ಶಿಕ್ಷಣ ಹಕ್ಕು ಕಾಯಿದೆಗೆ ಒಂದು ದಶಕ; ಅರ್ಧ ಸತ್ಯ ಅರ್ಧ ಸುಳ್ಳು

Prasthutha|

  • ಜಾವೇದ್ ಅನೀಸ್ 

2009ರ ಆಗಸ್ಟ್‌ನಲ್ಲಿ ಭಾರತದ ಸಂಸತ್ತಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಕಾಯ್ದೆಗೆ ಒಪ್ಪಿಗೆಯ ಮುದ್ರೆಯನ್ನು ಒತ್ತಲಾಗಿತ್ತು ಮತ್ತು ಎಪ್ರಿಲ್ 1, 2010ರಂದು ಈ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಲಾಯಿತು. ಇದರ ನಂತರ 6ರಿಂದ 14 ವರ್ಷ ಪ್ರಾಯದ ಭಾರತದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಲಭ್ಯಪಡಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾನೂನಾತ್ಮಕ ಹೊಣೆಗಾರಿಕೆಯಾಯಿತು. ಆರ್‌ಟಿಐ ಅಸ್ತಿತ್ವಕ್ಕೆ ಬಂದಿದ್ದು ಖಂಡಿತವಾಗಿಯೂ ಒಂದು ಐತಿಹಾಸಿಕ ಹೆಜ್ಜೆಯಾಗಿತ್ತು. 6ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಲ್ಪಿಸುವ ಮೂಲಭೂತ ಹಕ್ಕು ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ವಾತಂತ್ರಾ ನಂತರ 62 ವರ್ಷಗಳ ಬಳಿಕ ಇಂತಹ ಕಾನೂನು ಮೊದಲ ಬಾರಿಗೆ ರಚಿಸಲಾಗಿತ್ತು. ಖಂಡಿತವಾಗಿಯೂ ಈ ಕಾನೂನು ತನ್ನದೇ ಆದ ಪರಿಮಿತಿಗಳನ್ನು ಹೊಂದಿದೆ. 6ರಿಂದ ಕಡಿಮೆ ಮತ್ತು 14ರಿಂದ ಅಧಿಕ ಪ್ರಾಯದ ಮಕ್ಕಳನ್ನು ಈ ಕಾಯ್ದೆಯಿಂದ ಹೊರಗಿಟ್ಟಿರುವುದು, ಶಿಕ್ಷಣದ ಗುಣಮಟ್ಟಕ್ಕೆ ಸಾಕಷ್ಟು ಒತ್ತು ನೀಡದಿರುವುದು, ಶೇ.25ರಷ್ಟು ಮೀಸಲಾತಿಯೊಂದಿಗೆ ಖಾಸಗಿ ಶಾಲೆಗಳತ್ತ ಹೊರಳುವುದಕ್ಕೆ ವೇಗ ತರುವಂತಹ ವಿಚಾರಗಳನ್ನು ಇಲ್ಲಿ ಗಮನಿಸಬೇಕಾಗಿದೆ. ಅದೇ ರೀತಿ ಈ ಕಾಯ್ದೆಯ ಪರಿಕಲ್ಪನೆ ಮತ್ತು ಕಳೆದ ಹತ್ತು ವರುಷಗಳಲ್ಲಿ ಇದನ್ನು ಅನುಷ್ಠಾನಕ್ಕೆ ತಂದಿರುವುದರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇದೀಗ ಕಾಯ್ದೆಗೆ ದಶಕ ಕಳೆದಿದ್ದು, ಕೇವಲ ಅಂಕಿಅಂಶಗಳ ಜೇಡರ ಬಲೆಯಿಂದ ಮುಂದೆ ಸಾಗುತ್ತಾ ಶಿಕ್ಷಣದ ಹಕ್ಕು ಕಾಯ್ದೆಯ ಮೂಲಭೂತ ಸಿದ್ಧಾಂತಗಳ ಮೇಲೆ ಗಮನ ಕೇಂದ್ರೀಕರಿಸುವ ನಿಟ್ಟಿನಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯ ಕಾರ್ಯಗತಗೊಳಿಸುವಿಕೆಯ ಸಮೀಕ್ಷೆ ನಡೆಸಲು ಇದು ಸಕಾಲವಾಗಿದೆ.

