ಆತ್ಮ ಬರ್ಬರ ಭಾರತ – ಪ್ಯಾಕೇಜ್ ಎಂಬ ತುಟಿ ತುಪ್ಪ!

Prasthutha|

– ಅನೀಸ್ ಅಹ್ಮದ್, ಬೆಂಗಳೂರು

- Advertisement -

ದೇಶದ ಆರ್ಥಿಕ ವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಈ ಬಗ್ಗೆ ಸರಕಾರವು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿತ್ತು. ಸರಕಾರವು  ವಾಸ್ತವಿಕವಾದ ಒಂದು ಯೋಜನೆಯನ್ನು ತರಬಹುದೆಂದು ಜನರು ನಿರೀಕ್ಷಿಸುತ್ತಿದ್ದಂತೆಯೇ, ಸರಕಾರವು ‘ಆತ್ಮ ನಿರ್ಭರ್ ಭಾರತ್’ ಎಂಬ ಘೋಷಣೆಯನ್ನು ತಂದಿತು. ಅಂದರೆ ‘ತಮ್ಮನ್ನು ತಾವೇ ನಿಭಾಯಿಸಿಕೊಳ್ಳಿ’ ಎಂದಾಗಿದೆ ಇದರ ಅರ್ಥ. ಜನರು ಏನಾದರೂ ಆಗ್ರಹಿಸಿದರೆ ಯಾವುದಾದರೊಂದು ಘೋಷಣೆ ಕೊಟ್ಟು ಬಿಡುವುದು ಈ ಸರಕಾರಕ್ಕೆ ಅಭ್ಯಾಸವಾಗಿಬಿಟ್ಟಿದೆ. ಈ ಸರಕಾರವು ಅಧಿಕಾರಕ್ಕೇರಿರುವುದೇ ಅಚ್ಛೇ ದಿನ್ ಆನೇ ವಾಲೆ ಹೈ, ಮೇಕ್ ಇನ್ ಇಂಡಿಯಾ ಮೊದಲಾದ ವಿವಿಧ ರೀತಿಯ ಘೋಷಣೆಗಳ ಮೂಲಕವಾಗಿದೆ. ‘ಆತ್ಮ ನಿರ್ಭರ್ ಭಾರತ್’ ಅದಕ್ಕೊಂದು ಹೊಸ ಸೇರ್ಪಡೆಯಷ್ಟೇ. ಇದಕ್ಕೊಂದು ಪ್ಯಾಕೇಜ್ ಕೂಡ ನೀಡಲಾಯಿತು. 20 ಲಕ್ಷ ಕೋಟಿ ರೂಪಾಯಿಯ ಈ ಪ್ಯಾಕೇಜ್, ಭಾರತದ ಜಿಡಿಪಿಯ ಶೇ.10ರಷ್ಟಾಗಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಜನರು ಕೂಡ ಇದು ಸರಕಾರ ಕೈಗೊಂಡ ಅತ್ಯಂತ ದೊಡ್ಡ ಕ್ರಮ ಎಂಬುದಾಗಿ ನಂಬಿ ಕುಳಿತರು.

