ಬೊಲಿವಿಯಾ ಅಧ್ಯಕ್ಷೀಯ ಚುನಾವಣೆ | ಲೂಯಿಸ್ ಆರ್ಸಿ ಸರಕಾರ ರಚಿಸುವುದು ಖಚಿತ

Prasthutha|

ನವದೆಹಲಿ : ಬೊಲಿವಿಯಾ ರಸ್ತೆಗಳಲ್ಲಿ ಸೋಮವಾರ ಎವೊ ಮೊರೇಲ್ಸ್ ಅವರ ಪಕ್ಷದ ಕಾರ್ಯಕರ್ತರ ಸಂಭ್ರಮ ಹೇಳತೀರದು. ಬೊಲಿವಿಯಾ ಅಧ್ಯಕ್ಷೀಯ ಚುನಾವಣೆ ಅಧಿಕೃತ ಫಲಿತಾಂಶ ಹೊರಬೀಳುವ ಮೊದಲೇ, ತಮ್ಮ ಪಕ್ಷ ಭರ್ಜರಿ ವಿಜಯ ಸಾಧಿಸುವುದು ಖಚಿತವಾಗುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು

- Advertisement -

11 ತಿಂಗಳ ರಾಜಕೀಯ ಪ್ರಕ್ಷುಬ್ಧತೆಯ ಬಳಿಕ ನಡೆದಿರುವ ಈ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಮೊರೇಲ್ಸ್ ಅವರ ಮೂಮೆಂಟ್ ಟವರ್ಡ್ಸ್ ಸೋಶಿಯಲಿಸಮ್ (ಎಂಟಿಎಸ್ – ಸಮಾಜವಾದತ್ತ ಚಳವಳಿ) ಪಕ್ಷ ಭರ್ಜರಿ ಗೆಲುವಿನತ್ತ ಸಾಗಿದೆ. ಎರಡು ಸ್ವತಂತ್ರ ಸಮೀಕ್ಷೆಗಳ ಪ್ರಕಾರ, ಎಂಟಿಎಸ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಲೂಯಿಸ್ ಆರ್ಸಿ ಪರ ಶೇ.50ಕ್ಕೂ ಅಧಿಕ ಮತಗಳು ಚಲಾವಣೆಯಾಗಿರುವ ಬಗ್ಗೆ ವರದಿಯಾಗಿದೆ. ಪ್ರತಿಪಕ್ಷದ ನಾಯಕ ಕಾರ್ಲೊಸ್ ಮೆಸಾಗೆ ಶೇ.30ರಷ್ಟು ಮತಗಳು ಚಲಾವಣೆಯಾಗಿವೆ ಎಂದು ವರದಿಯಾಗಿದೆ.

ಫಲಿತಾಂಶದ ಬಗ್ಗೆ ಸಂತೋಷ ಹಂಚಿಕೊಂಡಿರುವ ಮುಂಚೂಣಿಯ ಅಧ್ಯಕ್ಷೀಯ ಅಭ್ಯರ್ಥಿ ಲೂಯಿಸ್ ಆರ್ಸಿ, ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ವಿಭಜನೆಗೊಂಡಿರುವ ದೇಶಕ್ಕೆ ರಾಷ್ಟ್ರೀಯ ಏಕತೆಯ ಸಂಕೇತದ ಸರಕಾರ ರಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ. “ನಾವು ಪ್ರಜಾಪ್ರಭುತ್ವ ಮತ್ತು ಭರವಸೆಯನ್ನು ಮರು ಪಡೆದಿದ್ದೇವೆ. ನಾವು ಎಲ್ಲಾ ಬೊಲಿವಿಯನ್ನರಿಗೋಸ್ಕರ ಸರಕಾರ ರಚಿಸಲಿದ್ದೇವೆ ಮತ್ತು ರಾಷ್ಟ್ರೀಯತೆ ಏಕತೆಯ ಸರಕಾರ ರಚಿಸಲಿದ್ದೇವೆ’’ ಎಂದು ಲೂಯಿಸ್ ಆರ್ಸಿ ತಿಳಿಸಿದ್ದಾರೆ.

