ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನಗಳಾಗಿವೆ: ಡಿ.ಕೆ.ಶಿ

Prasthutha|

ಬೆಂಗಳೂರು: “ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಜಾತಿ, ಧರ್ಮ ಭೇದ ಮರೆತು ಹೋರಾಟ ಮಾಡಿದರೋ ಅದೇ ರೀತಿ ಇಂದು ರೈತರ ರಕ್ಷಣೆಗೆ ಎಲ್ಲ ವರ್ಗದ ಜನರು ಒಟ್ಟಾಗಿ ನಿಂತಿದ್ದಾರೆ. ನಮ್ಮ ಅನ್ನದಾತನ ಬಾಯಿಗೆ ಮಣ್ಣು ಹಾಕಲು ಬಿಜೆಪಿ ಸರ್ಕಾರ ಮುಂದಾಗಿರೋದು ದೇಶದ ದುರಂತ. ನಾವೆಲ್ಲರೂ ಬದುಕಿರುವಾಗಲೇ ಸಾಯಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಕರಾಳ ಕಾಯ್ದೆಗಳಾಗಿದ್ದು, ರೈತರ ಪಾಲಿಗೆ ಇವು ಮರಣ ಶಾಸನಗಳಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ರೈತ ವಿರೋಧಿ ಕರಾಳ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ಕೊಟ್ಟ ಭಾರತ್ ಬಂದ್ ಕರೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್, ವಿಧಾನಸೌಧದ ಗಾಂಧಿ ಪ್ರತಿಮೆ, ಟೌನ್ ಹಾಲ್ ಮುಂದೆ ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿ ಅವರು, “ರೈತರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ರೈತರು ಈ ರೀತಿ ತಿರುಗಿ ಬೀಳುತ್ತಾರೆ ಎಂದು ಬಿಜೆಪಿ ಸರ್ಕಾರ ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವರು ವಿರೋಧ ಪಕ್ಷಗಳ ಮೇಲೆ ರಾಜಕೀಯದ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ಕಾಯ್ದೆಗಳು ಈ ದೇಶದ ಜನರ, ರೈತರ ವಿರೋಧಿಯಾಗಿವೆ” ಎಂದು ಹೇಳಿದ್ದಾರೆ.

- Advertisement -

ರೈತರು ನಡೆಸುತ್ತಿರುವ ಹೋರಾಟ ರಾಜಕೀಯವಲ್ಲ. ಈ ಕರಾಳ ಕಾಯ್ದೆಯನ್ನು ಸರ್ಕಾರ ಹಿಂಪಡೆಯುವವರೆಗೂ ನಾವು ರೈತರ ಜತೆಗೆ ನಿಂತು ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

Join Whatsapp