ನಂತರ ದಿನಗಳಲ್ಲಿ ನಾವು ಗಮನಿಸಿದರೆ, 5 ದಿನಗಳಲ್ಲಿ ಹಂತ ಹಂತವಾಗಿ ಇದನ್ನು ಘೋಷಿಸಲಾಯಿತು. ಇಲ್ಲಿ ಪ್ಯಾಕೇಜ್ ಘೋಷಿಸಿದ ದಿನದಂದೇ ಇದರ ಬಗ್ಗೆ ಏಕೆ ವಿವರಣೆ ನೀಡಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಯಾಕೆಂದರೆ ಈ ಸರಕಾರವು ಒಂದು ಸುದ್ದಿ ಸೃಷ್ಟಿಸುವ, ಅದೇ ರೀತಿ ವ್ಯಾಪಾರಿ ಮನೋಸ್ಥಿತಿಯ ಸರಕಾರವಾಗಿದೆ. ಸಂಪೂರ್ಣ ವಿವರಗಳನ್ನು ಒಂದೇ ಬಾರಿಗೆ ನೀಡಲು ಸಾಧ್ಯವಿದ್ದರೂ, ಹಣಕಾಸು ಸಚಿವರು ಒಟ್ಟು ಐದು ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಯಾಕೆಂದರೆ, ಮೊದಲೇ ದೇಶದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಕಾರ್ಮಿಕರು, ರೈತರು, ಬಡವರು, ವೈದ್ಯಕೀಯ ವೃತ್ತಿಪರರ ಸ್ಥಿತಿಗತಿಯು ತುಂಬಾ ಶೋಚನೀಯವಾಗಿದೆ. ಈ ಎಲ್ಲಾ ಸುದ್ದಿಗಳು ನ್ಯೂಸ್ ಚಾನೆಲ್‌ಗಳಲ್ಲಿ ಪ್ರಸಾರವಾಗಬಾರದು ಮತ್ತು ಮುಂದಿನ ಐದು ದಿನಗಳ ವರೆಗೆ ಸರಕಾರದ ಪ್ಯಾಕೇಜಿನ ಸುದ್ದಿ ಅಗ್ರ ಪಂಕ್ತಿಯಲ್ಲಿರಬೇಕೆಂಬ ದುರುದ್ದೇಶವು ಇದರ ಹಿಂದೆ ಅಡಗಿತ್ತು. ಈ ಅಮಾನವೀಯ ದುರಂತದ ಸುದ್ದಿಯನ್ನು ತೆರೆಮರೆಗೆ ಸರಿಸಲೆಂದೇ ಇದನ್ನು ಐದು ದಿನಗಳ ಸುದ್ದಿಯನ್ನಾಗಿ ಮಾಡಲಾಯಿತು. ಹೀಗೆ ವಾಸ್ತವಿಕ ವಿಚಾರಗಳನ್ನು ಮರೆಮಾಚಲು ಈ ಸರಕಾರವು ಹೊಸ ಹೊಸ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕಾಗಿದೆ.

- Advertisement -

ಈ ಉತ್ತೇಜಕ ಪ್ಯಾಕೇಜ್ ಘೋಷಿಸಿದೊಡನೆ ಜನರು, ಸರಕಾರವು ಇನ್ನು 20 ಲಕ್ಷ ಕೋಟಿ ಖರ್ಚು ಮಾಡಲಿದೆ ಎಂದು ಭಾವಿಸಿದರು. ಈ 20 ಲಕ್ಷ ಕೋಟಿ ಪ್ಯಾಕೇಜ್ ನೈಜ ಮುಖವಾಡ ಕಳಚಲು ಹೆಚ್ಚು ಸಮಯ ಹಿಡಿಯಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಆರ್ಥಿಕ ತಜ್ಞರು, ಮೊದಲೇ ಘೋಷಿಸಲಾಗಿದ್ದ ಕೆಲವೊಂದು ವಿಚಾರಗಳನ್ನು ಇದರೊಳಗೆ ತುರುಕಿಸಿಕೊಂಡು ಒಂದು ಅಂಕಿಯನ್ನು ನೀಡಲಾಗಿದೆ ಎಂಬ ವಿಚಾರವನ್ನು ಮರುದಿನವೇ ಬಹಿರಂಗಪಡಿಸಿದರು. ಅಂದರೆ ಮಾರ್ಚ್ ತಿಂಗಳಲ್ಲಿ ಘೋಷಿಸಲಾಗಿದ್ದ 1 ಲಕ್ಷ 92 ಸಾವಿರದ ಉತ್ತೇಜಕ ಪ್ಯಾಕೇಜ್, ಆರ್‌ಬಿಐನ 8 ಲಕ್ಷ ಕೋಟಿಯ ಪರಿಹಾರವನ್ನೂ ಇದರಲ್ಲಿ ಸೇರಿಸಲಾಗಿದೆ. ಇವೆಲ್ಲವನ್ನೂ ಜೊತೆಗೂಡಿಸಿ 20 ಲಕ್ಷ ಕೋಟಿಯ ಪ್ಯಾಕೇಜ್ ಎಂದು ತೋರಿಸಲಾಯಿತು. ಇನ್ನು 20 ಲಕ್ಷ ಕೋಟಿಯ ಪ್ಯಾಕೇಜ್ ಅನ್ನು ಸರಕಾರವು ಖರ್ಚು ಮಾಡಲಿದೆಯೇ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ.

