ಭೀಮಾ ಕೋರೆಗಾಂವ್ ಪ್ರಕರಣ: 83ರ ಹರೆಯದ ಆದಿವಾಸಿ ಪರ ಹೋರಾಟಗಾರ ಸ್ಟ್ಯಾನ್ ಸ್ವಾಮಿಗೆ ಜಾಮೀನು ನಿರಾಕರಿಸಿದ ಎನ್.ಐ.ಎ ಕೋರ್ಟ್

Prasthutha|

►►ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸ್ವಾಮಿ

►► ಆರೋಪಿಯಿಂದ ಕೋರೋನಾ ಪರಿಸ್ಥಿತಿಯ ದುರ್ಬಳಕೆ ಯತ್ನ ಎಂದ ಎನ್.ಐ.ಎ

- Advertisement -

ಹೊಸದಿಲ್ಲಿ: 2018ರ ಭೀಮಾಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಆದಿವಾಸಿ ಪರ ಹೋರಾಟಗಾರ 83ರ ಹರೆಯದ ಸ್ಟ್ಯಾನ್ ಸ್ವಾಮಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಮುಂಬೈಯ ಎನ್.ಐ.ಎ ನ್ಯಾಯಾಲಯ ಗುರುವಾರ ತಿರಸ್ಕರಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಸ್ವಾಮಿ ತನ್ನ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳನ್ನುಉಲ್ಲೇಖಿಸಿ ಮಧ್ಯಂತರ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಸ್ವಾಮಿಯವರನ್ನು ಅ.8ರಂದು ಜಾರ್ಖಂಡ್ ನ ರಾಂಚಿಯಿಂದ ಕೇಂದ್ರ ಏಜೆನ್ಸಿಯು ಬಂಧಿಸಿತ್ತು ಮತ್ತು ಮರುದಿನ ಮುಂಬೈಗೆ ಕರೆತಂದಿತ್ತು. ಅವರನ್ನು ಅ.23ರ ತನಕ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಸ್ವಾಮಿ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ದ ಸದಸ್ಯ ಹಾಗೂ 2018ರಲ್ಲಿ ಪುಣೆ ಸಮೀಪದ ಭೀಮಾ ಕೋರೆಗಾಂವ್ ನಲ್ಲಿ ನಡೆದ ಜಾತಿ ಹಿಂಸೆಯನ್ನು ಪ್ರಚೋದಿಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎನ್.ಐ.ಎ ಆರೋಪಿಸಿದೆ.

ಸ್ವಾಮಿ ಮೆದುಳುಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಎನ್.ಐ.ಎ ಕೋರ್ಟ್ ಮುಂದೆ ಪ್ರದರ್ಶಿಸುವಾಗ ದಾಖಲೆಗಳಿಗೆ ಸಹಿ ಹಾಕುವುದಕ್ಕೂಮಾನವ ಹಕ್ಕು ಹೋರಾಟಗಾರನಿಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಕಾನೂನು ತಂಡವು ಅವರ ಹೆಬ್ಬೆಟ್ಟನ್ನು ತೆಗೆದುಕೊಂಡಿತ್ತು ಎಂದು ಅವರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ವಕೀಲ ಶರೀಫ್ ಶೈಕ್ ವಾದಿಸಿದ್ದರು.

ತನ್ನ ಬಂಧನಕ್ಕೆ ಮೊದಲು ಸ್ವಾಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿದ್ದರು. ಜೈಲಿನಲ್ಲಿ ಅವರು ಕುಸಿದು ಬಿದ್ದ ಘಟನೆ ನಡೆದಿದೆ. ಮಾನವೀಯ ನೆಲೆಯಲ್ಲಿ ಮತ್ತು ಕೊರೋನಾ ಹಿನ್ನೆಲೆಯಲ್ಲಿ ಜೈಲುಗಳ ದಟ್ಟಣೆಯನ್ನು ಕಡಿಮೆಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೇಮಕವಾದ ಉನ್ನತ ಅಧಿಕಾರದ ಸಮಿತಿಯ ಶಿಫಾರಸ್ಸನ್ನು ಗಮನದಲ್ಲಿಟ್ಟು ಅವರಿಗೆ ಜಾಮೀನು ಒದಗಿಸಬೇಕೆಂದು ಶೈಖ್ ಮನವಿ ಮಾಡಿದ್ದರು.

ಕೊರೋನಾ ಸಾಂಕ್ರಮಿಕದ ಅನಗತ್ಯ ಲಾಭವನ್ನು ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಜಾಮೀನು ನೀಡುವುದನ್ನು ಎನ್.ಐ.ಎ ವಿರೋಧಿಸಿತ್ತು.

- Advertisement -