ಕೋಪ ಇರಿಸಿಕೊಂಡು ಪ್ರವಾಸ ಮಾಡುವ ಮಾಧುಸ್ವಾಮಿ ಅವರಿಗೆ ಸೂಕ್ತವಾದ ಖಾತೆಯೇ ಅಲ್ಲ ವೈದ್ಯಕೀಯ ಶಿಕ್ಷಣ. ಮಾಧುಸ್ವಾಮಿ ಅವರಿಗೆ ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ನೀಡಲಾಗಿತ್ತು. ಮತ್ತೆ ಬದಲಾವಣೆ ಮಾಡಿ ಹಜ್ ಮತ್ತು ವಕ್ಫ್ ನೀಡಲಾಗಿತ್ತು. ಆರು ದಿನದಲ್ಲಿ ಮೂರು ಬದಲಾವಣೆ. ಇದೀಗ ನಾಲ್ಕನೆ ಬಾರಿ ಖಾತೆ ಬದಲಿಸಿ ಸಣ್ಣ ನೀರಾವರಿ ಖಾತೆ ನೀಡಲಾಗಿದೆ.

ಯಾವ ಕಾರಣಕ್ಕೂ ಆನಂದ್ ಸಿಂಗ್‌ ಗೆ ದೊರೆಯಬಾರದ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯನ್ನು ವಾಪಸ್ ಪಡೆದಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆನಂದ್ ಸಿಂಗ್‌ ಗೆ ಅದೇ ಖಾತೆಯನ್ನು ನೀಡಿರುವುದು ರಾಜಕೀಯ ಅಪ್ರಬುದ್ಧತೆ ಅಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಗಿರುವ ಅಸಡ್ಡೆಯನ್ನು ತೋರಿಸುತ್ತದೆ. ಕೊನೆಯ ಹಂತದಲ್ಲಿ ನಡೆದ ಖಾತೆಗಳ ಸ್ಥಾನ ಪಲ್ಲಟದ ಹಿಂದೆ ಬಿಜೆಪಿ ಹೈಕಮಾಂಡಿನ ನಿರ್ದೇಶನವಿರುವುದು ಸ್ಪಷ್ಟವಾಗಿದೆ.

ಆಡಳಿತರೂಢ ಪಾರ್ಟಿಯಲ್ಲಿ ಇಷ್ಟೊಂದು ಆಂತರಿಕ ಕಲಹಗಳಿದ್ದು, ಸರಕಾರಿ ಮೆಷಿನರಿ ವಿಫಲವಾಗಿದ್ದರೂ ಪ್ರತಿಪಕ್ಷಗಳು ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಗೋಜಿಗೆ ಹೋಗಿಲ್ಲದೆ ಇರುವುದು ಸ್ವತಃ ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ, ಮಲೆನಾಡಿನ ನಾಲ್ಕು ಜಿಲ್ಲೆಗಳನ್ನು ಬೆಚ್ಚಿ ಬೀಳಿಸಿದ ಶಿವಮೊಗ್ಗ ಕೇಂದ್ರಿತ ಅಕ್ರಮ ಗಣಿಗಾರಿಕೆ ಸ್ಫೋಟ, ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮೀಷನ್ ಅರ್ಹತಾ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಗೋಲ್‌ ಮಾಲ್ ನಿಂದ ತೊಡಗಿ ಹಲವಾರು ವೈಫಲ್ಯಗಳು ಜಗಜ್ಜಾಹೀರಾಗುತ್ತಿದ್ದರೂ ಕಾಂಗ್ರೆಸ್ ಮುಖಂಡರು ತಮಗೆ ತಾವೇ ಸ್ವಯಂ ಲಾಕ್ಡೌನ್ ಹಾಕಿಕೊಂಡು ಕುಳಿತಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ನಡೆಸಿರುವ ವಿಭಾಗವಾರು ಸಮ್ಮೇಳನಗಳು ಪಕ್ಷದ ಸಂಘಟನಾ ಕಾರ್ಯಕ್ರಮಗಳೇ ಹೊರತು ಸರಕಾರದ ವಿರುದ್ಧದ ಹೋರಾಟಗಳಲ್ಲ. ದೆಹಲಿ ಹೈಕಮಾಂಡಿನ ತೋರಿಕೆಗಾಗಿ ಇಂತಹ ಸಮ್ಮೇಳನಗಳನ್ನು ಆಯೋಜಿಸಿದಂತಿದೆ. ಸರಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಲೀ, ಸರಕಾರದ ವಿರುದ್ಧ ತೀವ್ರ ತರವಾದ ಹೋರಾಟ ಸಂಘಟಿಸುವಲ್ಲಿ ಕಾಂಗ್ರೆಸ್ ಮುಖಂಡರು ವಿಫಲವಾಗಿದ್ದಾರೆ. ಈ ಹಿಂದೆ ಕೂಡ ಗೌರಿ ಲಂಕೇಶ್ ಅವರಂತಹ ಜನಪರ ಲೇಖಕರು ಅಂದಿನ ಬಿಜೆಪಿ ಸರಕಾರದ ವೈಫಲ್ಯಗಳ ಪಟ್ಟಿ ಮಾಡಿ ಪುಸ್ತಕಗಳನ್ನು ಪ್ರಕಟ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಸಂಪನ್ಮೂಲಗಳು ಇದ್ದರೂ ಕೂಡ ಬಿಜೆಪಿ ಸರಕಾರದ ವಿರುದ್ಧ ಹೋರಾಟ ಸಂಘಟಿಸುವ ನೈತಿಕ ಸ್ಥೆೃರ್ಯ ಉಡುಗಿ ಹೋಗಿದೆ.



Join Whatsapp