ಇದರ ಬಗ್ಗೆ ಅಧ್ಯಯನ ನಡೆಸಿದ ಹಲವಾರು ಆರ್ಥಿಕ ತಜ್ಞರು, ಸರಕಾರವು 2.5 ಲಕ್ಷ ಕೋಟಿಯಿಂದ 3.5 ಲಕ್ಷ ಕೋಟಿಯ ವರೆಗೆ ಮಾತ್ರ ಖರ್ಚು ಮಾಡಲಿದೆ ಎಂದು ಹೇಳಿದರು. ಇದನ್ನು ಆರ್ಥಿಕ ವೆಚ್ಚ ಎಂದು ಕರೆಯುತ್ತೇವೆ. ಆರ್ಥಿಕ ವೆಚ್ಚ ಎಂದರೆ, ಸರಕಾರವು ಒಂದು ವರ್ಷದಲ್ಲಿ ಎಷ್ಟು ಖರ್ಚು ಮಾಡಲಿದೆ ಎಂಬುದಾಗಿದೆ. ಅಂದರೆ 20 ಲಕ್ಷ ಕೋಟಿಯ ಬಗ್ಗೆ ಜಂಭಕೊಚ್ಚಿಕೊಳ್ಳುವ ಸರಕಾರವು ವಾಸ್ತವದಲ್ಲಿ 2.5 ಲಕ್ಷ ಕೋಟಿಯಿಂದ 3.5 ಲಕ್ಷ ಕೋಟಿಯ ವರೆಗೆ ಮಾತ್ರ ಖರ್ಚು ಮಾಡಲಿದೆ. ಇದರ ಬಗ್ಗೆ ವಿವಿಧ ಆರ್ಥಿಕ ತಜ್ಞರು ವಿವಿಧ ಅಂಕಿಗಳನ್ನು ತಿಳಿಸಿದ್ದಾರೆ. ಉದಾಹರಣೆ ನೋಡುವುದಾದರೆ, ಮೊದಲಿಗೆ 1.92 ಕೋಟಿಯ ಉತ್ತೇಜಕ ಪ್ಯಾಕೇಜ್ ಘೋಷಿಸಲಾಗಿತ್ತು. ಅದರಲ್ಲಿ ಸರಕಾರ ಗರಿಷ್ಠ ಖರ್ಚು ಮಾಡುವುದು 95,800 ಕೋಟಿಯನ್ನು. ಎರ್‌ಬಿಐ ವತಿಯಿಂದ ಬಂದಿದ್ದ 8 ಲಕ್ಷ ಕೋಟಿಯ ಪರಿಹಾರ ಕ್ರಮದಲ್ಲಿ ಸರಕಾರದಿಂದ ಯಾವುದೇ ಖರ್ಚು ಆಗುವುದಿಲ್ಲ. ಅದರಲ್ಲಿ ಸರಕಾರದ ಆರ್ಥಿಕ ವೆಚ್ಚವು ಶೂನ್ಯವಾಗಿರಲಿದೆ. ಮೊದಲ ಪತ್ರಿಕಾಗೋಷ್ಠಿಯಲ್ಲಿ ತೋರಿಸಲಾದ 5.94 ಕೋಟಿಯ ಪ್ಯಾಕೇಜ್‌ನಲ್ಲಿ ಸರಕಾರದ ಆರ್ಥಿಕ ವೆಚ್ಚವು 16,500ರಿಂದ 55,000 ಕೋಟಿ ಆಗಿರಲಿದೆ. ಅಂದರೆ ತಿಳಿಸಲಾದ ಪ್ರಮಾಣದಷ್ಟಿಲ್ಲ.