 ಹತ್ತು ವರುಷಗಳ ಪಯಣ – ಸಾಧನೆ ಮತ್ತು ಸವಾಲುಗಳು

- Advertisement -

 ಆರ್‌ಟಿಐನ ಹತ್ತು ವರುಷಗಳ ಪಯಣವು ಮಂಡಿಯ ಮೇಲೆ ನಡೆದಾಡುವ ರೀತಿಯದ್ದಾಗಿತ್ತು. ಒಂದು ದಶಕದ ಬಳಿಕ ಶಿಕ್ಷಣದ ಹಕ್ಕು ಕಾಯ್ದೆಯ ಸಾಧನೆಗಳು ನಿರ್ದಿಷ್ಟವಾಗಿದೆ. ಮಾತ್ರವಲ್ಲ, ಇದರಿಂದಾಗಿ ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ಕಾಯ್ದೆಯನ್ನು ಜಾರಿಗೊಳಿಸಲು ಹೊಣೆಯಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ಕಳೆದ ಹತ್ತು ವರುಷಗಳಿಂದ ಇದು ತನ್ನ ಬೆನ್ನು ಹತ್ತುವುದನ್ನು ತಪ್ಪಿಸುತ್ತಾ ಬಂದಿರುವುದು ಕಂಡು ಬರುತ್ತಿದೆ. ನಮ್ಮ ದೇಶದ ರಾಜಕಾರಣದಲ್ಲಿ ಶಿಕ್ಷಣದ ಕುರಿತು ಯಾವುದೇ ವಿಚಾರಗಳಿಲ್ಲ.  ಅದಕ್ಕಾಗಿ ಕಳೆದ ಹತ್ತು ವರುಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರ್‌ಟಿಐ ಜಾರಿಗೊಳಿಸುವುದರಲ್ಲಿ ನಿರ್ಲಕ್ಷವನ್ನು ತೋರುತ್ತಿವೆ. ಸರಕಾರಗಳ ಉಪೇಕ್ಷೆಯಿಂದಾಗಿ ಭಾರತದ ಶಾಲಾ ಶಿಕ್ಷಣವು ಮೂಲಸೌಕರ್ಯ, ಸಾಕಷ್ಟು ಶಿಕ್ಷಕರ ನೇಮಕಾತಿ, ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಬಳಲುತ್ತಿದೆ.  ಇದಕ್ಕೆ ಕಳೆದ ಹತ್ತು ವರುಷಗಳು ಸಾಕ್ಷಿಯಾಗಿವೆ.

 ಸಾಧನೆಯ ಬಗ್ಗೆ ಹೇಳುವುದಾದರೆ, ಶಿಕ್ಷಣದ ಹಕ್ಕು ಕಾಯ್ದೆಯ ಒಂದು ದಶಕದ ಪಯಣವು ‘‘ಎಲ್ಲರಿಗೂ ಶಾಲೆಗಳಲ್ಲಿ ದಾಖಲಾತಿಯ ಹಕ್ಕು’’ ಎಂಬುದನ್ನು ದೃಢಪಡಿಸಿದೆ. ಈ ಮಧ್ಯೆ ಅತ್ಯಂತ ದೊಡ್ಡ ಸಾಧನೆಯೆಂದರೆ, ಶಾಲೆಗಳಲ್ಲಿ 6ರಿಂದ 14 ವರ್ಷಗಳ ವರೆಗಿನ ಮಕ್ಕಳ ಸುಮಾರು ಶೇ.100ರಷ್ಟು ದಾಖಲಾತಿ ಇದೆ. ನಾವು ಪ್ರಾಥಮಿಕ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿಯೂ ಯಶಸ್ವಿಯಾಗಿದ್ದೇವೆ. ಇಂದು ಎಲ್ಲಾ ಕಾಲೋನಿಗಳಲ್ಲಿ ಅಥವಾ ಅದರ ಸಮೀಪ ಒಂದು ಶಾಲೆ ಲಭ್ಯವಿದೆ. ಇದರ ಹೊರತಾಗಿ ಶಾಲೆಗಳ ಮೂಲಭೂತ ಸೌಕರ್ಯಗಳಲ್ಲೂ ಸುಧಾರಣೆಯಾಗಿದೆ. ಇಂದು ಬಹುತೇಕ ಶಾಲೆಗಳಲ್ಲಿ ಹುಡುಗ ಮತ್ತು ಹುಡುಗಿಯರಿಗಾಗಿ ಪ್ರತ್ಯೇಕ ಶೌಚಾಲಯ ಲಭ್ಯವಿದೆ.  ಆದಾಗ್ಯೂ, ಇದರಲ್ಲಿ ಇನ್ನು ಕೂಡ ನೀರು ಮತ್ತು ನೈರ್ಮಲ್ಯದ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ.

 ಸವಾಲುಗಳ ಕುರಿತು ಹೇಳುವುದಾದರೆ, ಕಳೆದ ಹತ್ತು ವರುಷಗಳಲ್ಲಿ ಆರ್‌ಟಿಐ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದರಲ್ಲಿ ವಿಫಲವಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿಯಂತೂ ಆಗಿದೆ. ಆದರೆ, ಶಾಲೆಗಳಲ್ಲಿ ಮಕ್ಕಳನ್ನು ತಡೆದಿಡುವ ಸವಾಲು ಇನ್ನೂ ಹಾಗೆಯೇ ಉಳಿದುಕೊಂಡಿದೆ. ಇದರೊಂದಿಗೆ ಇಂದು ಕೂಡ ದೊಡ್ಡ ಮಟ್ಟದಲ್ಲಿ ಸರಕಾರಿ ಶಾಲೆಗಳು ಮೂಲಭೂತ ರಚನಾತ್ಮಕ ಸೌಕರ್ಯಗಳು, ಅಗತ್ಯ ಸಂಪನ್ಮೂಲಗಳು, ಶಿಕ್ಷಣದ ವಾತಾವರಣ ಮತ್ತು ಶಿಕ್ಷಕರ ಭಾರೀ ಕೊರತೆಯಿಂದ ಬಳಲುತ್ತಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯು ಫೆಬ್ರವರಿ 2020ರ ವಾರಾಂತ್ಯದಲ್ಲಿ ಸದನದಲ್ಲಿ ಪ್ರಸ್ತುತಪಡಿಸಿದ ವರದಿಯಲ್ಲಿ, ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಕುರಿತು ಕಳವಳ ವ್ಯಕ್ತಪಡಿಸಲಾಗಿದೆ. ವರದಿಯ ಪ್ರಕಾರ, ಇನ್ನು ಕೂಡ ದೇಶದ ಕೇವಲ ಶೇ.56ರಷ್ಟು ಶಾಲೆಗಳಿಗಷ್ಟೇ ವಿದ್ಯುತ್ ತಲುಪಿದೆ. ಇದರಲ್ಲಿ ಮಧ್ಯಪ್ರದೇಶ ಮತ್ತು ಮಣಿಪುರದಲ್ಲಂತೂ ಕೇವಲ ಶೇ.20ರಷ್ಟು ಶಾಲೆಗಳಿಗಷ್ಟೇ ವಿದ್ಯುತ್ ತಲುಪಿದೆ. ಇದೇ ರೀತಿ ದೇಶದಲ್ಲಿ ಶೇ.57ರಷ್ಟಕ್ಕಿಂತಲೂ ಕಡಿಮೆ ಶಾಲೆಗಳಲ್ಲಿ ಆಟದ ಮೈದಾನಗಳಿವೆ. ವರದಿಯಲ್ಲಿ ತಿಳಿಸಿರುವಂತೆ, ಇಂದಿಗೂ ದೇಶದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಸರಕಾರಿ ಶಾಲೆಗಳು ಏಕೋಪಾಧ್ಯಾಯರ ಭರವಸೆಯಲ್ಲಿ ನಡೆಯುತ್ತಿವೆ. ಇತ್ತ 2014-15ರ ನಂತರದಿಂದ ಶಿಕ್ಷಣದ ಬಜೆಟ್‌ನಲ್ಲಿಯೂ ಕೊರತೆ ಕಂಡುಬಂದಿದೆ.  2014-15ರಲ್ಲಿ ಶಿಕ್ಷಣಕ್ಕಾಗಿ  ಹಂಚಿಕೆ ಮಾಡಲಾದ ಬಜೆಟ್ ಭಾರತದ ಸರಕಾರದ ಒಟ್ಟು ಬಜೆಟ್‌ನ ಶೇ.4.14ರಷ್ಟಿತ್ತು. 2019-20ರಲ್ಲಿ ಅದು ಶೇ.3.4ರಷ್ಟಾಗಿದೆ.

