ಆರ್ಥಿಕ ವಿಷಮ ಪರಿಸ್ಥಿತಿಯಲ್ಲಿ ಪುತ್ತೂರಿಗೆ ಗೋಶಾಲೆ ಬೇಕಾಗಿಲ್ಲ: ಕೆ.ಫಾತಿಮತ್ ಝೊಹರಾ

Prasthutha|

ಪುತ್ತೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ಪುತ್ತೂರು ತಾಲ್ಲೂಕಿನ 738 ಎಕರೆ ಜಮೀನನ್ನು ಗೋಶಾಲೆ ನಿರ್ಮಾಣಕ್ಕಾಗಿ ಜಮೀನು ಪಟ್ಟಿ ಮಾಡುವಂತೆ ಪುತ್ತೂರು ತಾಲ್ಲೂಕಿನ ಶಾಸಕ ಸಂಜೀವ ಮಠಂದೂರು ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಶು ಸಂಗೋಪನಾ ಇಲಾಖೆಗೆ ಆದೇಶ ನೀಡಿರುವುದು ನಿಜಕ್ಕೂ ದುರ್ದೈವ. ಏಕೆಂದರೆ, ಅದೆಷ್ಟೋ ಬಡವರು ಸೂರಿಲ್ಲದೆ, ಚಿಕ್ಕ ಮನೆ ಕಟ್ಟಿಕೊಳ್ಳಲು ಗತಿಯಿಲ್ಲದೆ, ಸ್ವಾವಲಂಬಿ, ಸ್ವಾಭಿಮಾನದ ಬದುಕು ನಡೆಸಲಾಗದೆ ಬಾಡಿಗೆ ಮನೆಗಳಿಗಾಗಿ ಅಲೆಮಾರಿಗಳಂತೆ ಅಲೆದಾಡುತ್ತಿರುವಾಗ 738 ಎಕರೆ ಜಮೀನನ್ನು ಗೋಮಾಳ ನಿರ್ಮಾಣಕ್ಕಾಗಿ ಬಳಸುವುದು ಅಮಾನವೀಯವೇ ಸರಿ. ಆದ್ಯತೆಯ ಅನುಸಾರ ಮೊದಲು ಸರ್ಕಾರ ಬಡವರಿಗಾಗಿ ಸೂರನ್ನು ಕಟ್ಟಿಕೊಟ್ಟು ಪುಣ್ಯದ ಕೆಲಸವನ್ನು ಮಾಡಲಿ ಎಂದು ಪುತ್ತೂರು ನಗರಸಭಾ ಸದಸ್ಯರಾದ ಕೆ.ಫಾತಿಮತ್ ಝೊಹರಾ ಒತ್ತಾಯಿಸಿದ್ದಾರೆ.

- Advertisement -


ಕೊರೋನಾದಿಂದಾಗಿ ಜನಸಾಮಾನ್ಯರು ಕೆಲಸವಿಲ್ಲದೆ, ಹೊಟ್ಟೆಗೆ ಆಹಾರವಿಲ್ಲದೆ, ವಾಸಿಸಲು ಮನೆಯೂ ಇಲ್ಲದೆ ದೃತಿಗೆಟ್ಟಿರುವಾಗ ಸರ್ಕಾರದ ಹಣವನ್ನು ಕೊಂಡುಹೋಗಿ ಗೋಮಾಳಕ್ಕೆ ಸುರಿಯುವುದು ಅರ್ಥಹೀನ. ರಾಜ್ಯದ ಅರ್ಥ ವ್ಯವಸ್ಥೆ ಸುಧಾರಿಸಿದ ಮೇಲೆ, ಜನಸಾಮಾನ್ಯರಿಗೆ ಬದುಕಲು ನೆಲೆಯನ್ನು ಕಲ್ಪಿಸಿ ಕೊಟ್ಟ ಮೇಲೆ ಎಷ್ಟು ಬೇಕಾದರೂ ಗೋಮಾಳವನ್ನು ನಿರ್ಮಾಣ ಮಾಡಲಿ. ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮೂಲಸೌಕರ್ಯದಿಂದ ವಂಚಿತರಾದವರ ಪಟ್ಟಿಯನ್ನು ತಯಾರಿಸಿ ಮೊದಲು ಅವರಿಗೆ ಬೇಕಾದ ಸೌಲಭ್ಯವನ್ನು ಒದಗಿಸಿಕೊಡಲು ಶಾಸಕರು ಪ್ರಯತ್ನಿಸಬೇಕು ಎಂದು ಫಾತಿಮತ್ ಝೊಹರಾ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp