ಕೋವಿಡ್ ಮರೆಯಲ್ಲಿ ಫ್ಯಾಶಿಸಂ

Prasthutha|

– ಅಡ್ವೊಕೇಟ್ ಕೆ.ಪಿ. ಮುಹಮ್ಮದ್ ಶರೀಫ್

- Advertisement -

ಫ್ಯಾಶಿಸಂನ ಬುದ್ಧಿ ಮತ್ತು ಚಿಂತನೆಯಲ್ಲಿ ವಿಶ್ವಾಸವಿಲ್ಲ. ಅವರಿಗೆ ಏನಿದ್ದರೂ ತೋಳ್ಬಲದಲ್ಲಿ ಮಾತ್ರ ವಿಶ್ವಾಸವಿದೆ. ದ್ವೇಷ, ಹಗೆ, ಮತ್ತು ಶತ್ರುತ್ವವಿಲ್ಲದೆ ಅವರಿಗೆ ಅಸ್ತಿತ್ವವೇ ಇಲ್ಲ. ಇದುವೇ ಅವರ ವಿಚಾರಧಾರೆ. ಸಹಿಷ್ಣುತೆ ಮತ್ತು ವಿಷಮಘಟ್ಟಗಳಲ್ಲಿ ವಿವೇಕವೇ ಇಲ್ಲದ ವಿಶೇಷ ತಳಿ. ಕೋವಿಡ್ ಮಹಾಮಾರಿಯ ವಿಷಮಘಟ್ಟದಲ್ಲೂ ಮನೆ ಹೊತ್ತಿ ಉರಿಯುವಾಗ ಮೈಕಾಯಿಸಿಕೊಳ್ಳುವ ಮಂದಿ. ಬಿಜೆಪಿಯ ದ್ವೇಷ ರಾಜಕೀಯ, ಫ್ಯಾಶಿಸಂ, ಅನ್ಯಾಯ ಮತ್ತು ಜನ ವಿರೋಧಿ ನೀತಿಯ ವಿರುದ್ಧ ಧ್ವನಿ ಎತ್ತಿದ ಪ್ರತಿಯೊಬ್ಬರನ್ನ್ನೂ ಗುರಿಯಾಗಿಟ್ಟುಕೊಂಡು ಕಾರಾಗೃಹಗಳಿಗೆ ‘ಜೈಲ್ ಭರೋ’ ಯೋಜನೆಯನ್ನು ಮೋದಿ ಸರ್ಕಾರ್ ನಡೆಸುತ್ತಿದೆ.

 ಮಹಾಮಾರಿ ನಮ್ಮ ದೇಶದಲ್ಲೂ ವ್ಯಾಪಕವಾಗಿ ಹರಡಿಕೊಂಡಿರುವ ಮಧ್ಯೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ಎಲ್.ನಾಗೇಶ್ವರ್ ರಾವ್, ಜಸ್ಟಿಸ್ ಸೂರ್ಯಕಾಂತ್ ಮೊದಲಾದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸ್ವತಃ ಮಧ್ಯಪ್ರವೇಶಿಸಿ ಕೆಲವು ಮಾರ್ಗದರ್ಶನವನ್ನು ನೀಡಿದರು. ಕೈದಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸಾಂಕ್ರಾಮಿಕ ರೋಗವು ಜೈಲುಗಳಲ್ಲಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದರು. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ, ಜಸ್ಟಿಸ್ ಸಿ.ಕೆ.ಅಬ್ದುಲ್ ರಹೀಮ್, ಸಿಟಿ ರವಿಕುಮಾರ್, ರಾಜ ವಿಜಯರಾಘವನ್ ಸೇರಿದಂತೆ ಕೇರಳ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮಣಿಕುಮಾರ್ ಕೂಡ ಮಾರ್ಚ್ 25 ಮತ್ತು 30ರಂದು ಈ ಸಂಬಂಧವಾಗಿ ಮಾರ್ಗದರ್ಶನವನ್ನು ನೀಡಿದರು. ಸ್ಟೇಟ್ ಲೀಗಲ್ ಸರ್ವಿಸ್ ಎಕ್ಸಿಕ್ಯೂಟಿವ್ ಚೆಯರ್‌ಮೆನ್, ಪ್ರಿನ್ಸಿಪಲ್ ಸೆಕ್ರೆಟರಿ, ಜೈಲ್ ಡೈರೆಕ್ಟರ್ ಜನರಲ್ ಎಂಬವರೊಂದಿಗೆ ಒಂದು ಹೈ ಪವರ್ ಕಮಿಟಿ ಎಂಬ ನೆಲೆಯಲ್ಲಿ ಕೇರಳದ ಜೈಲಿನಲ್ಲಿರುವ 450 ಕೈದಿಗಳಿಗೆ ಪರೋಲ್ ಮೇಲೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ನ ನಿರ್ದೇಶನದ ಪ್ರಕಾರ ಅವರನ್ನು ಬಿಡುಗಡೆಗೊಳಿಸಿದರು.

