ನಮ್ಮಿಂದ ಸಾಧ್ಯವಾಯಿತು! ಹೀಗೆ ಒಕ್ಕೊರಲಿನಿಂದ ಉದ್ಗಾರ ತೆಗೆದಿದ್ದು ಪೆರುವಿನ ಕೃಷಿಕರು. ಡಿಸೆಂಬರ್ ತಿಂಗಳಲ್ಲಿ ಪೆರುವಿನ ಸರ್ಕಾರ ಕಾರ್ಪೊರೇಟ್ ವಲಯಕ್ಕೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿತ್ತು.
ಈ ಕಾಯ್ದೆಗಳು ಕಾರ್ಪೊರೆಟ್ ಸಂಸ್ಥೆಗಳಿಗೆ ಶೇ. 15ರಷ್ಟು ತೆರಿಗೆ ವಿನಾಯಿತಿ ನೀಡಿತ್ತು. ಜೊತೆಗೆ ಕೃಷಿ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿತ್ತು. ಈ ಕಾಯ್ದೆಗಳಿಂದ ಕೃಷಿ ಕೂಲಿಗೆ ಕತ್ತರಿ ಹಾಕಿತ್ತು.
ಆಕ್ರೋಶಗೊಂಡ ರೈತರು ಈಗಾಗಲೇ ದುಸ್ಥಿತಿಯಲ್ಲಿರುವ ನಮ್ಮ ಪರಿಸ್ಥಿತಿ ಇನ್ನಷ್ಟುಹದಗೆಡಲಿದೆ ಎಂದು ಪ್ರತಿಭಟನೆ ಆರಂಭಿಸಿದ್ದರು. ದಕ್ಷಿಣಾ ಲಿಮಾದ ಅಮೆರಿಕದ ಹೆದ್ದಾರಿಯನ್ನು 300ಕಿ.ಮೀ. ಉದ್ದಕ್ಕೂ ತಡೆ ನಡೆಸಿತ್ತು.
ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆಯ ಮೂಲಕ ಸಂಧಾನ ಸೂತ್ರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿತ್ತಾದರೂ ಫಲಕೊಡಲಿಲ್ಲ.
ಭಾರತದ ಹೋರಾಟವನ್ನು ನೆನಪಿಸುವಂತೆ ಅಲ್ಲೂ ಸಾವಿರಾರು ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಂಡರು. ಹೆದ್ದಾರಿಯಲ್ಲಿ 2000ಕ್ಕೂ ಹೆಚ್ಚು ಲಾರಿಗಳು, ಬಸ್‌ಗಳು ಸಿಲುಕಿದ್ದರು.
ಕೃಷಿ ಕೂಲಿ ಹೆಚ್ಚಿಸುವುದು ಮತ್ತು ಹೊಸ ಕಾಯ್ದೆಯನ್ನು ಹಿಂಪಡೆಯುವುದು ಮುಖ್ಯ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರದೆ ಪ್ರತಿಭಟನೆ ನಿಲ್ಲಿಸುವಂತೆ ಮಾತೇ ಇಲ್ಲ ಎಂದು ರೈತರು ಪಟ್ಟು ಹಿಡಿದರು.
ರೈತ ಹೋರಾಟಕ್ಕೆ ಮಣಿದ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ಅಧ್ಯಕ್ಷ ಫ್ರಾನ್ಸಿಸ್ಕೊ ಸಗಾಟಿ ಸರ್ಕಾರದ ಮುಂದೆ ಕಾಯ್ದೆ ಹಿಂಪಡೆಯುವ ಪ್ರಸ್ತಾವನೆಯನ್ನು ಇಟ್ಟು ಬಹುಮತದ ಮೇರೆಗೆ ಹಿಂಪಡೆಯಲಾಗಿದೆ.
ಕಾರ್ಪೊರೆಟ್ ಸಂಸ್ಥೆಗಳು ಕೃಷಿ ವಲಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡಿದ ಈ ಹೋರಾಟ, ಭಾರತದ ರೈತ ಹೋರಾಟಕ್ಕೆ ಉತ್ಸಾಹ ನೀಡಿದೆ ಎಂದು ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ನಿರತ ರೈತರು ಹೇಳುತ್ತಾರೆ.