ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಆ ಮೂಲಕ ಸೆಮಿಫೈನಲ್ ಫೈಟ್’ನಿಂದ ಕೊಹ್ಲಿ ಪಡೆ ಬಹುತೇಕ ಹೊರನಡೆದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾ,
ನ್ಯೂಜಿಲೆಂಡ್ ಗೆಲುವಿಗೆ 111 ರನ್’ಗಳ ಸುಲಭ ಗುರಿ ನೀಡಿತ್ತು.
ಕೇವಲ 2 ವಿಕೆಟ್ ನಷ್ಟದಲ್ಲಿ 14.3 ಓವರ್‌ಗಳಲ್ಲಿ ಗುರಿ ತಲುಪಿದ ಕಿವೀಸ್ ಪಡೆ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿತು.
ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್, 20 ರನ್’ಗಳಿಸಿದ್ದ ವೇಳೆ ಬುಮ್ರಾ ಬೌಲಿಂಗ್‌ನಲ್ಲಿ ಠಾಕೂರ್’ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಬಳಿಕ ಡ್ಯಾರಿಲ್ ಮಿಚೆಲ್ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ಸುಲಭವಾಗಿಯೇ ಜಯದತ್ತ ಕೊಂಡೊಯ್ದರು.
ಡ್ಯಾರೆಲ್ ಮಿಚೆಲ್ ಅರ್ಧಶತಕ ಗಳಿಸಿಲು ಒಂದು ರನ್ ಬೇಕಿದ್ದಾಗ ಬುಮ್ರಾ ಬೌಲಿಂಗ್‌ನಲ್ಲಿ ರಾಹುಲ್’ಗೆ ಕ್ಯಾಚಿತ್ತು ಔಟಾದರು.
ವಿಲಿಯಮ್ಸನ್ 33 ರನ್’ಗಳಿಸಿ ಅಜೇಯರಾಗುಳಿದರು.
ಭಾರತದ ಬೌಲಿಂಗ್ ವಿಭಾಗ ಎಷ್ಟು ದುರ್ಬಲವಾಗಿದೆ ಎಂಬುದು ಈ ಪಂದ್ಯದ ಮೂಲಕ ಮತ್ತೊಮ್ಮೆ ಸಾಬೀತಾಯಿತು. ಎರಡು ಪಂದ್ಯಗಳಲ್ಲಿ ಎದುರಾಳಿ ತಂಡದ ಕೇವಲ 2 ವಿಕೆಟ್ ಪಡೆಯಲಷ್ಟೇ ಬೌಲರ್’ಗಳಿಂದ ಸಾಧ್ಯವಾಗಿದೆ.
ಮತ್ತೊಂದೆಡೆ ಐಸಿಸಿ ಟೂರ್ನಿಯಲ್ಲಿ 2007ರ ಬಳಿಕ ಭಾರತದ ವಿರುದ್ಧ ಅಜೇಯ ಓಟವನ್ನು ನ್ಯೂಜಿಲೆಂಡ್ ಮುಂದುವರಿಸಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಕೇನ್ ವಿಲಿಯಮ್ಸನ್ ಪಾಲಾಗಿತ್ತು.
ಒಲ್ಲದ ಮನಸ್ಸಿನಿಂದಲೇ ಬ್ಯಾಟಿಂಗ್’ಗೆ ಇಳಿದ ಭಾರತ,
ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಕೇವಲ 110 ರನ್’ಗಳಿಸಲಷ್ಟೇ ಸಾಧ್ಯವಾಗಿತ್ತು
ಅಳಿವು ಉಳಿವಿನ ಪಂದ್ಯದಲ್ಲಿ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಬ್ಯಾಟರ್’ಗಳು ಕಿವೀಸ್ ಬಿಗು ಬೌಲಿಂಗ್ ದಾಳಿಯ ಎದುರು ಪೆವಿಲಿಯನ್ ಪರೇಡ್ ನಡೆಸಿದರು. 24 ಎಸೆತಗಳಲ್ಲಿ 23 ರನ್’ಗಳಿಸಿದ ಹಾರ್ಧಿಕ್ ಪಾಂಡ್ಯ ತಂಡದ ಟಾಪ್ ಸ್ಕೋರರ್ ಎನಿಸಿದರು.
ಸೂರ್ಯಕುಮಾರ್ ಯಾದವ್ ಬದಲು ಸ್ಥಾನ ಪಡೆದು ಆರಂಭಿಕನಾಗಿ ಬಂದ ಇಶಾನ್ ಕಿಶನ್ ಕೇವಲ 4 ರನ್’ಗಳಿಸಿ ಟ್ರೆಂಟ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ನಿರಾಸೆ ಮೂಡಿಸಿದರು.
ಕೆ.ಎಲ್ ರಾಹುಲ್ 18, ರೋಹಿತ್ ಶರ್ಮಾ 14 ಹಾಗೂ ಕ್ಯಾಪ್ಟನ್ ಕೊಹ್ಲಿ ಕೇವಲ 9 ರನ್’ಗಳಿಸಿ ನಿರಾಸೆ ಮೂಡಿಸಿದರು.