ಕೊರೋನಾ ರಣಕೇಕೆ | ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’

Prasthutha|

►ಪತ್ರಿಕೆಯ ನೈತಿಕ ಭಿನ್ನ ನಡೆಗೆ ವ್ಯಾಪಕ ಪ್ರಶಂಷೆ

- Advertisement -

‘ಇಡೀ ಜಗತ್ತೇ ಕೋವಿಡ್ ಎರಡನೇ ಅಲೆಗೆ ತತ್ತರಿಸಿರುವಾಗ ಅದರಲ್ಲೂ ಭಾರತದಲ್ಲಿ ಕೊರೋನ ರಣಕೇಕೆ ಹಾಕುತ್ತಿರುವ ಈ ಸಮಯದಲ್ಲಿ ಐಪಿಎಲ್ ಎಂಬ ಕ್ರಿಕೆಟ್  ನಡೆಯುತ್ತಿರುವುದು ವಿಷಾದಕರ. ದೇಶದ ಸಂಕಷ್ಟದ ಜೊತೆ ನಿಂತು ಜನರಲ್ಲಿ ನೈತಿಕ ಶಕ್ತಿ ತುಂಬುವುದರ ಸಂಕೇತವಾಗಿ ನಾವು ಈಗಿನಿಂದಲೇ ಐಪಿಎಲ್ ಕ್ರಿಕೆಟ್ ಕವರೇಜ್ ನಿಲ್ಲಿಸಿದ್ದೇವೆ ಮತ್ತು ಅದಕ್ಕೆ ಸಂಬಂಧಿಸಿದ ಯಾವ ಸುದ್ದಿಯನ್ನೂ ಪ್ರಕಟಿಸದಿರಲು ನಿರ್ಧರಿಸಿದ್ದೇವೆ’ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸಂಪಾದಕೀಯ ಮಂಡಳಿ ಇಂದು ರವಿವಾರ ಮುಖಪುಟದಲ್ಲೇ ಪ್ರಕಟಣೆ ನೀಡಿದ್ದು, ಇದೊಂದು ಜವಾಬ್ದಾರಿಯುತ ನೈತಿಕ ನಡೆ ಎಂದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

‘ಭಾರತವು ಈಗ ಕೋವಿಡ್ ಸಾಂಕ್ರಾಮಿಕವು ತೀವ್ರ ದುರಂತದಲ್ಲಿ ನರಳುತ್ತಿದೆ. ಸಾವಿರಾರು ಜನ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಒದ್ದಾಡುತ್ತಿದ್ದಾರೆ. ಎರಡನೇ ಅಲೆಯಲ್ಲಿ ಉಸಿರಾಟದ ಸಮಸ್ಯೆ ಅಧಿಕಗೊಂಡಿದ್ದು, ಆಸ್ಪತ್ರೆಗಳು ಆಮ್ಲಜನಕ ಮತ್ತು ಅಗತ್ಯ ಜೀವರಕ್ಷಕ ಔಷಧಿಗಳನ್ನು ಒದಗಿಸಿ ಎಂದು ಅಸಹಾಯಕ ಸ್ಥಿತಿಯಲ್ಲಿ ಸರ್ಕಾರಗಳಿಗೆ ಮನವಿ ಮಾಡುತ್ತಿವೆ. ಸ್ಮಶಾನಗಳಲ್ಲಿ ಶವ ಸಂಸ್ಕಾರಕ್ಕೆ ಪಾಳೆ ಹಚ್ಚುವ ಪರಿಸ್ಥಿತಿ ಬಂದಿದೆ

- Advertisement -

ಕುಸಿದು ಹೋಗಿರುವ ದೇಶದ ಆರೋಗ್ಯ ವ್ಯವಸ್ಥೆಯ ಕುರಿತಾಗಿ ಸರ್ಕಾರದ ಬಳಿ ಯಾವುದೇ ಸಮರ್ಪಕ ಉತ್ತರವಿಲ್ಲ. ಅದು ಈ ಸವಾಲನ್ನು ಮೆಟ್ಟಿ ನಿಲ್ಲುವ ಸಿದ್ಧತೆ ಮಾಡಿಕೊಂಡಂತೆ ಜನರಿಗೆ ಅನಿಸುತ್ತಿಲ್ಲ. ಇಂತಹ ಒಂದು ಸಂದರ್ಭದಲ್ಲಿ ಕ್ರಿಕೆಟ್ ಹಬ್ಬ ಎಂದು ಕರೆಯಲ್ಪಡುವ ಐಪಿಎಲ್ ನಡೆಯುತ್ತಿರುವುದು ಸಮಂಜಸವಲ್ಲ ಎಂದು ಪತ್ರಿಕೆ ಭಾವಿಸಿದೆ. ಇದು ಕ್ರಿಕೆಟ್ ಕುರಿತಾದ ಪ್ರಶ್ನೆಯಲ್ಲ. ಆದರೆ ಈ ದುರಂತದ ಸಂದರ್ಭದ ಪ್ರಶ್ನೆಯಾಗಿದೆ. ಬಯೋ ಬಬಲ್‌ನಲ್ಲಿ ಆಟಗಾರರು ಎಲ್ಲ ಸುರಕ್ಷತೆಗಳೊಂದಿಗೆ ಆಡುವ ಹೊತ್ತಿನಲ್ಲಿ ಜನ ಆರೋಗ್ಯ ಸೌಲಭ್ಯ ಸಿಗದೇ ಒದ್ದಾಡುತ್ತಿದ್ದಾರೆ. ಒಂದು ಸಣ್ಣ ಹೆಜ್ಜೆಯಾಗಿ, ನಮ್ಮ ನೈತಿಕ ಜವಾಬ್ದಾರಿ ಎಂದು ಅಂದುಕೊಂಡು ಈಗಿನಿಂದಲೇ ಕ್ರಿಕೆಟ್ ಕವರೇಜ್ ಮಾಡದಿರಲು ಪತ್ರಿಕೆ ನಿರ್ಧರಿಸಿದೆ. ಪರಿಸ್ಥಿತಿ ಸಹಜ ಸ್ಥಿಗೆ ಬರುವವರೆಗೂ ಕವರೇಜ್ ಮಾಡದಿರಲು ನಿರ್ಧರಿಸಿದ್ದೇವೆ…’ ಎಂದು ಹೇಳಿರುವ ಸಂಪಾದಕೀಯ ಮಂಡಳಿ, ‘ಓದುಗರು ಈ ಅಂಶವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಈ ಸಂಕಷ್ಟ ಸಂದರ್ಭದಲ್ಲಿ ನಾವೆಲ್ಲ ಒಂದು ದೃಢ ಸಂಕಲ್ಪದೊಂದಿಗೆ ಒಂದು ದೇಶವಾಗಿ ಒಟ್ಟಾಗಿ ನಿಲ್ಲಬೇಕಿದೆ’ ಎಂದು ತಿಳಿಸಿದೆ,

ಇದೊಂದು ಭಿನ್ನ ನೈತಿಕ ನಡೆಯಾಗಿದ್ದು ಅನುಕರಣೀಯ ಕ್ರಮ ಎಂಬ ಮೆಚ್ಚುಗೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.



Join Whatsapp