ಎರಡನೇ ಪತ್ರಿಕಾಗೋಷ್ಠಿಯಲ್ಲಿ ಮಾಡಿದ 3.10 ಲಕ್ಷ ಕೋಟಿಯ ಘೋಷಣೆಯಲ್ಲಿ ಸರಕಾರಕ್ಕೆ 5ರಿಂದ 14.750 ಕೋಟಿ ಆರ್ಥಿಕ ವೆಚ್ಚವಾಗಲಿದೆ. ಮೂರನೇಯದರಲ್ಲಿ ತೋರಿಸಿರುವಂತೆ, 1.50 ಲಕ್ಷ ಕೋಟಿಯಲ್ಲಿ ಗರಿಷ್ಠ 30 ಸಾವಿರ ಕೋಟಿ ಖರ್ಚಾಗಲಿದೆ. ಅಂದರೆ ಒಟ್ಟು ಘೋಷಣೆಯು 20 ಲಕ್ಷ ಕೋಟಿ ಆಗಿರುವುದಿಲ್ಲ. ಎಲ್ಲವನ್ನೂ ಜೊತೆಗೂಡಿಸಿದರೆ 20,97,053 ಕೋಟಿ ಆಗಲಿದೆ. ಒಟ್ಟು ಆರ್ಥಿಕ ವೆಚ್ಚವು 1,65,400ರಿಂದ 2,43,650 ಕೋಟಿ ಆಗಲಿದೆ. ಇತರ ಕೆಲವು ತಜ್ಞರು ಹೇಳುವಂತೆ, ಅದು ಗರಿಷ್ಠ 3.4 ಲಕ್ಷ ಕೋಟಿ ಆಗಬಹುದು. ಅಂದರೆ ಜಿಡಿಪಿಯ ಶೇ.10ರಷ್ಟು ಎಂದು ಹೇಳಲಾಗುತ್ತಿದ್ದ ವಿಚಾರವು ಶೇ.10ರಷ್ಟಲ್ಲ. ಬದಲಿಗೆ ಗರಿಷ್ಠವೆಂದರೆ ಶೇ.1.3ರಷ್ಟಾಗಬಹುದು. ಅಂದರೆ ಶೇ.0.7ರಿಂದ ಶೇ.1.3ರ ವರೆಗೆ ಬರಹುದು. ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಆರ್ಥಿಕತೆಯನ್ನು ಸುಧಾರಿಸಲು ಸರಕಾರವು ಜಿಡಿಪಿಯ ಕನಿಷ್ಠ ಶೇ.3ರಷ್ಟು ವೆಚ್ಚವನ್ನು ಮಾಡಬೇಕೆಂಬುದು ಜನತೆ ಮತ್ತು ಆರ್ಥಿಕ ತಜ್ಞರ ಬೇಡಿಕೆಯಾಗಿತ್ತು. ಆದರೆ ಹೊರಗೆ ಬಹಳಷ್ಟು ಪ್ರಚಾರ ನೀಡಲಾದ ಪ್ಯಾಕೇಜ್ ಒಳಗೆ ಬಹಳಷ್ಟು ಟೊಳ್ಳಾಗಿತ್ತು. ಇದಾಗಿರುತ್ತದೆ 20 ಲಕ್ಷ ಕೋಟಿ ಪ್ಯಾಕೇಜ್‌ನ ಸಂಕ್ಷಿಪ್ತ ವಿವರಣೆ.