- Advertisement -

 ಅರುಣೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್  ಈ ಹಿಂದೆಯೇ 7 ವರ್ಷದ ವರೆಗೆ ಬಂಧನಕ್ಕೊಳಪಡಿಸಿ ಜೈಲು ಶಿಕ್ಷೆ ನೀಡಬಹುದಾದ ಪ್ರಕರಣಗಳಲ್ಲಿ ಬಂಧನ ಪರಮಾವಧಿ ನಿಯಂತ್ರಿಸಬೇಕೆಂಬ ನಿರ್ದೇಶನವನ್ನು ನೀಡಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್, ವಾದಿ-ಪ್ರತಿವಾದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆಯೇ, ಆಧುನಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ನೆರವಿನಿಂದ ಪ್ರಕರಣಗಳಿಗೆ ಸಂಬಂಧಿಸಿ ಶೀಘ್ರಗತಿಯ ತೀರ್ಪು ನೀಡುವ ಕ್ರಮಗಳನ್ನು ಆವಿಷ್ಕರಿಸಿದೆ. ಸುಪ್ರೀಂ ಕೋರ್ಟ್‌ನಿಂದ ಹಿಡಿದು ಜಿಲ್ಲಾ ಕೋರ್ಟ್ ವರೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂಬ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ದೇಶದಲ್ಲಿರುವ ವಿವಿಧ ಜೈಲುಗಳಲ್ಲಿರುವ ಹಲವಾರು ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.

 ಆದರೆ ಅದೇ ಸುಪ್ರೀಂ ಕೋರ್ಟ್ ಸರ್ಕಾರದ ಹಿತ ಕಾಪಾಡುವ ನಿಟ್ಟಿನಲ್ಲಿ ಸರಕಾರ ಗುರಿಪಡಿಸಿದವರನ್ನು ಜೈಲಿಗೆ ಕಳುಹಿಸುವ ಸನ್ನಿವೇಶವನ್ನು ಅನಂದ್ ತೇಲ್ತುಂಬ್ಡ್ಡೆ, ಗೌತಮ್ ನವ್‌ಲಖಾ ಮೊದಲಾದ ಪ್ರಕರಣದಲ್ಲಿ ಕಾಣಲು ಸಾಧ್ಯವಾಯಿತು. ವಾರದೊಳಗಾಗಿ ಅವರನ್ನು ಬಂಧಿಸಲು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಕ್ರೌರ್ಯವೂ ವಿರೋಧಾಭಾಸದಿಂದಲೂ ಕೂಡಿದೆ. ಸಂವಿಧಾನದ 21ನೇ ಅನುಚ್ಛೇದ, ಕಾನೂನು ಸುವ್ಯವಸ್ಥೆ ಮೊದಲಾವುಗಳನ್ನು ಎತ್ತಿ ತೋರಿಸಿ ಯುದ್ಧ ಕಾಲದಲ್ಲಿ ಖೈದಿಗಳನ್ನು ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಜೈಲುಗಳು ತುಂಬಿ ತುಳುಕಿ ಕೋವಿಡ್-19 ಹರಡುವುದನ್ನು ತಡೆಯಲು ಇದೇ ಮಾದರಿಯನ್ನು ಕೋರ್ಟ್ ಅನುಸರಿಸಿತು. ಆದರೆ ಕ್ರಿಮಿನಲ್ ಹಿನ್ನೆಲೆ ಇಲ್ಲದ ಗೌತಮ್ ನವ್‌ಲಖಾ, ಆನಂದ್ ತೇಲ್ತುಂಬ್ಡೆ ಮೊದಲಾದವರನ್ನು ತಕ್ಷಣ ಜೈಲಿಗಟ್ಟಲು  ನೀಡಿದ ಆಕ್ಷೇಪಾರ್ಹ ನಿಲುವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೀಕೆಗೆ ಎಡೆಯಾಯಿತು. ಇದು ಈ ಹಿಂದಿನ ಸುಪ್ರೀಂ ಕೋರ್ಟ್ ಆದೇಶದ ಚೈತನ್ಯವನ್ನೇ ಉಡುಗಿಸಿತು.

