ಈದ್ಗಾ ಮೈದಾನ ವಿವಾದ : ಜುಲೈ 12ರಂದು ಬಂದ್ ಗೆ ಕರೆ ನೀಡಿದ ಸಂಘಪರಿವಾರ

Prasthutha|

– ಅಶಾಂತಿ ಸೃಷ್ಟಿಸಲು ಬಂದ್ ಗೆ ಕರೆ ನೀಡಿದರೆ ಕ್ಷೇತ್ರದ ಜನ ಕಿವಿಗೊಡುವುದಿಲ್ಲ: ಶಾಸಕ ಝಮೀರ್ ಅಹ್ಮದ್ 

- Advertisement -

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದವು ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ, ಅದು  ಸಾರ್ವಜನಿಕ ಆಟದ ಮೈದಾನವಾಗಿ ಉಳಿಯಬೇಕು ಮತ್ತು ಹಿಂದೂಗಳಿಗೂ ಇದರ ಅವಕಾಶ ನೀಡಬೇಕೆಂದು ಆಗ್ರಹಿಸಿ ಜುಲೈ 12ರಂದು ಸಂಘಪರಿವಾರ ಜಾಮರಾಜಪೇಟೆ ಕ್ಷೇತ್ರ ಬಂದ್’ಗೆ ಕರೆ ನೀಡಿವೆ.

ಈ ಕುರಿತು ಬೆಂಗಳೂರಿನ ಜಂಗಮ ಮಠದಲ್ಲಿ ಈಗಾಗಲೇ ಸಂಘಪರಿವಾರದ ನಾಯಕರು ಸಭೆ ನಡೆಸಿದ್ದು,  ಈದ್ಗಾ ಮೈದಾನವನ್ನು ಆಟದ ಮೈದಾನವನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. 

- Advertisement -

ಒಟ್ಟು 25 ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಸೇರಿ ಈದ್ಗಾ ಮೈದಾನದ ಮೇಲಿನ ವಕ್ಫ್ ಮಂಡಳಿಯ ಹಕ್ಕುಗಳನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ಕೈಜೋಡಿಸಿವೆ.

ಜುಲೈ 12 ರಂದು ಶಿರಸಿ ವೃತ್ತದಿಂದ ಈದ್ಗಾ ಮೈದಾನದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ಬಂದ್ ಆಚರಿಸಲಾಗುವುದು. ಈ ಕುರಿತು ಮನೆ ಮನೆಗೆ ತೆರಳಿ ಭಿತ್ತಿಪತ್ರಗಳನ್ನು ನೀಡಿ ಪ್ರಚಾರ ನಡೆಸುತ್ತಿದ್ದೇವೆ. ಮೈದಾನವನ್ನು ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಬಿಟ್ಟು ಕೊಡಲ್ಲ. ರಕ್ತಕೊಟ್ಟಾದರೂ ಚಾಮರಾಜಪೇಟೆ ಆಟದ ಮೈದಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಆಯೋಜಕರೊಬ್ಬರು ತಿಳಿಸಿದ್ದಾರೆ. 

ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಒಂದು ಧರ್ಮದ ಶಾಸಕರಲ್ಲ ಎಂದು ಸಂಘಪರಿವಾರದ ಕಾರ್ಯಕರ್ತರು ಝಮೀರ್ ವಿರುದ್ಧ ಹರಿಹಾಯ್ದಿದ್ದಾರೆ. .

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಝಮಿರ್ ಅಹಮದ್, ‘ಶಾಂತಿ ಸೌಹಾರ್ದತೆಯಿಂದ ಸಹೋದರರಂತೆ ಒಟ್ಟಾಗಿ ಬಾಳುತ್ತಿರುವ ನಮ್ಮ ಕ್ಷೇತ್ರದಲ್ಲಿ ಆಟದ ಮೈದಾನದ ಹೆಸರಿನಲ್ಲಿ ಕಿಡಿಗೇಡಿಗಳು ಬಂದ್ ಗೆ ಕರೆ ನೀಡಿದರೆ ಕಿವಿಗೊಡುವವರಲ್ಲ ಚಾಮರಾಜಪೇಟೆ ಕ್ಷೇತ್ರದ ಜನ. ಈ ಹಿಂದೆ ಸಾವಿನಲ್ಲೂ ರಾಜಕಾರಣ ಮಾಡಲು ಹೋಗಿ, ಬಂದ್ ಕರೆ ನೀಡಿದ್ದ ಕಿಡಿಗೇಡಿಗಳಿಗೆ ಚಾಮರಾಜಪೇಟೆ ಕ್ಷೇತ್ರದ ಜನ ಕ್ಯಾರೆ ಅಂದಿರಲಿಲ್ಲ. ಇದೀಗ, ಈದ್ಗಾ ಮೈದಾನ ಹಾಗೂ ಆಟದ ಮೈದಾನದ ಹೆಸರಿನಲ್ಲಿ ಇಲ್ಲದ ವದಂತಿಗಳು, ವಿವಾದಗಳನ್ನು ಸೃಷ್ಟಿಸಿ, ಬರುವ 12ನೇ ತಾರೀಖಿನಂದು ಪುನಃ ಬಂದ್ ಕರೆ ನೀಡಿದ್ದಾರೆ. ನಮ್ಮ ಚಾಮರಾಜಪೇಟೆ ಕ್ಷೇತ್ರದ ಜನ ಪ್ರಜ್ಞಾವಂತರು. ಇಂತಹ ವಿಕೃತ ಮನಸುಗಳು ಬಂದ್ ಗೆ ಕರೆ ನೀಡಿದರೆ ಕಿವಿಗೊಡುವವರಲ್ಲ’ ಎಂದಿದ್ದಾರೆ. 

‘ನಾನು 2005ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಎಲ್ಲರೂ ಅಣ್ಣ ತಮ್ಮಂದಿರಂತೆ ಶಾಂತಿ ಸೌಹಾರ್ದಯುತವಾಗಿ ಬಾಳುತ್ತಿದ್ದೇವೆ. ಇದನ್ನು ಸಹಿಸದ ವಿಕೃತ ಮನಸುಗಳು ಅಶಾಂತಿ ಸೃಷ್ಟಿಸಲು ಈ ರೀತಿ ಹುನ್ನಾರ ಮಾಡುತ್ತಿದ್ದು, ಇದು ಕೇವಲ 2023 ರ ಚುನಾವಣೆಯ ಗಿಮಿಕ್ ಅಲ್ಲದೇ ಮತ್ತೇನೂ ಅಲ್ಲ. ಅಷ್ಟಕ್ಕೂ, ಆಟದ ಮೈದಾನ ತೆಗೆಯುತ್ತೇವೆ ಎಂದು ಯಾರು ಹೇಳಿದವರು. ಊಹಾಪೋಹಗಳಿಗೆ ಯಾರೂ ತಲೆಕಡಿಸಿಕೊಳ್ಳಬೇಕಿಲ್ಲ. ನಾನು ಶಾಸಕನಾಗಿರುವವರೆಗೆ ಆಟದ ಮೈದಾನ ಮತ್ತು ಈದ್ಗಾ ಮೈದಾನ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದಂದು ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ’ ಎಂದಿದ್ದಾರೆ.

ನನ್ನ ಅಧಿಕಾರಾವಧಿಯಲ್ಲಿ ಈದ್ಗಾ ಮೈದಾನದ ಪಾವಿತ್ರ್ಯತೆಯನ್ನು ಎಲ್ಲ ರೀತಿಯಲ್ಲೂ ಕಾಪಾಡಲಾಗುವುದು ಮತ್ತು ಆಟದ ಮೈದಾನ ತೆಗೆಯುವ ಪ್ರಶ್ನೆಯೇ ಇಲ್ಲ. ಚಾಮರಾಜಪೇಟೆಯಲ್ಲಿ ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಾಸಕ ಝಮೀರ್ ಅಹ್ಮದ್ ಖಾನ್  ಸ್ಪಷ್ಟಪಡಿಸಿದರು.

Join Whatsapp