ಆಗ್ರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಕಾರ್ಯಕರ್ತನೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆಗ್ರಾ ಸಮೀಪದ ಫಿರೋಝಾಬಾದ್ ನ ಮಹಿಳೆಯೋರ್ವರು ಆರೋಪಿಸಿದ್ದಾರೆ.
ತನ್ನ ಮನೆಗೆ ಬಂದು ಹೋಗುತ್ತಿದ್ದ ಸ್ಥಳೀಯ ಆರೆಸ್ಸೆಸ್ ಸ್ವಯಂಸೇವಕನೋರ್ವ ತನಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ಆಗ ತಾನು ಆತನನ್ನು ಅಲ್ಲಿಂದ ತೆರಳುವಂತೆ ಮತ್ತು ಇನ್ನೆಂದಿಗೂ ಮನೆಗೆ ಬಾರದಂತೆ ಎಚ್ಚರಿಸಿದ್ದೆ ಎಂದು ಮಹಿಳೆ ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ ವ್ಯಕ್ತಿ ಬಲವಂತವಾಗಿ ಮನೆಯನ್ನು ಪ್ರವೇಶಿಸಿದ್ದು ಬಂದೂಕು ತೋರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಘಟನೆಯ ವೇಳೆ ಮಹಿಳೆಯ ಅತ್ತಿಗೆ ಬಂದಿದ್ದು, ಈ ಸಂದರ್ಭದಲ್ಲಿ ಆತ ಹೊರಟು ಹೋಗಿದ್ದಾನೆ. ತಾನು ಆರೆಸ್ಸೆಸ್ ಸ್ವಯಂಸೇವಕನಾಗಿದ್ದು, ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆತ ಹೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ತಾನು ರಾತ್ರಿಯೇ ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಮರುದಿನ ಬೆಳಗ್ಗೆಯಷ್ಟೇ ಬಂದರು ಎಂದು ಮಹಿಳೆ ಆರೋಪಿಸಿದ್ದಾರೆ.