 ಪಿಯುಡಿಆರ್ ಎಂಬ ಮಾನವ ಹಕ್ಕು ಸಂಘಟನೆಯ ನಾಯಕ ಹಾಗೂ ಎಕಾನಾಮಿಕ್ ಆ್ಯಂಡ್ ಪೊಲಿಟಿಕಲ್ ಸಾಪ್ತಾಹಿಕದ ಸಂಪಾದಕೀಯ ಕನ್ಸಲ್‌ಟೆಂಟ್ ಆದ 65ರ ಹರೆಯದ ಗೌತಮ್ ನವ್‌ಲಖಾರನ್ನು ಸರಕಾರವು ಗುರಿಪಡಿಸಿದ ಮುಖ್ಯ ಕಾರಣ, ಆತ ಕಾಶ್ಮೀರದ ವಿಚಾರದಲ್ಲಿ ಸರಕಾರ ನೀತಿಯ ವಿರುದ್ಧ ನಿಲುವನ್ನು ಹೊಂದಿದ್ದರು. 67ರ ಹರೆಯದ ಆನಂದ್ ತೇಲ್ತುಂಬ್ಡೆಯನ್ನು ಗುರಿಪಡಿಸಲು ಕಾರಣ, ಆತ ಸವರ್ಣೀಯರ ಜಾತಿ ವ್ಯವಸ್ಥೆಯ ಮುಖವಾಡವನ್ನು ಕಿತ್ತೆಸೆದು ದಲಿತರ ಹಕ್ಕುಗಳನ್ನು ಮರಳಿ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಎಕ್ಸಿಕ್ಯೂಟರ್ ಡೈರೆಕ್ಟರ್ ಅವಿನಾಶ್ ಕುಮಾರ್ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಶ್ನಿಸುತ್ತಾರೆ. ಒಂದೆಡೆ, ಜೈಲು ತುಂಬಿ ತುಳುಕುವಾಗ ಕೋವಿಡ್ ಹರಡುವುದನ್ನು ತಡೆಯಲು ಖೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಆದೇಶಿಸಿದ ಅದೇ ಸುಪ್ರೀಂ ಕೋರ್ಟ್ ಇನ್ನೊಂದೆಡೆ ಇಬ್ಬರು ಖ್ಯಾತನಾಮರಾದ ಮಾನವ ಹಕ್ಕುಗಳ ಹೋರಾಟಗಾರರನ್ನು ಜೈಲಿಗಟ್ಟಲು  ನೆಪವನ್ನು ಹುಡುಕುತ್ತಿರುವುದು ವಿರೋಧಾಭಾಸದಿಂದ ಕೂಡಿದೆ ಎಂದು ಅವರು ಸೂಚಿಸುತ್ತಾರೆ.

