ಶಾರ್ಜಾ: ಏಷ್ಯಾ ಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡವನ್ನು 127 ರನ್‌ಗಳಿಗೆ ನಿಯಂತ್ರಿಸಿದೆ. ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ, ಅಫ್ಘಾನ್‌ನ ಮುಜೀಬ್ ರಹ್ಮಾನ್ ಮತ್ತು ಅನುಭವಿ ಸ್ಪಿನ್ನರ್ ರಶೀದ್ ಖಾನ್ ದಾಳಿಗೆ ಸಿಲುಕಿ ರನ್‌ಗಳಿಸಲು ಒದ್ದಾಡಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 127 ರನ್‌ಗಳಿಸಿದೆ.
ಬಾಂಗ್ಲಾ ಪರ 7ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಮುಸದ್ದಿಕ್ ಹುಸೈನ್ ಅಜೇಯ 48 ರನ್‌ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. 31 ಎಸೆತಗಳನ್ನು ಎದುರಿಸಿದ ಹುಸೈನ್, 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಉಳಿದಂತೆ ಮಹ್ಮದುಲ್ಲಾ 25 ರನ್‌ಗಳಿಸಿದರೆ, ಮೆಹ್ದಿ ಹಸನ್ 14 ಮತ್ತು ಆತಿಫ್ ಹುಸೈನ್ 12 ರನ್‌ಗಳಿಸಿದರು. ನಾಯಕ ಶಕೀಬ್ ಅಲ್ ಹಸನ್ 11 ರನ್‌ಗಳಿಸಿ ನಿರ್ಗಮಿಸಿದರು.
ಒಂದು ಹಂತದಲ್ಲಿ ಬಾಂಗ್ಲಾದೇಶ 28 ರನ್‌ಗಳಿಸುವಷ್ಟರಲ್ಲಿಯೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಮುಸದ್ದಿಕ್, ಮಹ್ಮೂದುಲ್ಲಾ ತಂಡದ ನೆರವಿಗೆ ನಿಂತರು. ಬಾಂಗ್ಲಾದೇಶದ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಮುಜೀಬ್ ರಹ್ಮಾನ್ ಮತ್ತು ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆದರು. ತಲಾ ನಾಲ್ಕು ಓವರ್‌ಗಳ ದಾಳಿಯಲ್ಲಿ ಮುಜೀಬ್ 16 ರನ್ ನೀಡಿದರೆ, ರಶೀದ್ 22 ರನ್ ಬಿಟ್ಟುಕೊಟ್ಟರು.
ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಿದರೆ ಸೂಪರ್-4 ಹಂತಕ್ಕೆ ಪ್ರವೇಶಿಸುವುದು ಬಹುತೇಕ ಖಚತವಾಗಲಿದೆ.