ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿಗೆ ಸೇರ್ಪಡೆ

Prasthutha|

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ, ‘ಸಿಂಗಂ’ ಎಂದೆಲ್ಲಾ ಖ್ಯಾತರಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದೆ. ದೆಹಲಿಯಲ್ಲಿ ಮಧ್ಯಾಹ್ನ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, “ನಾನು ಸಹಜವಾಗಿ ಬಿಜೆಪಿಯೊಂದಿಗೆ ಬೆರೆಯುತ್ತೇನೆ. ಬಿಜೆಪಿಯ ವಿಶಾಲವಾದ ದೂರದೃಷ್ಟಿತ್ವ ನನ್ನ ಆಲೋಚನೆಗಳೊಂದಿಗೆ ಬೆಸೆದಿವೆ. ಪಕ್ಷದೊಂದಿಗೆ ಬೆರೆತು ಬಿಜೆಪಿಯನ್ನು ತಮಿಳುನಾಡಿನಲ್ಲಿ ಇನ್ನಷ್ಟು ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ’’ ಎಂದು ಹೇಳಿದ್ದಾರೆ.

“ತಮಿಳುನಾಡಿನಲ್ಲಿರುವ ದ್ರಾವಿಡ ರಾಜಕೀಯ ಪಕ್ಷಗಳು ಆಯಾ ಪಕ್ಷಗಳ ನಿಜವಾದ ಸಿದ್ಧಾಂತಗಳನ್ನು ಮರೆತಿವೆ. ಅಣ್ಣಾದೊರೈ, ಪೆರಿಯಾರ್ ಮತ್ತು ಎಂಜಿಆರ್ ಅವರ ಸಿದ್ಧಾಂತಗಳು ಈಗಿನ ರಾಜಕೀಯ ನಾಯಕರ ಸಿದ್ಧಾಂತಗಳಿಗಿಂತ ಭಿನ್ನವಾಗಿದ್ದವು’’ ಎಂದು ಅವರು ಹೇಳಿದ್ದಾರೆ.

- Advertisement -

ಅಣ್ಣಾಮಲೈ ನಿವೃತ್ತಿ ಘೋಷಿಸಿದ್ದಾಗಲೇ, ಅವರು ರಾಜಕೀಯ ಸೇರುತ್ತಾರೆ ಎಂಬ ಊಹಾಪೋಹಗಳು ಹರಡಿದ್ದವು. ಇನ್ನು ಕೆಲವರು ಬಿಜೆಪಿ ಸೇರಲೆಂದೇ ರಾಜೀನಾಮೆ ನೀಡಿದ್ದಾರೆ ಅಂದಿದ್ದರು. ಆದರೆ, ಆಗ ಅದನ್ನು ನಿರಾಕರಿಸಿದ್ದ ಅಣ್ಣಾಮಲೈ ಈಗ ಬಿಜೆಪಿ ಸೇರುತ್ತಿರುವುದು ದೃಢವಾಗಿದೆ.

ಕರ್ನಾಟಕದಲ್ಲಿ ಚಿಕ್ಕಮಗಳೂರು, ಬೆಂಗಳೂರು ಸೇರಿ ಹಲವೆಡೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, 2019ರಲ್ಲಿ ಅವರು ನಿವೃತ್ತಿ ಘೋಷಿಸಿದ್ದರು. ಅಣ್ಣಾಮಲೈ ಬಿಜೆಪಿ ಸೇರ್ಪಡೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆದಿವೆ.

Join Whatsapp