 2018ರ ಭೀಮ ಕೋರೆಗಾಂವ್ ಕೇಸಿನಲ್ಲಿ ಯುಎಪಿಎ ಎಂಬ ಕರಾಳ ಕಾನೂನುನ್ನು ಹೊರಿಸಿ ಇಬ್ಬರನ್ನು ಬಂದೀಖಾನೆಗೆ ತಳ್ಳಿತು. ಸುಧಾ ಭಾರಧ್ವ್ವಾಜ್, ಶೋಮ ಸೇನ್, ಸುರೇಂದ್ರ ಗಾಡ್ಲಿಂಗ್, ವೆರ್ನರ್ ಗೋನ್ಸಾಲ್‌ವೆಸ್, ಮಹೇಶ್ ರಾವುತ್, ಅರುಣ್ ಫೆರೆರಾ, ಸುಧೀರ್ ದಾವುಲೆ, ವರವರ ರಾವ್, ರೋನಾ ವಿಲ್ಸನ್ ಮೊದಲಾದವರನ್ನು ಇದೇ ಕೇಸಿನಲ್ಲಿ ಯಾವುದೇ ಕಾರಣವಿಲ್ಲದೆ ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಇವರು ದಲಿತರು, ಅದಿವಾಸಿಗಳು, ಹಿಂದುಳಿದ ವರ್ಗಗಳ ಪರವಾಗಿ ದೃಢವಾಗಿ ನಿಂತು ಅವರ ಹಕ್ಕುಗಳನ್ನು ಎತ್ತಿಹಿಡಿದಿದ್ದರು. ಅದೇ ರೀತಿ ಕೇಂದ್ರ ಸರ್ಕಾರ ಮತ್ತು ಕಾರ್ಪೊರೇಟ್ ಶಕ್ತಿಗಳು ಈ ವರ್ಗಗಳ ಸಂಪತ್ತಿನ ಮೇಲೆ ನಡೆಸುತ್ತಿರುವ ಶೋಷಣೆಯನ್ನು ಬಹಿರಂಗಪಡಿಸಿದ್ದರು. ಈ ಎಲ್ಲಾ ಕಾರಣಗಳಿಗಾಗಿ ದೊಂಬಿ ಸಂಚಿನಲ್ಲಿ ಪಾಲ್ಗೊಂಡಿದ್ದರೆಂಬ ಸುಳ್ಳಾರೋಪ ಹೊರಿಸಿ ಇವರನ್ನು ಮಾವೋವಾದಿ ಮುದ್ರೆ ಒತ್ತಿ ಜೈಲಿಗಟ್ಟಲಾಗಿತ್ತು.

 ಹಿಂದುತ್ವ ಪ್ರಚಾರಕರಾದ ಸಾಂಭಾಜಿ ಭಿಡೆ, ಮಿಲಿಂದ್ ಏಕ್‌ಬೋತೆ ಮಹಾರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿಸುವ ಫ್ಯಾಶಿಸ್ಟ್ ಅಜೆಂಡಾವನ್ನು ಹೊಂದಿದ್ದರು. ಇದರ ಪರಿಣಾಮವಾಗಿಯೇ, ಗಲಭೆಯಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ ಹೆಸರಾಂತ ಮಾನವ ಹಕ್ಕು ಹೋರಾಟಗಾರರನ್ನು ಭೀಮ ಕೋರೆಗಾಂವ್‌ನೊಂದಿಗೆ ಸಂಬಂಧ ಕಲ್ಪಿಸಿ ಬಂದೀಖಾನೆಗೆ ತಳ್ಳಲಾಯಿತು.

 ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರಕಾರವು ಅವರ ಅನ್ಯಾಯದ ಜೈಲುವಾಸ ಕೊನೆಗೊಳಿಸಲು ಪ್ರಯತ್ನಿಸುವ  ಮಧ್ಯೆ ಕೇಂದ್ರ ಸರ್ಕಾರವು ಹಸ್ತಕ್ಷೇಪ ನಡೆಸಿ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಿತು.

