ಕೃಷಿ ಕಾಯ್ದೆ ವಿರೋಧಿಸಿ ಮತ್ತೋರ್ವ ರೈತ ಆತ್ಮಹತ್ಯೆ; ಪ್ರತಿಭಟನಾ ಸ್ಥಳದಲ್ಲಿ ನಡೆದ ನಾಲ್ಕನೇ ಪ್ರಕರಣ

Prasthutha|

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮತ್ತೋರ್ವ ರೈತ ಶನಿವಾರ ಸಿಂಘು ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
39 ವರ್ಷ ಪ್ರಾಯದ ಅಮರಿಂದರ್ ಸಿಂಗ್ , ಕಾಯ್ದೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿರುವ ನಾಲ್ಕನೇ ರೈತ. ಈ ಮೊದಲು ಮೂವರು ರೈತರು ಕಾಯ್ದೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರತಿಭಟನಾ ಸ್ಥಳದಲ್ಲಿ ಶನಿವಾರ ಅಮರಿಂದರ್ ಸಿಂಗ್ ವಿಷ ಸೇವಿಸಿದ್ದಾರೆ. ಅಸ್ವಸ್ಥರಾದ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಪಂಜಾಬ್ ನ ಫತೇಘರ್ ಸಾಹಿಬ್ ನ ಮಚ್ ರೈ ಕಲನ್ ಪ್ರದೇಶದ ನಿವಾಸಿಯಾಗಿರುವ ಸಿಂಗ್ ಅವರ ಮೃತದೇಹವನ್ನು ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಮುಖ್ಯ ದ್ವಾರದ ಬಳಿ ಅವರು ವಿಷ ಸೇವಿಸಿದ್ದಾರೆ. ಕುಸಿದುಬಿದ್ದ ಅವರನ್ನು ಇತರ ರೈತರು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರು. ಸಂಜೆ 7.20ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಐಟಿ ಸೆಲ್ ಸಂಚಾಲಕ ಬಲ್ಜೀತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅಮರಿಂದರ್ ಸಿಂಗ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಅವರ ತಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.
ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭಗೊಂಡ ಬಳಿಕ ಆತ್ಮಹತ್ಯೆ ನಾಲ್ಕನೇ ಪ್ರಕರಣ ಇದಾಗಿದೆ. ಹರ್ಯಾಣದ ಕರ್ನಾಲ್ ಜಿಲ್ಲೆಯ ಧರ್ಮಗುರು ಸಂತ ಬಾಬಾ ರಾಮ್ ಸಿಂಗ್ (65) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಪಂಜಾಬ್ ನ ಫಝಿಲ್ಕಾ ಜಿಲ್ಲೆಯ ಅಮರ್ ಜಿತ್ ಸಿಂಗ್ (63), ಕಾಶ್ಮೀರ್ ಸಿಂಗ್ ದಾಸ್ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದರು. ಪಂಜಾಬ್ ನಿರಂಜನ್ ಸಿಂಗ್ ಸಿಂಘು ಗಡಿಯಲ್ಲಿ ಆತ್ಮಹತ್ಯೆ ಶ್ರಮಿಸಿದ್ದರು.



Join Whatsapp