 ದೊಡ್ಡ ಪ್ರಶ್ನೆಗಳು ಮತ್ತು ಕಳವಳಗಳು

 ಸಾರ್ವಜನಿಕ ಶಿಕ್ಷಣ ಒಂದು ಆಧುನಿಕ ವಿಚಾರವಾಗಿದೆ. ಇದರಲ್ಲಿ ಯಾವುದೇ ಲಿಂಗ, ಜಾತಿ, ವರ್ಗ, ಭಾಷೆಯವರಾಗಿದ್ದರೂ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿಸುವುದು ಆಡಳಿತದ ಕರ್ತವ್ಯವಾಗಿರುತ್ತದೆ. ಗಮನಾರ್ಹವೆಂದರೆ, ಭಾರತವು ದಶಕಗಳಿಂದಲೂ ಶಿಕ್ಷಣದ ಮೇಲೆ ಕೆಲವು ವಿಶೇಷ ಸಮುದಾಯಗಳ ಏಕಾಧಿಪತ್ಯ ಹೊಂದಿದ್ದ ದೇಶವಾಗಿತ್ತು. ಈ ಸರಣಿಯು ಸಾಮ್ರಾಜ್ಯಶಾಹಿ ಕಾಲಘಟ್ಟದಲ್ಲಿ ಒಡೆದು ಹೋಯಿತು. ಭಾರತದಲ್ಲಿ ಶಾಲೆಗಳ ಮೂಲಕ ಎಲ್ಲರಿಗೂ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾದಾಗ, ಬ್ರಿಟಿಷರ ಮೂಲಕ ಸ್ಥಾಪಿಸಲಾದ ಶಾಲಾ-ಕಾಲೇಜುಗಳು ಎಲ್ಲರಿಗೂ ಮುಕ್ತವಾಗಿದ್ದವು. ಜಾತಿ ಮತ್ತು ಸಮುದಾಯದ ಆಧಾರದಲ್ಲಿ ಯಾವುದೇ ಮಗುವಿಗೂ ಈ ಶಾಲೆಗಳಲ್ಲಿ ಪ್ರವೇಶ ನಿರಾಕರಿಸಬಾರದು ಎಂಬ ಸ್ಪಷ್ಟ ನೀತಿಯನ್ನು ಬ್ರಿಟಿಷ್ ಸರಕಾರವು ಅನುಸರಿಸಿತ್ತು. ಇದೊಂದು ದೊಡ್ಡ ಬದಲಾವಣೆಯಾಗಿದ್ದು, ಇದು ಎಲ್ಲಾ ಭಾರತೀಯರಿಗೂ ಶಿಕ್ಷಣದ ಕದಗಳನ್ನು ತೆರೆದುಕೊಟ್ಟಿತು. ಸ್ವಾತಂತ್ರಾ ನಂತರ ಈ ಪ್ರಕ್ರಿಯೆಯಲ್ಲಿ ವೇಗ ಹೆಚ್ಚಿತು. ಭಾರತೀಯ ಸಂವಿಧಾನದ ಪರಿಚ್ಛೇದ 29ರಲ್ಲಿ ಭಾರತದ ಎಲ್ಲಾ ನಾಗರಿಕರಿಗೆ ಧರ್ಮ, ಜಾತಿ ಅಥವಾ ಭಾಷೆಯ ಯಾವುದೇ ತಾರತಮ್ಯವಿಲ್ಲದೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ದಾಖಲಾಗುವ ಹಕ್ಕನ್ನು ನೀಡಿದೆ.

 2010ರಲ್ಲಿ ಶಿಕ್ಷಣದ ಹಕ್ಕು ಜಾರಿಗೊಂಡ ಬಳಿಕ, 6ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವ್ಯವಸ್ಥೆಗೊಳಿಸುವುದು ಮೊದಲ ಬಾರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾನೂನಾತ್ಮಕ ಹೊಣೆಗಾರಿಕೆಯಾಯಿತು. ಆದರೆ ಇದರೊಂದಿಗೆ ಈ ಕಾನೂನಿನ ಅತ್ಯಂತ ದೊಡ್ಡ ಪರಿಮಿತಿಯೆಂದರೆ, ಇದು ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳ ವಿರೋಧಾಭಾಸಗಳೊಂದಿಗೆ ಯಾವುದೇ ಹಸ್ತಕ್ಷೇಪ ನಡೆಸಲಿಲ್ಲ. ಆರ್‌ಟಿಐ, ಶಿಕ್ಷಣದ ಇಬ್ಬಗೆಯ ವ್ಯವಸ್ಥೆಯನ್ನು ಉಳಿಸಿಕೊಂಡದ್ದು ಮಾತ್ರವಲ್ಲ, ಇದನ್ನು ಬಲಪಡಿಸುವಲ್ಲಿಯೂ ಸಹಾಯಕನೆಂಬಂತೆ ಗೋಚರಿಸಿದೆ. ಇದು ಸರಕಾರಿ ಶಾಲೆಗಳನ್ನು ‘ಅನಿವಾರ್ಯ ಶಾಲೆ’ಗಳನ್ನಾಗಿ ಮಾರ್ಪಡಿಸುವಲ್ಲಿ ಯಾವುದೇ ಪ್ರಯತ್ನವನ್ನು ಬಿಟ್ಟುಕೊಟ್ಟಿಲ್ಲ. ಸಮರ್ಥರಾಗಿರುವ ಜನರ ಓಡಾಟ ಮೊದಲಿನಿಂದಲೂ ಶಾಸಗಿ ಶಾಲೆಯ ಕಡೆಗೇ ಇದೆ. ಇದೀಗ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಕೋಟಾ ಜಾರಿಗೊಳಿಸಿದ ನಂತರ ಬಡವರು ಮತ್ತು ವಂಚಿತ ಸಮುದಾಯವು ಕೂಡ ಈ ನುಗ್ಗಾಟದಲ್ಲಿ ಭಾಗಿಯಾಗಿದೆ.

 ಆದಾಗ್ಯೂ, ಕಳೆದ ಮೂರು ದಶಕಗಳಿಂದ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ ಮತ್ತು ಇದರೊಂದಿಗೆ ದೇಶ-ಜಗತ್ತಿನ ಶಿಕ್ಷಣ ವ್ಯವಸ್ಥೆ ಹೆಚ್ಚುತ್ತಿರುವ ಅಗತ್ಯಗಳು ಮತ್ತು ಬೇಡಿಕೆಗೆ ಅನುಸಾರವಾಗಿ ಹಲವು ಬದಲಾವಣೆಗಳೊಂದಿಗೆ ಸಾಗುತ್ತಿದೆ. ದುರದೃಷ್ಟವಶಾತ್, ಭಾರತದಲ್ಲಿ ಮತ್ತೊಮ್ಮೆ ಕೆಲವು ಸಮುದಾಯ ಮತ್ತು ವರ್ಗಗಳೇ ಈ ಬದಲಾವಣೆಗಳ ಲಾಭವನ್ನು ಪಡೆಯುತ್ತಿವೆ. ದೇಶದ ಒಂದು ದೊಡ್ಡ ಜನಸಂಖ್ಯೆ, ಮುಖ್ಯವಾಗಿ ಬಡವ, ಅಲ್ಪಸಂಖ್ಯಾತ ಮತ್ತು ಪರಂಪರಾಗತವಾಗಿ ಅಂಚಿನಲ್ಲಿರುವ ಸಮುದಾಯಗಳು ಇಲ್ಲಿಯ ವರೆಗೆ ತಲುಪುವುದೇ ಅಸಾಧ್ಯವಾಗಿದೆ. ಈ ಬದಲಾದ ಜಗತ್ತಿನಲ್ಲಿ ಜ್ಞಾನದ ಮೇಲೆ ಏಕಾಧಿಪತ್ಯದ ಒಂದು ಹೊಸ ವ್ಯವಸ್ಥೆ ರಚನೆಯಾಗಿದ್ದು, ಇದರಲ್ಲಿ ಬಂಡವಾಳ ಮತ್ತು ಮಾರುಕಟ್ಟೆಯ ದೊಡ್ಡ ಪಾತ್ರವಿದೆ. ಕಳೆದ ಹತ್ತು ವರುಷಗಳಲ್ಲಿ ಶಿಕ್ಷಣದ ಸಾರ್ವತ್ರೀಕರಣವಂತೂ ಆಗಿದೆ. ಆದರೆ ಇದರ ವಿಭಜನೆಯೂ ಬಹಳ ಆಳವಾಗಿದೆ. ಈ ಹೊಸ ವಿಭಜನೆಯ ಎರಡು ತುದಿಗಳಿವೆ. ಒಂದೆಡೆ, ಕೆಲವು ಆಯ್ದ ಕುಲೀನ ಮತ್ತು ಗಣ್ಯ ಖಾಸಗಿ ಶಾಲೆಗಳು, ನವೋದಯ/ಕೇಂದ್ರೀಯ ವಿದ್ಯಾಲಯಗಳಿದ್ದರೆ, ಮತ್ತೊಂದೆಡೆ ಸರಕಾರಿ ಮತ್ತು ಗಲ್ಲಿ ಮೊಹಲ್ಲಾಗಳಲ್ಲಿ ನಡೆಯಲ್ಪಡುವ ಸಣ್ಣ ಮತ್ತು ಮಧ್ಯಮ ಮಟ್ಟದ ಖಾಸಗಿ ಶಾಲೆಗಳಿವೆ.

 ಚಿಕಿತ್ಸೆ ಇದೆ, ಇಚ್ಛಾಶಕ್ತಿ ಬೇಕು

 ಈ ಎಲ್ಲಾ ಸವಾಲುಗಳಿಂದ ಮೇಲೇಳಲು ನಮಗೆ ಎರಡು ಹಂತಗಳಲ್ಲಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಒಂದು, ಆರ್‌ಟಿಐ ವ್ಯಾಪ್ತಿಯೊಳಗಿರುತ್ತಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಜೊತೆಗೆ ಶಿಕ್ಷಣದ ಹಕ್ಕು ಕಾಯ್ದೆಯ ಪರಿಮಿತಿಗಳನ್ನು ಒಡೆದು ಹಾಕುತ್ತಾ ಮುಂದೆ ಸಾಗಬೇಕಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಸುಮಾರು ಶೇ.100ರಷ್ಟು ದಾಖಲಾತಿಯ ಸಮೀಪ ತಲುಪಿದ ಬಳಿಕ ಆರ್‌ಟಿಐಯನ್ನು ಎಲ್ಲಾ ಮಕ್ಕಳಿಗಾಗಿ ಪ್ರಾಥಮಿಕ ಶಿಕ್ಷಣಕ್ಕಾಗಿ ಅವಕಾಶದ ಕಾಯ್ದೆಯ ಪಾತ್ರದೊಂದಿಗೆ ಮುಂದುವರಿಸುತ್ತಾ, ಎಲ್ಲಾ ಮಕ್ಕಳಿಗೆ ಗುಣಮಟ್ಟದ ಮತ್ತು ಸಮಾನ ಶಿಕ್ಷಣದ ಗುರಿಯತ್ತ ಮುಂದೆ ಸಾಗಿಸಬೇಕಾಗಿದೆ. ಇದೀಗ ದಾಖಲಾತಿಯಾಗಿರುವ ಮಕ್ಕಳ ಕ್ರಮಬದ್ಧಗೊಳಿಸುವಿಕೆ ಮತ್ತು ಅವರನ್ನು ಅಧಿಕ ಸಮಯದ ವರೆಗೆ ಶಾಲೆಗಳಲ್ಲಿ ತಡೆದಿಡಲು ತಕ್ಷಣ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಇದರ ನೇರ ಸಂಬಂಧವು ಶಿಕ್ಷಣದ ಗುಣಮಟ್ಟದೊಂದಿಗಿದೆ. ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಖಾಲಿ ಬಿದ್ದಿರುವ ಹುದ್ದೆಗಳಲ್ಲಿ ಶಿಕ್ಷಕರ ನೇಮಕಾತಿಯೊಂದಿಗೆ ಒಂದು ದೊಡ್ಡ ನೀತಿ ನಿರ್ಧಾರ ಮತ್ತು ಅಗತ್ಯ ಬಜೆಟ್‌ನ ಅಗತ್ಯವಿರಲಿದೆ. ಕರಡು ರಾಷ್ಟ್ರೀಯ ಶಿಕ್ಷಣ ನೀತಿ 2019ರಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವುದು ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಸರಕಾರಿ ವೆಚ್ಚವನ್ನು ಜಿಡಿಪಿಯ ಶೇ.6ರ ವರೆಗೆ ವ್ಯಯಿಸುವ ಕುರಿತು ಹೇಳಲಾಗಿದೆ. ಆದರೆ ಈ ದೇಶವು ನೀತಿಗಳನ್ನು ತುಂಬಾ ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಇದಕ್ಕೂ ಮೊದಲು 1968ರಲ್ಲಿ ಜಾರಿಗೊಳಿಸಲಾದ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಎರಡನೇ ರಾಷ್ಟ್ರೀಯ ಶಿಕ್ಷಣ ನೀತಿ 1986ರಲ್ಲಿಯೂ ಸಾರ್ವಜನಿಕ ಶಿಕ್ಷಣದಲ್ಲಿ ಜಿಡಿಪಿಯ ಶೇ.6ರಷ್ಟರ ವರೆಗೆ ವೆಚ್ಚದ ಸಲಹೆಯನ್ನು ಈಗಾಗಲೇ ನೀಡಲಾಗಿದೆ. ಇದೀಗ ಮತ್ತೊಮ್ಮೆ ಇದನ್ನು ಪುನರಾವರ್ತಿಸಲಾಗಿದೆ. ಆದರೆ ಇದೀಗ ಇದನ್ನು ಪುನರಾವರ್ತಿಸುವುದಲ್ಲ, ಬದಲಿಗೆ ನಿರ್ಧರಿಸಬೇಕಾದ ಅಗತ್ಯವಿದೆ.

 ಶಿಕ್ಷಣದಲ್ಲಿ ಆಡಳಿತದ ಪ್ರಸಕ್ತ ವ್ಯವಸ್ಥೆಯ ಕುರಿತೂ ಮರು ಚಿಂತನೆ ನಡೆಸುವ ಅಗತ್ಯವಿದೆ. ಕರಡು ರಾಷ್ಟ್ರೀಯ ಶಿಕ್ಷಣ ನೀತಿ 2019ರಲ್ಲಿ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶಿಕ್ಷಣ ಆಯೋಗದ ರಚಿಸುವ ಕುರಿತು ಹೇಳಲಾಗಿದೆ. ಆದರೆ ಇದರಿಂದ ಶಿಕ್ಷಣ ಆಡಳಿತದ ಕೇಂದ್ರೀಕರಣದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಶಿಕ್ಷಣದ ಕೇಂದ್ರದಲ್ಲಿ ಶಿಕ್ಷಕರು, ಸಮುದಾಯ ಮತ್ತು ಮಕ್ಕಳು ಇರುವ ರೀತಿಯಲ್ಲಿ ಶಿಕ್ಷಣದ ಆಡಳಿತವನ್ನು ನಾವು ವಿಕೇಂದ್ರೀಕರಣಗೊಳಿಸುವ ಅಗತ್ಯವಿದೆ.

 ಶಿಕ್ಷಣದ ಹಕ್ಕು ಕಾಯ್ದೆಯ ಕಾರ್ಯಗತಗೊಳಿಸುವಿಕೆಯ ಮೇಲ್ವಿಚಾರಣೆಗಾಗಿ ಜವಾಬ್ದಾರಿ ಹೊಂದಿರುವ ಏಜೆನ್ಸಿಯಾಗಿರುವ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಪಾತ್ರವನ್ನು ಮತ್ತಷ್ಟು ಸ್ಪಷ್ಟಪಡಿಸುವ ಮತ್ತು ಬಲಪಡಿಸುವ ಅಗತ್ಯವಿದೆ. ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಕನಿಷ್ಠ ಎಲ್ಲಾ ಜಿಲ್ಲೆಗಳಲ್ಲೂ ಆಯೋಗವು ತನ್ನ ವಿಭಾಗವನ್ನು ಹೊಂದಿರುವುದು ಪ್ರಾಯೋಗಿಕವಾಗಿ ಅಗತ್ಯವಾಗಿದೆ. ಇದು ಆರ್‌ಟಿಐನ ದೂರು ನಿವಾರಣಾ ಇಲಾಖೆಯಂತೆ ಕಾರ್ಯನಿರ್ವಹಿಸಬೇಕು. ಈ ಕಾರ್ಯವನ್ನು ರಾಜ್ಯ ಮಕ್ಕಳ ಆಯೋಗದ ಮೂಲಕವೂ ನಡೆಸಬಹುದಾಗಿದೆ.