ಎರಡನೇಯಾಗಿ ಗಮನಿಸಿದರೆ, ಆರ್ಥಿಕತೆಯ ಶೇ.3ರಷ್ಟನ್ನು ಏಕೆ ಖರ್ಚು ಮಾಡಬೇಕೆಂದು ಸರಕಾರವನ್ನು ಏಕೆ ಆಗ್ರಹಿಸಲಾಯಿತೆಂದರೆ,  ಭಾರತದ ಜಿಡಿಪಿ ಕಳೆದ 40 ವರ್ಷಗಳಲ್ಲೇ ತೀವ್ರವಾಗಿ ಕುಸಿದು ಅತ್ಯಂತ ಕೆಟ್ಟ ಜಿಡಿಪಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಆಡಳಿತ ಮತ್ತು ಆರ್ಥಿಕತೆಯನ್ನು ಸುಧಾರಿಸಬೇಕಾದರೆ ಸರಕಾರವು ಶೇ.3ರಷ್ಟು ವೆಚ್ಚವನ್ನು ಮಾಡಬೇಕಾಗುತ್ತದೆ. ಮೊದಲು ಜಿಡಿಪಿ ಏನೆಂದು ಸರಳವಾಗಿ ಅರಿತುಕೊಳ್ಳೋಣ. ಜಿಡಿಪಿಯಲ್ಲಿ ನಾಲ್ಕು ಮಹತ್ವದ ಅಂಶಗಳಿರುತ್ತವೆ. ಒಂದನೇಯದಾಗಿ ವ್ಯಕ್ತಿಯೊಬ್ಬ ಎಷ್ಟು ಖರ್ಚು ಮಾಡುತ್ತಾನೆ, ಎರಡನೇಯದಾಗಿ ಸಣ್ಣ ಮತ್ತು ದೊಡ್ಡ ಉದ್ಯಮಿಗಳು ಎಷ್ಟು ಖರ್ಚು ಮಾಡುತ್ತಾರೆ, ಮೂರನೇಯದಾಗಿ ಸರಕಾರವು ಎಷ್ಟು ಖರ್ಚು ಮಾಡುತ್ತದೆ, ನಾಲ್ಕನೇಯದಾಗಿ ಆಮದು-ರಫ್ತು. ಇವೆಲ್ಲವನ್ನು ಒಗ್ಗೂಡಿಸಿದರೆ ಆಗುವುದೇ ನಮ್ಮ ದೇಶದ ಜಿಡಿಪಿ. ಇದೀಗ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಖರ್ಚು ಮಾಡಲು ವ್ಯಕ್ತಿಯ ಬಳಿ ಹಣವಿಲ್ಲ, ದೊಡ್ಡ ದೊಡ್ಡ ಉದ್ಯಮಿಗಳು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ,  ಅವರಿಂದಲೂ ಖರ್ಚು ಕಡಿಮೆಯಾಗಲಿದೆ. ಮೂರನೇಯದಾಗಿ ಜಾಗತಿಕ ಮಾರುಕಟ್ಟೆಯೂ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇನ್ನು ಅಲ್ಲಿ ಕೂಡ ಆಮದು-ರಫ್ತಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಇನ್ನು ಉಳಿದಿರುವುದು ಸರಕಾರ ಮಾತ್ರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಮಾತ್ರವೇ ಖರ್ಚು ಮಾಡಬಲ್ಲುದು ಎಂಬ ಕಾರಣಕ್ಕಾಗಿ ಕನಿಷ್ಠ ಶೇ.3ರಷ್ಟು ಖರ್ಚು ಮಾಡಬೇಕೆಂದು ಸರಕಾರದ ಮುಂದೆ ಬೇಡಿಕೆ ಇಡಲಾಗಿತ್ತು. ಆದರೆ ಅದು ಈ ವಿಚಾರವನ್ನು ಒಪ್ಪಿಕೊಂಡಿಲ್ಲ.

