ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಸಿಬಿ ಪೊಲೀಸರಿಂದ 14 ಮಂದಿ ಬಂಧನ

Prasthutha|

ಕರ್ನಾಟಕ ಲೋಕಸೇವಾ ಆಯೋಗ ನಡೆಸಲು ಉದ್ದೇಶಿಸಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆ -ಎಫ್ ಡಿ ಎಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಮುಖ್ಯ ಸೂತ್ರಧಾರ ಚಂದ್ರು, ರಾಚಪ್ಪ ಸೇರಿದಂತೆ 14 ಆರೋಪಿಗಳು ನೀಡಿರುವ ಮಾಹಿತಿ ಆಧರಿಸಿ, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಸಿಸಿಬಿ ಪೊಲೀಸರು ಬೀಸಿದ್ದಾರೆ.
ತನಿಖಾ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಅಧಿಕಾರಿಯ ಹೆಸರನ್ನು ಸಿಸಿಬಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಆದರೆ ಆ ಅಧಿಕಾರಿಯೇ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ್ದು ಅವರ ಕಚೇರಿಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರತಂದು ಆರೋಪಿ ಚಂದ್ರುಗೆ ನೀಡಿದ್ದ. ಬಳಿಕ ಚಂದ್ರು ಅವುಗಳನ್ನು ಉಲ್ಲಾಳದ ಆರ್.ಆರ್. ರೆಸಿಡೆನ್ಸಿಯ ಫ್ಲಾಟ್ನಲ್ಲಿಟ್ಟಿದ್ದ. ನಂತರ ತಾವು ಹಾಕಿಕೊಂಡ ಯೋಜನೆಯಂತೆ ಇನ್ನುಳಿದ ರಾಜ್ಯದ ವಿವಿಧೆಡೆಯ ಮಧ್ಯವರ್ತಿಗಳಿಗೆ ಸರಬರಾಜು ಮಾಡಲು ಸಂಚು ರೂಪಿಸಿದ್ದ.
ಒಂದು ಕಡೆ ಈ ಗ್ಯಾಂಗ್ ಸದ್ದಿಲ್ಲದೇ ಪರೀಕ್ಷಾರ್ಥಿಗಳ ಆಪರೇಶನ್ಗೆ ಕೈ ಹಾಕಿತ್ತು. ಮತ್ತೊಂದು ಕಡೆ ತಮಗಿದ್ದ ಮಾಹಿತಿ ಮೇರೆಗೆ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು, ಉಲ್ಲಾಳದ ಫ್ಲಾಟ್ ಮೇಲೆ ದಾಳಿ ಮಾಡುತ್ತಿದ್ದಂತೆ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿ ಚಂದ್ರು ಕೋರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ವಿಜಿಲೆನ್ಸ್ ಇನ್ಸ್ಪೆಕ್ಟರ್ ಎಂಬುದು ದೃಢಪಟ್ಟಿದ್ದು, ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಚಂದ್ರು, ಬಳಿಕ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಬಳಸಿಕೊಂಡು ಪ್ರಶ್ನೆ ಪತ್ರಿಕೆ ಪಡೆದಿದ್ದ. ಈ ಹಿಂದೆಯೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಈತನ ಪಾಲಿರುವ ಮಾಹಿತಿ ಲಭ್ಯವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈ ಮಧ್ಯೆ ಶಿವಮೊಗ್ಗದಲ್ಲಿಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೆ.ಪಿ.ಎಸ್.ಸಿ ಪರೀಕ್ಷೆ ಮುನ್ನವೇ ಪೇಪರ್ ಸೋರಿಕೆ ಆಗಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ನಿನ್ನೆ ರಾತ್ರಿಯೇ ಮಾಹಿತಿ ಪಡೆದಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೆ ಹುದ್ದೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

Join Whatsapp