 ಇದೇ ರೀತಿ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುತ್ತದೆ. ಇದೇ ವೇಳೆ ಶಿಕ್ಷಣದ ಹೊಣೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಬಳಿ ಇದೆ. ಇಲ್ಲಿಯೂ ಹೊಂದಾಣಿಕೆ ತರುವ ಅಗತ್ಯವಿದೆ. ಶಾಲೆಗಳ ಸಾಮುದಾಯಿಕ ಮೇಲ್ವಿಚಾರಣೆ ಮತ್ತು ಸಹಯೋಗದ ಕಡೆಯೂ ಗಮನ ಹರಿಸುವ ಅಗತ್ಯವಿದೆ. ಕಳೆದ ಹತ್ತು ವರುಷಗಳಲ್ಲಿ ಬಹಳಷ್ಟು ಶಾಲೆಗಳಲ್ಲಿ ಶಾಲಾ ಆಡಳಿತ ಸಮಿತಿಗಳನ್ನೇನೋ ರಚಿಸಲಾಗಿದೆ. ಇದೀಗ ಇವುಗಳ ಸಬಲೀಕರಣದ ಅಗತ್ಯವಿದೆ. ಇದಕ್ಕಾಗಿ ಕೇವಲ ತರಬೇತಿಯಷ್ಟೇ ಸಾಕಾಗುವುದಿಲ್ಲ. ಬದಲಿಗೆ ಶಾಲಾ ಆಡಳಿತ ಸಮಿತಿಗಳ ಪಾತ್ರ ಮತ್ತು ಉತ್ತರದಾಯಿತ್ವವನ್ನು ಮತ್ತಷ್ಟು ಗಂಭೀರಗೊಳಿಸಲು ಇದರ ರಚನೆಯ ಕುರಿತು ಪುನರಾವಲೋಕನ ನಡೆಸುವ ಅಗತ್ಯವೂ ಇದೆ.

 ಆದರೆ ಇವೆಲ್ಲವುಗಳಿಗಿಂತಲೂ ಹೆಚ್ಚಾಗಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿ ನೀತಿ ನಿರ್ಮಾಪಕರ ದೃಷ್ಟಿಕೋನದಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ. ಇದಕ್ಕಾಗಿ ನಾವು ಕೊಠಾರಿ ಆಯೋಗವನ್ನು ಆಶ್ರಯಿಸಬೇಕಾಗಿದೆ. 1964ರಲ್ಲಿ ರಚಿಸಲಾದ ಕೊಠಾರಿ ಆಯೋಗವು ಏಕರೂಪದ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸಿತ್ತು. ಒಂದು ರಾಷ್ಟ್ರವಾಗಿರುವ ನಿಟ್ಟಿನಲ್ಲಿ ನಾವು ರಾಷ್ಟ್ರೀಯ ವ್ಯವಸ್ಥೆಯೊಂದನ್ನು ಜಾರಿಗೊಳಿಸಬೇಕಾಗಿದೆ. ಇದರ ಆಧಾರದಲ್ಲಿ ಸಮಾಜದ ಎಲ್ಲಾ ವರ್ಗಗಳು ಮತ್ತು ಸಮುದಾಯಗಳ ಮಕ್ಕಳು ಜೊತೆಯಾಗಿ ಏಕರೂಪದ ಶಿಕ್ಷಣ ಪಡೆಯುವಂತಾಗಬೇಕು ಎಂದು ಆಯೋಗವು ಹೇಳಿತ್ತು. ಏಕರೂಪದ ಶಿಕ್ಷಣ ವ್ಯವಸ್ಥೆಯಡಿಯಲ್ಲಿಯೇ ಇಬ್ಬಗೆಯ ಶಿಕ್ಷಣ ವ್ಯವಸ್ಥೆಯನ್ನು ಅಂತ್ಯಗೊಳಿಸಬಹುದಾಗಿದೆ ಎಂದೂ ಆಯೋಗವು ನಂಬಿತ್ತು. ಒಂದು ವೇಳೆ ನಾವು ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಗುರಿಯಾಗಿಸಲು ಸಿದ್ಧರಿರುವುದಾದರೆ, ಶಿಕ್ಷಣದ ಹಕ್ಕು ಕಾಯ್ದೆ ಈ ದಿಸೆಯಲ್ಲಿ ಮಹತ್ವದ ತಡೆಯಾಗಬಹುದು.

- Advertisement -