ಭಯೋತ್ಪಾದನೆ ತಡೆ ಕಾಯ್ದೆಯನ್ನು ಬಳಸಿ ಭಿನ್ನಮತ ದಮನಿಸಲು ಯತ್ನಿಸಬಾರದು: ನ್ಯಾಯಮೂರ್ತಿ ಚಂದ್ರಚೂಡ್

Prasthutha|

ನವದೆಹಲಿ: ಭಯೋತ್ಪಾದನೆ ತಡೆ ಕಾಯ್ದೆ ಅಥವಾ ಅಪರಾಧ ತಡೆಯ ಇನ್ನಾವುದೇ ಕಾನೂನನ್ನು ಬಳಸಿಕೊಂಡು ಭಿನ್ನಮತವನ್ನು ದಮನ ಮಾಡಲು ಯತ್ನಿಸಬಾರದು. ಒಂದೇ ಒಂದು ದಿನದ ಮಟ್ಟಿಗಾದರೂ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿಯುವುದು ಅತಿಯಾದ ನಡವಳಿಕೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಹೇಳಿದ್ದಾರೆ.
ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ‘ರಕ್ಷಣೆಯ ಮೊದಲ ಹಂತ’ದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -


ಭಾರತ- ಅಮೆರಿಕ ಕಾನೂನು ಬಾಂಧವ್ಯ ಕುರಿತು ನಡೆದ ಜಂಟಿ ಬೇಸಿಗೆ ಸಮಾವೇಶದಲ್ಲಿ ಅವರು ಮಾತನಾಡಿದರು. ಪೌರರಿಗೆ ಕಿರುಕುಳ ನೀಡಲು ಮತ್ತು ಅವರ ಸ್ವಾತಂತ್ರ್ಯವನ್ನು ಕಸಿಯಲು ಯಾವ ಕಾಯ್ದೆಯೂ ಬಳಕೆ ಆಗಬಾರದು ಎಂದು ಅವರು ಹೇಳಿದ್ದಾರೆ.
ಸ್ಟ್ಯಾನ್ ಸ್ವಾಮಿ ಅವರು ಸೆರೆಯಲ್ಲಿರುವಾಗಲೇ ಮೃತಪಟ್ಟ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದರ ನಡುವೆಯೇ ಚಂದ್ರಚೂಡ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.


ಎಲ್ಗಾರ್ ಪರಿಷತ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ಟ್ಯಾನ್ ಸ್ವಾಮಿ ಅವರನ್ನು ಭಯೋತ್ಪಾದನೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಜಾಮೀನು ಅರ್ಜಿಯು ವಿಚಾರಣೆ ಹಂತದಲ್ಲಿರುವಾಗಲೇ ಅವರು ಕಳೆದ ವಾರ ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಅಸ್ಸಾಂನ ಹೋರಾಟಗಾರ ಅಖಿಲ್ ಗೊಗೊಯಿ ಅವರು 17 ತಿಂಗಳ ಜೈಲುವಾಸದ ಬಳಿಕ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದಾರೆ. ಇದರ ಬೆನ್ನಲ್ಲೇ ಚಂದ್ರಚೂಡ್ ಪ್ರತಿಪಾದನೆ ಮಹತ್ವ ಪಡೆದುಕೊಂಡಿದೆ.

Join Whatsapp