ಚಿಕನ್ ಬಿರಿಯಾನಿ ಪಾರ್ಟಿ ಮಾಡುತ್ತಿರುವ ರೈತರು; ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Prasthutha|

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಬಿಜೆಪಿ ನಾಯಕರ ಸುಳ್ಳಾರೋಪ ಹಾಗೂ ವಕೃದೃಷ್ಟಿ ಮುಂದುವರಿದಿದೆ.
ಸ್ವಯಂ ಘೋಷಿತ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳಗಳಲ್ಲಿ ಕೆಲವು ರೈತರು ಚಿಕನ್ ಬಿರಿಯಾನಿ ಪಾರ್ಟಿ ಮತ್ತು ಪಿಕ್ನಿಕ್ ಮಾಡುತ್ತಿದ್ದಾರೆ. ಇದು ಹಕ್ಕಿ ಜ್ವರ ಹರಡಲು ನಡೆಸುತ್ತಿರುವ ಪಿತೂರಿಯಾಗಿದೆ ಎಂದು ಬಿಜೆಪಿ ಶಾಸಕ, ರಾಜಸ್ತಾನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ್ ಹೊಸ ವರಸೆ ತೆಗೆದಿದ್ದಾರೆ.
ರೈತರೆಂದು ಕರೆಯಲ್ಪಡುವವರು ರೈತ ಪ್ರತಿಭಟನೆಯ ಹೆಸರಿನಲ್ಲಿ ಪಿಕ್ನಿಕ್ ಮಾಡುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿಯಿಲ್ಲ ಎಂದು ದಿಲಾವರ್ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈತರು ನಿಜವಾಗಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ, ಬದಲಾಗಿ ಬಿಡುವಿನ ಸಮಯ ಕಳೆಯುವುದಕ್ಕಾಗಿ ಚಿಕನ್ ಬಿರಿಯಾನಿ ಮತ್ತು ಒಣ ಹಣ್ಣುಗಳನ್ನು ತಿಂದು ಆನಂದಿಸುತ್ತಿದ್ದಾರೆ, ಇದು ಹಕ್ಕಿ ಜ್ವರವನ್ನು ಹರಡುವ ಪಿತೂರಿಯಾಗಿದೆ ಎಂಬ ವಿಲಕ್ಷಣ ಆರೋಪ ಮಾಡಿದ್ದಾರೆ.
ಈ ರೈತರನ್ನು ಪ್ರತಿಭಟನೆಯ ಸ್ಥಳಗಳಿಂದ ತೆರವುಗೊಳಿಸದಿದ್ದರೆ ಹಕ್ಕಿ ಜ್ವರ ಇಡೀ ದೇಶಕ್ಕೆ ಹರಡಬಹುದು. ಆದ್ದರಿಂದ ಅವರನ್ನು ತಕ್ಷಣವೇ ಪ್ರತಿಭಟನಾ ಸ್ಥಳಗಳಿಂದ ತೆರವುಗೊಳಿಸಬೇಕು ಎಂದು ದಿಲಾವರ್ ಹೇಳಿದರು.
ಈ ಸ್ವಯಂ ಘೋಷಿತ ರೈತರು ರಸ್ತೆಗಳನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ದೇಶದಲ್ಲಿ ಹಕ್ಕಿ ಜ್ವರ ಹರಡುವುದನ್ನು ನಿಯಂತ್ರಿಸಲು ಈ ರೈತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಒತ್ತಾಯಿಸಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ವೇಷ ಬದಲಾಯಿಸಿ ಭಯೋತ್ಪಾದಕರು ಮತ್ತು ದರೋಡೆಕೋರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಿಲಾವರ್ ಹೇಳಿಕೆಗೆ ರೈತ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಹಜಹಾನ್ ಪುರದ ರೈತ ಮುಖಂಡರು ದಿಲಾವರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಿಸಾನ್ ಮಹಾಪಂಚಾಯತ್‌ ನ ರಾಷ್ಟ್ರೀಯ ಅಧ್ಯಕ್ಷ ರಾಮ್ ಪಾಲ್ ಜಾಟ್ ತೀವ್ರವಾಗಿ ಖಂಡಿಸಿದ್ದು, “ಹಕ್ಕಿ ಜ್ವರ ಹರಡಿದ ಸೋಂಕಿತ ವ್ಯಕ್ತಿಗಳ ಪಟ್ಟಿಯನ್ನು ಮತ್ತು ರೈತ ಚಳವಳಿಯಲ್ಲಿ ಭಾಗವಹಿಸುತ್ತಿರುವ ಭಯೋತ್ಪಾದಕರು, ದರೋಡೆಕೋರರ ಪಟ್ಟಿಯನ್ನು ದಿಲಾವರ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp