ಭಾರತದ ವನಿತೆಯರಿಗೆ 10 ವಿಕೆಟ್‌ಗಳ ಭರ್ಜರಿ ಜಯ : ಸರಣಿ ಕೈವಶ

Prasthutha|

ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಮತ್ತು ಸ್ಮೃತಿ  ಮಂಧಾನಾ, ಮೊದಲನೇ ವಿಕೆಟ್‌ಗೆ ಗಳಿಸಿದ ದಾಖಲೆಯ 174 ರನ್‌ಗಳ ಅಮೋಘ ಜತೆಯಾಟದ ನೆರವಿನಿಂದ ಭಾರತದ ಮಹಿಳಾ ತಂಡ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2- 0 ಮುನ್ನಡೆ ಸಾಧಿಸಿ, ಏಕದಿನ ಸರಣಿ ವಶಪಡಿಸಿಕೊಂಡಿದೆ. ಇದಕ್ಕೂ ಮೊದಲು ನಡೆದ ಟಿ20 ಸರಣಿಯನ್ನೂ ಭಾರತ 2- 1 ಅಂತರದಲ್ಲಿ ಗೆದ್ದು ಬೀಗಿತ್ತು.

- Advertisement -

ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಅತಿಥೇಯ ಶ್ರೀಲಂಕಾ, ಕೇವಲ 173 ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಗಿತ್ತು. ಸುಲಭ ಗುರಿ ಬೆನ್ನಟ್ಟಿದ ಭಾರತ, ಯಾವುದೇ ವಿಕೆಟ್‌ ಕಳೆದುಕೊಳ್ಳದೆ 25.4 ಓವರ್‌ಗಳಲ್ಲಿ ಗುರಿ ತಲುಪಿತು. ಸ್ಮೃತಿ ಮಂಧಾನಾ 94 ರನ್‌ ಮತ್ತು (83 ಎಸೆತ, 1×6, 11×4), ಶೆಫಾಲಿ ವರ್ಮಾ 71 ರನ್‌ (71 ಎಸೆತ, 1×6, 4×4) ಗಳಿಸುವ ಮೂಲಕ ಇನ್ನೂ 140 ಎಸೆತಗಳು ಬಾಕಿ ಇರುವಂತೆಯೇ, ತಂಡವನ್ನು ಅನಾಯಾಸವಾಗಿ ಗೆಲುವಿನ ಗುರಿ ಮುಟ್ಟಿಸಿದರು.

ಲಯ ತಪ್ಪಿದ ಲಂಕಾ ಬ್ಯಾಟಿಂಗ್‌

- Advertisement -

ಟಾಸ್ ಗೆದ್ದ ಭಾರತ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಆದರೆ ರನ್‌ ಗಳಿಸಲು ಒದ್ದಾಡಿದ ಲಂಕಾ ವನಿತೆಯರು ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿದರು. ಆರಂಭಿಕ ಆಟಗಾರ್ತಿಯರಾದ ಹಸಿನಿ ಪೆರಾರ ಶೂನ್ಯಕ್ಕೆ ಮತ್ತು ವಿಶ್ಮಿ ಗುಣರತ್ನೆ  ಮೂರು ರನ್‌ ಗಳಿಸುವಷ್ಟರಲ್ಲಿ ರೇಣುಕಾ ಸಿಂಗ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಅಮಾ ಕಾಂಚನ 47 ರನ್‌ ಗಳಿಸಿ ಅಜೇಯರಾಗುಳಿದರು. ಉಳಿದಂತೆ ನೀಲಾಕ್ಷಿ ಡಿ ಸಿಲ್ವಾ 32, ಕೀಪರ್‌ ಅನುಷ್ಕಾ ಸಂಜೀವಿನಿ 25 ರನ್‌ ಗಳಿಸಿದರು. ಮೂವರು ಆಟಗಾರ್ತಿಯರು ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರೆ, ಮೂವರು ಎರಡಂಕಿಯ ಮೊತ್ತ ದಾಟಲಿಲ್ಲ.

ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ರೇಣುಕಾ ಸಿಂಗ್ 28 ರನ್‌ ನೀಡಿ 4 ವಿಕೆಟ್‌ ಪಡೆದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯು ರೇಣುಕಾ ಪಾಲಾಯಿತು. ದೀಪ್ತಿ ಶರ್ಮಾ ಮತ್ತು ಮೇಘನಾ ಸಿಂಗ್‌ ತಲಾ 2 ವಿಕೆಟ್‌ ಪಡೆದರು. ಸರಣಿಯ ಔಪಚಾರಿಕ ಮೂರನೇ ಪಂದ್ಯ ಜುಲೈ 7ರಂದು ಇದೇ ಮೈದಾನದಲ್ಲಿ ನಡೆಯಲಿದೆ.

Join Whatsapp