ಆರ್ಥಿಕ ಉತ್ತೇಜಕ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಮೊದಲನೇಯದಾಗಿ ನೋಡುವುದಾದರೆ, ಇಷ್ಟೊಂದು ದೊಡ್ಡ ಮಟ್ಟದ ಪ್ಯಾಕೇಜ್ ಘೋಷಣೆ ಮಾಡಿ ಜನರನ್ನು ದಾರಿ ತಪ್ಪಿಸಲಾಗಿದೆ. ಭಾರೀ ಎಂದು ಬಿಂಬಿಸಲಾಗಿರುವ ಈ ಪ್ಯಾಕೇಜ್‌ನಲ್ಲಿ ವಾಸ್ತವದಲ್ಲಿ ಬಯಸಿದ್ದೇನೂ ಇಲ್ಲ. ಎರಡನೇಯದಾಗಿ ಈ ಪ್ಯಾಕೇಜ್‌ನಲ್ಲಿ ಜನರಿಗೆ ನೇರವಾಗಿ ತಲುಪಬಹುದಾಗಿದ್ದ ಗರಿಷ್ಠ 70 ಸಾವಿರ ಕೋಟಿ ವಿಚಾರವೂ ಅರ್ಥಹೀನ. ಕನಿಷ್ಠ 6ರಿಂದ 7 ಸಾವಿರದ ವರೆಗಿನ ಮೊತ್ತವನ್ನು ವಲಸಿಗ ಜನರ ಖಾತೆಗೆ ವರ್ಗಾಯಿಸಬೇಕೆಂದು ಜನರು ಆಗ್ರಹಿಸಿದ್ದರು. ಆದರೆ ಆ ರೀತಿ ನಡೆಯುವ ಹಾಗೆ ಕಂಡು ಬರುತ್ತಿಲ್ಲ. ಏಕೆಂದರೆ, ಜನರನ್ನು ಗುರುತಿಸಿ ಅವರ ಬಳಿಗೆ ಪರಿಹಾರ ಮೊತ್ತವನ್ನು ತಲುಪಿಸುವಂತಹ ವ್ಯವಸ್ಥೆಯೇ ಸರಕಾರದ ಬಳಿ ಇಲ್ಲ. ಈ ಹಿಂದೆ ಉದ್ಯೋಗ ಖಾತರಿ ಯೋಜನೆಯ ಕುರಿತು ನರೇಂದ್ರ ಮೋದಿ, ಇದೊಂದು ಕೆಲಸಕ್ಕೆ ಬಾರದ ವಿಫಲ ಯೋಜನೆ ಎಂದು ಜರೆದಿದ್ದರು. ಆದರೆ ಇಂದು ಅವರದೇ ಸರಕಾರ ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ನೀಡುತ್ತಿದೆ. ಏಕೆಂದರೆ, ಅರ್ಹರಿಗೆ ಸಮರ್ಪಕವಾಗಿ ಹಣ ತಲುಪುವುದನ್ನು ಖಾತರಿಪಡಿಸುವಂತಹ ಯಾವುದೇ ವ್ಯವಸ್ಥೆಯನ್ನು ಕಳೆದ 6 ವರ್ಷಗಳಲ್ಲಿ ಸರಕಾರ ಮಾಡಿಲ್ಲ ಎಂಬುದು ಅವರಿಗೆ ಈಗ ಸ್ಪಷ್ಟವಾಗಿದೆ. ಅಂತಹ ಒಂದು ಸೂಕ್ತ ವ್ಯವಸ್ಥೆ ಇದ್ದರೆ ಅದು ಉದ್ಯೋಗ ಖಾತರಿ ಯೋಜನೆ ಮಾತ್ರವಾಗಿದೆ. ಅದನ್ನು ಕೂಡ ಜಾರಿಗೆ ತಂದಿದ್ದು ಹಿಂದಿನ ಸರಕಾರವಾಗಿತ್ತು. ಕಳೆದ 6 ವರ್ಷಗಳಲ್ಲಿ ದೊಡ್ಡ ದೊಡ್ಡ ಘೋಷಣೆ ಮಾಡಿದ್ದೇ ಪ್ರಸ್ತುತ ಸರಕಾರದ ಸಾಧನೆಯಾಗಿದೆ.

