ಲಕ್ನೋ: ಡಿಸೆಂಬರ್ 22ರಂದು ನಡೆಯಲಿರುವ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ(ಎಎಂಯು) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಜೊತೆಗೂಡಿ ಮೋದಿ ಅವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎಎಂಯುನ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್ ಒ) ಒಮರ್ ಪೀರ್ಜಾಡಾ ತಿಳಿಸಿದ್ದಾರೆ.
ತನ್ಮಧ್ಯೆ, ವಿದ್ಯಾರ್ಥಿಗಳು ಈ ನಿರ್ಧಾರದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬೇಡಿಕೆ ಸರಳವಾಗಿರಬೇಕು: ಎಎಂಯು ವಿರುದ್ಧ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರವು, ಎಎಂಯು ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಹೊರಡಿಸಿದ್ದ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು” ಎಂದು ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಸ್ಕೂರ್ ಅಹ್ಮದ್ ಉಸ್ಮಾನಿ ಹೇಳಿದ್ದಾರೆ.
“ನಾವು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ವಿರೋಧಿಸುತ್ತಿಲ್ಲ, ಆದರೆ ಅವರ ನೀತಿಗಳನ್ನು ವಿರೋಧಿಸುತ್ತಿದ್ದೇವೆ, ಏಕೆಂದರೆ ಅವರ ಪಕ್ಷವು ಯಾವಾಗಲೂ ವಿದ್ಯಾರ್ಥಿಗಳು ಮತ್ತು ಮುಸ್ಲಿಮರ ವಿರುದ್ಧ ದ್ವೇಷವನ್ನು ಬಿತ್ತುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ನಡೆದ ಭೀಕರ ಘಟನೆಗೆ ಮೋದಿ ಸರ್ಕಾರ ಕ್ಷಮೆಯಾಚಿಸುತ್ತದೆಯೇ?” ಎಂದು ಎಎಂಯುನ ಸಂಶೋಧನಾ ವಿದ್ವಾಂಸ ದೀಬಾ ನಿಯಾಜಿ ಆಕ್ರೋಶ ವ್ಯಕ್ತಪಡಿಸಿದರು.
ಎಎಂಯು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವುದು ಇದೇ ಮೊದಲು.
2018ರ ಮಾರ್ಚ್ ನಲ್ಲಿ, ಎಎಂಯುನ 65ನೇ ವಾರ್ಷಿಕ ಸಮ್ಮೇಳನ ಸಮಾರಂಭದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಕ್ಯಾಂಪಸ್‌ಗೆ ಭೇಟಿ ನೀಡಿದ್ದನ್ನು ವಿದ್ಯಾರ್ಥಿಗಳು ವಿರೋಧಿಸಿದಾಗ ವಿವಾದವುಂಟಾಗಿತ್ತು ಎಂದು ನೆನಪಿಸಿಕೊಳ್ಳಬಹುದು.