 ಕೋವಿಡ್-19 ಅತ್ಯಂತ ವೇಗವಾಗಿ ಹರಡುವ ಹಿನ್ನೆಲೆಯಲ್ಲಿ 2020ರ ಎಪ್ರಿಲ್ 4ರಂದು ವಿಶ್ವಸಂಸ್ಥೆಯ ಮಾನವ ಹಕ್ಕಿನ ಹೈಕಮಿಷನರ್, ಸರ್ಕಾರವನ್ನು ಟೀಕಿಸಿದ ಕಾರಣಕ್ಕಾಗಿ ರಾಜಕೀಯ ಪ್ರೇರಿತ ಬಂಧನಕ್ಕೊಳಗಾದ ಖೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಎಲ್ಲಾ ದೇಶಗಳನ್ನು ಆಗ್ರಹಿಸಿದರು. ಆದರೆ ನಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಶಿಷ್ಟಾಚಾರಗಳನ್ನು ಪಾಲಿಸುವುದೇ ಇಲ್ಲ. ಬಂಧನಕ್ಕೊಳಗಾದ ಸರಕಾರದ ಟೀಕಾಕಾರರಿಗೆ  ಸುಪ್ರೀಂ ಕೋರ್ಟ್‌ನ ಆದೇಶವೂ ಅನ್ವಯಿಸಲಿಲ್ಲ. ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸುವವರನ್ನು ಮತ್ತು ಸಾರ್ವಜನಿಕರನ್ನು ಸಂಘಟಿಸುವವರನ್ನು ಜೈಲಿಗಟ್ಟುವ ಪ್ರಕ್ರಿಯೆಯನ್ನು ಫ್ಯಾಶಿಸ್ಟ್ ಸರ್ಕಾರವು ಲಾಕ್‌ಡೌನ್‌ನ ಮರೆಯಲ್ಲಿ ಜಾರಿಗೊಳಿಸುತ್ತಿದೆ. ಸಹಜೀವಿಗಳೊಂದಿಗೆ ತೋರಿದ ಕಾಳಜಿ ಮತ್ತು ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ ಡಾ.ಕಫೀಲ್ ಖಾನ್‌ರನ್ನೂ ಸುಮ್ಮನೆ ಬಿಟ್ಟಿಲ್ಲ. ಅವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ತಿಂಗಳುಗಳ ನಂತರ ಜಾಮೀನು ಪಡೆದರೂ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯನ್ನು ಹೇರಿ ಪುನಃ ಜೈಲಿಗಟ್ಟಲಾಗಿದೆ. ಚಂಗೀಸ್ ಖಾನ್, ಸಫೂರ ಝರ್ಗರ್, ಮೀರನ್ ಹೈದರ್ ಎಂಬವರ ಬಂಧನದ ಹಿಂದೆಯೂ ಇದೇ ರೀತಿಯ ಷಡ್ಯಂತ್ರವಿದೆ. ಇದು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಹೋರಾಟಗಾರರಿಗೆ ಅನ್ನಾಹಾರ ಮತ್ತು ಆಶ್ರಯ ನೀಡಿದ ಕಾರಣಕ್ಕೆ ಜಾಮಿಯ ಮಿಲ್ಲಿಯಾ, ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಸರ್ಕಾರವು ದಾಳಿ ನಡೆಸುವ ಸೂಚನೆಯಾಗಿದೆ. ಸಂಘಪರಿವಾರ ಪ್ರಾಯೋಜಿತ ಜಾಫರಾಬಾದ್ ಗಲಭೆಯ ವೇಳೆ ಪೌರತ್ವ ಹೋರಾಟವನ್ನು ಹುಟ್ಟುಹಾಕಿದ್ದು ಜಾಮಿಯಾ ಹೋರಾಟ ಸಮಿತಿ ನಾಯಕಿಯಾಗಿದ್ದ ಸಫೂರ ಝರ್ಗರ್ ಆಗಿದ್ದರು. ಇದುವೇ ಆಕೆಯ ಬಂಧನಕ್ಕೆ ಕಾರಣವಾಗಿತ್ತು. ಆರ್‌ಜೆಡಿ ವಿದ್ಯಾರ್ಥಿ ಗುಂಪಿನ ಸದಸ್ಯನಾಗಿದ್ದ ಮಿರಾನ್ ಹೈದರ್‌ನನ್ನು ವಿನಾ ಕಾರಣ ಬಂಧಿಸಲಾಗಿತ್ತು. ರಾಜ್ಯ ಸರಕಾರದ ಕೋಮು ಪಕ್ಷಪಾತದ ವಿರುದ್ಧ ಲೇಖನ ಬರೆದ ಕಾರಣಕ್ಕಾಗಿ ಜೆಎನ್‌ಯು ಪಿಎಚ್‌ಡಿ ವಿದ್ಯಾರ್ಥಿ ಚಂಗೀಸ್ ಖಾನ್‌ರನ್ನು ಬಂಧಿಸಲಾಗಿತ್ತು.