ಮೂರನೇಯದಾಗಿ ಯಾವ ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಿ ನಿರ್ಧಾರ ಕೈಗೊಳ್ಳಬೇಕಾಗಿತ್ತೋ, ಆ ಚರ್ಚೆಗಳನ್ನು ಆರ್ಥಿಕ ಬಿಕ್ಕಟ್ಟು ಮತ್ತು ಲಾಕ್‌ಡೌನ್ ಅನ್ನು ಬಳಸಿಕೊಂಡು ಸರಕಾರವು ತಡೆಹಿಡಿಯುತ್ತಿದೆ. ಹೊರಗಿನ ಕಂಪೆನಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎಂಬುದನ್ನು ಎಫ್‌ಡಿಐ(ವಿದೇಶೀ ನೇರ ಹೂಡಿಕೆ) ನಿರ್ಧರಿಸುತ್ತದೆ. ಎನ್‌ಡಿಎ-1 ರಚನೆಯಾದಾಗ ರಕ್ಷಣಾ ಕ್ಷೇತ್ರದಲ್ಲಿ ಶೇ.49 ಹೂಡಿಕೆಗೆ ಅವಕಾಶ ನೀಡಿತ್ತು. ಬಹಳಷ್ಟು ಪ್ರತಿಭಟನೆಗಳ ಬಳಿಕವೂ ಶೇ.49 ಹೂಡಿಕೆಯನ್ನು ನಿಶ್ಚಯಿಸಲಾಗಿತ್ತು. ಇದೀಗ ಲಾಕ್‌ಡೌನ್ ಮತ್ತು ಸ್ಥಗಿತಗೊಂಡಿರುವ ಪಾರ್ಲಿಮೆಂಟ್‌ಅನ್ನು ಬಳಸಿಕೊಂಡು ಯಾವುದೇ ಚರ್ಚೆಯಿಲ್ಲದೇ ಸರಕಾರವು ರಕ್ಷಣಾ ಕ್ಷೇತ್ರದ ಮೇಲಿನ ಹೂಡಿಕೆಯನ್ನು ಶೇ.49ರಿಂದ ಶೇ.74ಕ್ಕೆ ಹೆಚ್ಚಿಸಿದೆ. ಅಂದರೆ ಒಂದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಇಲ್ಲಿ ದುರ್ಬಲಗೊಳಿಸಲಾಗಿದೆ. ಈ ಮೂಲಕ ಭಾರತೀಯ ಕಂಪೆನಿಗಳನ್ನು ಲೂಟಿ ಮಾಡಿ ವಿದೇಶೀ ಕಂಪೆನಿಗಳಿಗೆ ಯಥೇಚ್ಛ ಲಾಭಗಿಟ್ಟಿಸಲು ಅವಕಾಶ ಕಲ್ಪಿಸಲಾಗಿದೆ.

