ದಮ್ಮಾಮ್ | ಇಕಾಮ, ವೇತನವಿಲ್ಲದ ಅನಿವಾಸಿ ಕನ್ನಡಿಗನಿಗೆ ಕಾರ್ಮಿಕ ನ್ಯಾಯಾಲಯದ ಮೂಲಕ ನ್ಯಾಯ ಒದಗಿಸಿದ ISF

Prasthutha|

ದಮ್ಮಾಮ್: ಕಳೆದ ಮೂರು ವರ್ಷಗಳಿಂದ ಇಕಾಮ ಮತ್ತು ವೇತನಗಳಿಲ್ಲದೆ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರೊಬ್ಬರ ಸಮಸ್ಯೆಯನ್ನು ಬಗೆಹರಿಸಿ ತವರಿಗೆ ಕಳುಹಿಸಲು ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ರಾಜ್ಯ ಘಟಕ ಯಶಸ್ವಿಯಾಗಿದೆ. 

- Advertisement -

ಮಂಗಳೂರಿನ ಮೊಂಟೆಪದವು ನಿವಾಸಿ ಅಬ್ದುಲ್ಲಾ ಲದಾ ಮುಹಮ್ಮದ್ ಎಂಬವರು  ದಮ್ಮಾಮ್ ನಲ್ಲಿ ಮುಹಮ್ಮದ್ ಅಬ್ದುಲ್ ಅಝೀಝ್ ಕಂಪೆನಿಯಲ್ಲಿ ಪೈಪಿಂಗ್ ವಿಭಾಗದಲ್ಲಿ  ಕೆಲಸ ಮಾಡುತ್ತಿದ್ದರು.  ಮೂರು ವರ್ಷಗಳ ಹಿಂದೆ  ಅವರ ಇಕಾಮ ಅವಧಿ ಮುಗಿದಿದ್ದು, ಕಂಪೆನಿ ಅದನ್ನು ನವೀಕರಿಸಿರಲಿಲ್ಲ ಮತ್ತು ವೇತನವನ್ನೂ ನೀಡಿರಲಿಲ್ಲ. ಇದರಿಂದ ಬೇಸತ್ತಿದ್ದ ಅಬ್ದುಲ್ಲಾ ತಮ್ಮ ಸಂಬಂಧಿಯೋರ್ವರ ಮೂಲಕ ಇಂಡಿಯನ್ ಸೋಶಿಯಲ್ ಫೋರಂ (ಐ.ಎಸ್.ಎಫ್) ಸಂಪರ್ಕಿಸಿದ್ದು ತನ್ನನ್ನು ತವರಿಗೆ ಮರಳಿಸಲು ನೆರವಾಗುವಂತೆ ಕೋರಿಕೊಂಡಿದ್ದರು.

ಇಂಡಿಯನ್ ಸೋಶಿಯಲ್ ಫೋರಂನ  ಇಬ್ರಾಹೀಂ ಕೃಷ್ಣಾಪುರ, ರಝಾಕ್ ಅಡ್ಯಾರ್ ಹಾಗೂ ತಂಡ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಕಳೆದ ಮೂರು ವರ್ಷಗಳಿಂದ ಕಂಪೆನಿಯು ಅವರಿಗೆ ವೇತನ ನೀಡದಿರುವುದು ಇಂಡಿಯನ್ ಸೋಶಿಯಲ್ ಫೋರಂನ ಗಮನಕ್ಕೆ ಬಂದಿತ್ತು‌.  ಸಂಘಟನೆಯು ಕೂಡಲೇ ಸೌದಿ ಅರೇಬಿಯಾ ಕಾರ್ಮಿಕ ನ್ಯಾಯಲಯಕ್ಕೆ ಈ ಕುರಿತು ದೂರು ನೀಡಿತ್ತು. ಪರಿಣಾಮವಾಗಿ ಸೌದಿ ಕಾರ್ಮಿಕ ನ್ಯಾಯಾಲಯವು ಅವರಿಗೆ ಬಾಕಿಯಿರುವ ವೇತನ 30000 ಸೌದಿ ರಿಯಾಲ್ ಕೂಡಲೇ ಪಾವತಿಸುವಂತೆ ಕಂಪೆನಿಗೆ ಸೂಚನೆ ನೀಡಿತ್ತು.  ನಂತರ ಅವರನ್ನು ತವರಿಗೆ ಮರಳಿಸುವ ಪ್ರಕ್ರಿಯೆ ಆರಂಭಿಸಿದ್ದು ಸೌದಿ ಕಾರ್ಮಿಕ ಕಚೇರಿ ಮತ್ತು ಭಾರತೀಯ ರಾಯಭಾರಿ ಕಚೇರಿಯ ಮೂಲಕ ಅದಕ್ಕೆ ಬೇಕಾದ ಏರ್ಪಾಟುಗಳನ್ನು ಇಂಡಿಯನ್ ಸೋಶಿಯಲ್ ಫೋರಂ ಮಾಡಿದೆ. ಅಲ್ಲದೆ ಕಂಪೆನಿಯನ್ನು ಸಂಪರ್ಕಿಸಿ ತವರಿಗೆ ಮರಳಲು ಬೇಕಾದ ಟಿಕೆಟ್ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಅಂತಿಮವಾಗಿ ಅಬ್ದುಲ್ಲಾ ಎಪ್ರಿಲ್ 16ರಂದು ತವರಿಗೆ ಮರಳಿದ್ದಾರೆ.

Join Whatsapp