 ‘ದಿ ವೈರ್’ ಮಾಧ್ಯಮದ ಸಂಪಾದಕ ವರದರಾಜ್‌ನ ವಿರುದ್ಧ ಯೋಗಿ ಆದಿತ್ಯನಾಥ್ ಸರಕಾರವು ಪುನಃ ಎಫ್‌ಐಆರ್ ದಾಖಲಿಸಿದೆ. ಈ ಹಿಂದಿನ ಎರಡು ಪ್ರಕರಣಗಳ ಹೊರತಾಗಿ, ಲಾಕ್‌ಡೌನ್ ಸಂದರ್ಭದಲ್ಲಿಯೂ ಕಳೆದ ಎಪ್ರಿಲ್ 14ರಂದು ಅಯೋಧ್ಯೆ ಪೊಲೀಸ್ ಠಾಣೆಗೆ ಹಾಜರಾಗಲು ಅವರಿಗೆ ನೋಟೀಸ್ ನೀಡಲಾಗಿತ್ತು. ಯುಪಿ ಪೊಲೀಸರ ಅಧಿಕಾರ ದುರ್ಬಳಕೆ, ಸರ್ವಾಧಿಕಾರ ಮತ್ತು ಪತ್ರಿಕಾ ಸ್ವಾತಂತ್ರದ ವಿರುದ್ಧದ ಸರಕಾರದ ಅಸಹಿಷ್ಣುತೆಯು ಕೋವಿಡ್ ಭೀತಿಗಿಂತಲೂ ಭಯಾನಕವಾಗಿದೆ ಎಂದು ಸಿದ್ಧಾರ್ಥ್ ವರದರಾಜ್‌ರ ಪತ್ನಿ ಹಾಗೂ ಖ್ಯಾತ ಸಾಮಾಜಿಕ ಶಾಸ್ತ್ರಜ್ಞೆ ಪ್ರೊ.ನಂದಿನಿ ಸುಂದರ್ ಟ್ವಿಟ್ ಮಾಡಿದ್ದರು.

 ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕಣ್ಣನ್ ಗೋಪಿನಾಥನ್‌ರನ್ನು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಜೈಲಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ.

 ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉತ್ತರ ಪ್ರದೇಶ ತಾತ್ಕಾಲಿಕ ಸಮಿತಿ ಸದಸ್ಯ ಮುಫ್ತಿ ಮುಹಮ್ಮದ್ ಶೆಹಝಾದ್‌ರನ್ನು ಅಕ್ರಮವಾಗಿ ಬಂಧಿಸಲಾಗಿದೆ. ರಾಜ್ಯದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸ್ ಹಿಂಸಾಚಾರದ ಕುರಿತು ಸುಪ್ರೀಂ ಕೋಟ್‌ಅಥವಾ ಹೈಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಅವರು ಅಲಹಾಬಾದ್ ಹೈಕೋಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ಜನವರಿ 17ಕ್ಕೆ ನಡೆದಿದೆ ಮತ್ತು ರಾಜ್ಯ ಸರಕಾರಕ್ಕೆ ನೋಟೀಸನ್ನು ಜಾರಿಗೊಳಿಸಲಾಗಿದೆ. ಆಗಿನಿಂದ ಪೊಲೀಸರು ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲು ಪೊಲೀಸರು ಅವರಿಗೆ ಮತ್ತು ಅವರ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಆದರೆ ಅವರೆಂದೂ ಒತ್ತಡಕ್ಕೆ ಒಳಗಾಗಿಲ್ಲ. ಪೊಲೀಸ್ ದೌರ್ಜನ್ಯದ ವಿರುದ್ಧ ಅವರ ಕುಟುಂಬಸ್ಥರು ಎಎಸ್‌ಎಸ್‌ಪಿ, ಡಿಜಿಪಿ, ಅಲಹಾಬಾದ್‌ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ಎನ್‌ಎಚ್‌ಆರ್‌ಸಿಗೂ ದೂರನ್ನು ನೀಡಿದೆ.