ಕೊನೇಯದಾಗಿ ಈ ಪ್ಯಾಕೇಜ್‌ನಲ್ಲಿ ನಿಕಟ ಬಂಡವಾಳಶಾಹಿ (ಕ್ರೋನಿ ಕ್ಯಾಪಿಟಲ್) ನೆರಳು ಢಾಳಾಗಿ ಕಾಣಿಸುತ್ತಿದೆ. ಸರಕಾರವು ಕೆಲವು ಬಂಡವಾಳಶಾಹಿಗಳನ್ನು ಮತ್ತು ಉದ್ಯಮ ಕೇಂದ್ರಗಳಿಗೆ ಅತೀವ ನೆರವು ನೀಡುತ್ತದೆ ಮತ್ತು ಈ ಸರಕಾರವು ನೇರವಾಗಿ ಅವರಿಗೆ ಲಾಭ ತಂದುಕೊಡುವ ನೀತಿಯನ್ನು ರೂಪಿಸುತ್ತದೆ. ಇದನ್ನು ಕ್ರೋನಿ ಕ್ಯಾಪಿಟಲ್ ಅನ್ನಲಾಗುತ್ತದೆ. ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. 2019ರಲ್ಲಿ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗಿದ್ದು, ಇವೆಲ್ಲವೂ 50 ವರ್ಷಗಳ ಭೋಗ್ಯಕ್ಕೆ ಅದಾನಿ ಗ್ರೂಪ್‌ಗೆ ದಕ್ಕಿತು. ಇದು ನಮ್ಮ ಪ್ರಧಾನಿಯವರ ಅತ್ಯಂತ ನಿಕಟವಾಗಿರುವ ಒಂದು ಗ್ರೂಪ್ ಆಗಿದೆ. ಈ 6ರ ಜೊತೆಗೆ ಇನ್ನೂ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವುದಾಗಿ ಸರಕಾರವು ಹೇಳಿದೆ. ಇಂದು ಬಹಳಷ್ಟು ಕಾರ್ಪೊರೇಟ್‌ಗಳ ಕೈಯಲ್ಲೂ ಹಣವಿಲ್ಲದ ಒಂದು ಸನ್ನಿವೇಶವಿದೆ. ಪ್ರಸ್ತುತ ಸಮಯವು ಯಾರು ಕೂಡ ಬಿಡ್ಡಿಂಗ್ ನಡೆಸಲಾರದ ಒಂದು ಪರಿಸ್ಥಿತಿಯಾಗಿದೆ. ಇದೀಗ ಹಣ ಕೇವಲ 2-3 ಕಾರ್ಪೊರೇಟ್‌ಗಳ ಬಳಿ ಇರಬಹುದು. ಇಂತಹ ಕಾರ್ಪೊರೇಟ್‌ಗಳು ನಮ್ಮ ಪ್ರಧಾನಿಯವರಿಗೆ ಮತ್ತು ಸರಕಾರಕ್ಕೆ ಬಹಳ ನಿಕಟವಾಗಿರುವವರು. ಇವರಿಗೆ ನಿರಂತರವಾಗಿ ದೇಣಿಗೆ ನೀಡುವ, ಚುನಾವಣಾ ದೇಣಿಗೆ ನೀಡಿ ತಮ್ಮ ವಿಮಾನಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಅವಕಾಶ ಕಲ್ಪಿಸುವವರಲ್ಲಷ್ಟೇ ಹಣವಿರಬಹುದು. ಇಂತಹ ಒಂದು ಕೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ಸಹಜವಾಗಿ ಈ ವ್ಯಕ್ತಿಗಳೇ ಇದಕ್ಕೆ ಬಿಡ್ಡಿಂಗ್ ನಡೆಸಬಹುದು. ಅಂದರೆ ಪರೋಕ್ಷವಾಗಿ ನೋಡುವುದಾದರೆ, ಹಣಬಲವಿರುವ ಅದಾನಿ, ಅಂಬಾನಿಯಂತಹವರ ಕೆಲವೇ ಕಂಪೆನಿಗಳಿಗೆ ಲಾಭ ತಂದುಕೊಡಲು ಈ ಬಿಡ್ಡಿಂಗ್ ಅನ್ನು ಘೋಷಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಬಹಳಷ್ಟು ಪ್ರಚಾರಪಡಿಸಿ ಘೋಷಿಸಲಾದ 20 ಲಕ್ಷ ಕೋಟಿಯ ಪ್ಯಾಕೇಜ್ ಜನಸಾಮಾನ್ಯರಿಗೆ ಯಾವುದೇ ಲಾಭ ತಂದುಕೊಂಡವಥದ್ದಲ್ಲ ಎಂಬುದು ವೇದ್ಯವಾಗುತ್ತದೆ.



Join Whatsapp