- Advertisement -
ಲೂಯಿಸ್ ಆರ್ಸಿ ಮಾತನಾಡುತ್ತಿರುವುದು

ಫಲಿತಾಂಶ ಸ್ಪಷ್ಟವಾಗಿದೆ. ಗೆಲುವಿನ ವ್ಯತ್ಯಾಸ ಅಗಾಧವಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವರು, ಫಲಿತಾಂಶವನ್ನು ಒಪ್ಪಿಕೊಳ್ಳಬೇಕು ಎಂದು ಮೆಸಾ ಹೇಳಿದ್ದಾರೆ. ಬೊಲಿವಿಯಾ ಮತ ಎಣಿಕೆ ಪ್ರಕ್ರಿಯೆಯ ಪ್ರಕಾರ, ಅಂತಿಮ ಅಧಿಕೃತ ಫಲಿತಾಂಶ ಹೊರಬೀಳಲು ದಿನಗಳು ಬೇಕು. ಆದರೆ. ಸೋಮವಾರ ನಡೆದ ಶೇ.25ರಷ್ಟು ಮತ ಎಣಿಕೆಯಲ್ಲೇ ಫಲಿತಾಂಶದಲ್ಲಿ ಭಾರೀ ವ್ಯತ್ಯಯಗಳಾಗುವ ಬಗ್ಗೆ ಪಕ್ಷಗಳು ಒಪ್ಪಿಕೊಂಡಿವೆ.

ಜೀನೈನ್ ಅನೀಝ್ ಅವರ ಮಧ್ಯಂತರ ಸರಕಾರದ ಬಲಪಂಥೀಯ ನೀತಿಗಳಿಗೆ ಸ್ಪಷ್ಟ ನಿರಾಕರಣೆ ಫಲಿತಾಂಶದಲ್ಲಿ ಕಂಡು ಬಂದಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಚುನಾವಣೆ ವಿಜೇತರನ್ನು ಮಧ್ಯಂತರ ಸರಕಾರದ ಮುಖ್ಯಸ್ಥೆ ಜೀನೈನ್ ಅನೀಝ್ ಅಭಿನಂದಿಸಿದ್ದಾರೆ. “ನಮಗೆ ಇನ್ನೂ ಅಧಿಕೃತ ಫಲಿತಾಂಶ ಬಂದಿಲ್ಲ, ದರೆ, ನಮಗೆ ದೊರಕಿರುವ ಅಂಕಿ ಅಂಶಗಳ ಪ್ರಕಾರ, ಲೂಯಿಸ್ ಆರ್ಸಿ ಮತ್ತು ಡೇವಿಡ್ ಚೊಕ್ಯುಹುವಾನ್ಸಾ ಚುನಾವಣೆ ಗೆದ್ದಿರುವುದು ಸ್ಪಷ್ಟವಾಗಿದೆ’’ ಎಂದು ಅನೀಝ್ ಟ್ವೀಟ್ ಮಾಡಿದ್ದಾರೆ. “ನಾನು ವಿಜೇತರನ್ನು ಅಭಿನಂದಿಸುತ್ತೇನೆ, ಬೊಲಿವಿಯಾ ಮತ್ತು ಪ್ರಜಾಪ್ರಭುತ್ವವನ್ನು ಗಮನದಲ್ಲಿಟ್ಟುಕೊಂಡು ಅವರು ಆಡಳಿತ ನಡೆಸಲೆಂದು ಕೇಳಿಕೊಳ್ಳುತ್ತೇನೆ’’ ಎಂದು ಅನೀಝ್ ಮನವಿ ಮಾಡಿದ್ದಾರೆ.

Join Whatsapp