 ಮಾನವ ಹಕ್ಕುಗಳ ಹೋರಾಟಗಾರರ ಸಂರಕ್ಷಣೆ, ಕಾನೂನು ಸುವ್ಯವಸ್ಥೆ, ಸಂವಿಧಾನದತ್ತ ಹಕ್ಕುಗಳು, ಅಭಿವ್ಯಕ್ತಿ ಮತ್ತು ಸಂಘಟಿಸುವ ಸ್ವಾತಂತ್ರ  ಇವೆಲ್ಲವೂ ಸರಕಾರವನ್ನು ಟೀಕಿಸುವವರಿಗೆ ದೊರಕಲಾರವು. ಪ್ರಸಕ್ತ ಆಡಳಿತದ ದೌರ್ಜನ್ಯ, ಅನಾಚಾರಗಳನ್ನು ಟೀಕಿಸಿ ಮೂಲೆಗುಂಪಾದ ಜನರ ರಕ್ಷಣೆಗೆ ಧುಮುಕುವುದಾದರೆ  ಸರಕಾರವು ನಿಮ್ಮನ್ನು ಕರಿಪಟ್ಟಿಗೆ ಸೇರಿಸುತ್ತದೆ. ನೀವು ವ್ಯವಸ್ಥೆಯ ಕಠಿಣ ಕಣ್ಗಾವಲಿಗೆ  ಗುರಿಯಾಗುವಿರಿ. ಸರ್ಕಾರಿ ಯಂತ್ರಗಳ ಮೂಲಕ ನಿಮ್ಮ ವಿರುದ್ಧ ಹಲವಾರು ವರದಿಗಳನ್ನು ಸಿದ್ಧಪಡಿಸಲಾಗುವುದು. ಮುಖ್ಯವಾಹಿನಿ ಮಾಧ್ಯಮಗಳು  ನಿಮ್ಮನ್ನು ಗುರಿಪಡಿಸಿ ನಿಮ್ಮ ವಿರುದ್ಧ ಅಪಪ್ರಚಾರದ ಸರಣಿ ಚರ್ಚೆಗಳನ್ನು ಮತ್ತು ಲೇಖನಗಳನ್ನು ಮುಂದುವರಿಸುವುದು.

 ಫ್ಯಾಶಿಸಂ ಮತ್ತು ಸಾಮ್ರಾಜ್ಯಶಾಹಿ ಕಾರ್ಪೊರೇಟ್‌ಗಳು ಜೊತೆಗೂಡಿ ಅಟ್ಟಹಾಸ ಗೈಯ್ಯುತ್ತಿರುವ ಸಂದರ್ಭದಲ್ಲಿಯೇ ಕೋವಿಡ್-19ರ ಅಸಾಮಾನ್ಯ ಪ್ರವೇಶವಾಗಿದೆ. ಈ ವೇಳೆ ಒಳಿತಿನ, ಮನುಷ್ಯತ್ವದ, ಸಹಿಷ್ಣುತೆಯ, ದೇವ ಚಿಂತನೆಯ, ಸದ್ಭಾಷಣದ ಪ್ರಾಯೋಗಿಕತೆಯು ಜಗತ್ತಿನಾದ್ಯಂತ ಅನುಭವಕ್ಕೆ ಬಂದಿದ್ದವು. ಆದರೆ ಜಗತ್ತಿನದ್ಯಾಂತ ಕೋವಿಡ್ ನೆಗೆಟಿವ್ ಮತ್ತು ಕೋವಿಡ್ ಪೊಸಿಟಿವ್ ಎಂಬ ಎರಡೇ ಧರ್ಮ ಬಾಕಿಯಾಗಿದ್ದವು. ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಇನ್ನೊಂದು ರೀತಿಯಲ್ಲಿ ಧ್ರುವೀಕರಿಸಿ ನೋಡುವ ಸನ್ನಿವೇಶ ನಿರ್ಮಾಣವಾಯಿತು.

 ದಿಲ್ಲಿಯ ನಿಝಾಮುದ್ದೀನ್ ಬಾಂಗ್ಲಾವಾಲಿ ಮಸ್ಜಿದ್‌ನಲ್ಲಿ ಸೇರಿದ ಜನರನ್ನು ವೈಭವೀಕರಿಸಿ ‘ಕೋವಿಡ್ ಜಿಹಾದ್’ ‘ಕೊರೋನಾ ಜಿಹಾದ್’ ‘ಭಯೋತ್ಪಾದನೆ’ ಮೊದಲಾದ ಪದಗಳನ್ನು ಪ್ರಯೋಗಿಸಲಾಯಿತು. ಈ ಮೂಲಕ ಮುಸ್ಲಿಮ್ ಸಮುದಾಯವನ್ನು ಸೈತಾನೀಕರಿಸಿ ದೇಶಾದ್ಯಂತ ಕೋಮು ಪ್ರಚಾರವನ್ನು ನಡೆಸಲಾಯಿತು. ಕೊರೋನ ವಿಷಮ ಘಟ್ಟದಲ್ಲೂ ವಿದ್ವೇಷ, ಭಿನ್ನಮತ ಮತ್ತು ಕೋಮುವಾದಿ ಫ್ಯಾಶಿಸ್ಟ್ ಅಜೆಂಡಾ ಜಾರಿಗೊಳಿಸಲು ಸರ್ಕಾರಿ ಬೆಂಬಲಿತ ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮಗಳು ವೇದಿಕೆಯನ್ನು ನಿರ್ಮಿಸಿದವು. ಇದರ ಪರಿಣಾಮವಾಗಿ ಹರ್ಯಾಣ, ದಿಲ್ಲಿ, ಯುಪಿ, ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಫ್ಯಾಶಿಸಂ ಅಟ್ಟಹಾಸ ಮೆರೆಯಿತು. ಈಗಲೂ ಅದು ಮುಂದುವರೆಯುತ್ತಿದೆ.

 ಫ್ಯಾಶಿಸಂ ಭೂಮಿಯ ಮೇಲಿನ ಅತ್ಯಂತ ದೊಡ್ಡ ರೋಗ ಎಂಬುವುದರಲ್ಲಿ ಸಂಶಯವಿಲ್ಲ. ಆದರೆ ಕೋವಿಡ್‌ನಿಂದಾಗಿ ಜಗತ್ತಿನಾದ್ಯಂತ ಹಲವು ವಿಪತ್ತುಗಳು ವ್ಯಾಪಿಸಿಕೊಂಡಿರುವ ಈ ವೇಳೆಯಲ್ಲಿ ನಮ್ಮ ದೇಶದ ಫ್ಯಾಶಿಸಂನ ವಿಷದ ಪ್ರಭಾವವು ಕುಗ್ಗಬಹುದೆಂದು ಭಾವಿಸಿದ್ದು ತಪ್ಪಾಗಿದೆ. ಈಗ ಆ ವಿಷ ಸರ್ಪವು ತನ್ನ ಹೆಡೆಯನ್ನು ಇನ್ನಷ್ಟು ಎತ್ತರಕ್ಕೆ ಬಿಚ್ಚಿ ವಿಷವನ್ನು ವ್ಯಾಪಕವಾಗಿ ಹರಡುತ್ತಿದೆ.

 ‘ನ್ಯೂ ಜೆನ್’ ಹೋರಾಟಗಾರರು, ನಿಸ್ವಾರ್ಥ ಮತ್ತು ಸಜ್ಜನರಾದ ಸಾರ್ವಜನಿಕರು ಕೋವಿಡ್ ಅನ್ನು ಮೂಲೋತ್ಪಾಟನೆ ಮಾಡಲು ಟೊಂಕಕಟ್ಟಿ ನಿಂತಿದ್ದನ್ನು ಅಭಿನಂದಿಸೋಣ. ಅದರೊಂದಿಗೆ ಇವರೆಲ್ಲರೂ ಪೌರತ್ವ ಹೋರಾಟಗಾರರು, ಸಕಾರ್ರದ ಟೀಕಾಕಾರರು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಗುರಿಪಡಿಸುವ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಲು ಎಲ್ಲಾ ಸಾಮಥ್ಯ ಮತ್ತು ದೃಢತೆಯನ್ನು ಪ್ರಯೋಗಿಸಬೇಕಾಗಿದೆ. ಇಲ್ಲದಿದ್ದರೆ ಕೋವಿಡ್ ಅನ್ನು ಗೆಲ್ಲುವ ಮುಂಚೆಯೇ ಅದರ ಮರೆಯಲ್ಲಿ ತನಗಿಷ್ಟವಿಲ್ಲದ ಪ್ರತಿಯೋರ್ವನನ್ನು ಒಂದರ ನಂತರ ಒಂದರಂತೆ ದಫನಗೈಯ್ಯಲು ಅವರಿಗೆ ಸಾಧ್ಯವಾಗಬಹುದು.

Join Whatsapp