ನಕಲಿ ಎನ್ ಸಿಇಆರ್ ಟಿ ಪುಸ್ತಕ ಮುದ್ರಣ ಜಾಲ | ಬಿಜೆಪಿ ನಾಯಕನ ಮಗನ ವಿರುದ್ಧ ಎಫ್ ಐಆರ್ | 12 ಮಂದಿ ಬಂಧನ

Prasthutha|

ಲಖನೌ : ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (ಎನ್ ಸಿಇಆರ್ ಟಿ)ಯ ಪುಸ್ತಕಗಳ ನಕಲಿ ಮುದ್ರಣ ಮಾಡಿದ ಬಿಜೆಪಿ ನಾಯಕನ ಮಗ ಸೇರಿದಂತೆ ಹಲವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿದ್ದಾರೆ. ಬಿಜೆಪಿ ನಾಯಕ ಸಂಜೀವ್ ಗುಪ್ತಾರ ಮಗ ಸಚಿನ್ ಗುಪ್ತ ಸೇರಿದಂತೆ ಹಲವರು ಸುಮಾರು 35 ಕೋಟಿ ರು. ಮೌಲ್ಯದ ನಕಲಿ ಪುಸ್ತಕಗಳನ್ನು ಮುದ್ರಿಸಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯನ್ನು ಇಲ್ಲಿ ವರೆಗೆ ಬಂಧಿಸಲಾಗಿದೆ. ಆದರೆ, ಸಚಿನ್ ತಲೆ ಮರೆಸಿಕೊಂಡಿದ್ದಾನೆ.

- Advertisement -

ಪುಸ್ತಕ ಮುದ್ರಣದಲ್ಲೂ ಭ್ರಷ್ಟಾಚಾರ ಎಸಗುತ್ತಿರುವ ಬಿಜೆಪಿ ನಾಯಕರ ಮುಖವಾಡವನ್ನು ವಿಶೇಷ ಕಾರ್ಯಾಚರಣಾ ಪಡೆ ಬಹಿರಂಗಗೊಳಿಸಿದೆ. ಮೀರತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಕ್ರಮ ಮುದ್ರಣಕೋರರಿಂದ ಆರು ಪ್ರಿಂಟಿಂಗ್ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾರ್ಥಪುರದ ಅಚ್ಚೊಂದದಲ್ಲಿ ವೇರ್ ಹೌಸ್ ಹೊಂದಿರುವ ಸಚಿನ್ ಗೆ ಮೊಖಾಪುರದಲ್ಲಿ ಪ್ರಿಂಟಿಂಗ್ ಪ್ರೆಸ್ ಕೂಡ ಇದೆ. ಸಚಿನ್ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪ್ರಯತ್ನಿಸಲಾಗುತ್ತಿದೆ. ಸಚಿನ್ ಫೋನ್ ಮಾಡಿದಾಗ, ತಾನು ಪುಸ್ತಕ ಹಾಗೂ ದಾಖಲೆಗಳೊಂದಿಗೆ ಆಗಮಿಸುವುದಾಗಿ ತಿಳಿಸಿದ್ದ. ಆದರೆ, ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬಂಧನಕ್ಕೆ ಈಗ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

ನಕಲಿ ಪುಸ್ತಕಗಳನ್ನು ಮುದ್ರಿಸಿ ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣ, ದೆಹಲಿಯಲ್ಲಿ ವಿತರಿಸುತ್ತಿರುವುದು ತನಿಖೆಯ ವೇಳೆ ಗೊತ್ತಾಗಿದೆ. 9-12ನೇ ತರಗತಿ ವರೆಗಿನ ಪಠ್ಯ ಪುಸ್ತಕಗಳನ್ನು ಹೆಚ್ಚಾಗಿ ಮುದ್ರಿಸಲಾಗಿದೆ. ಈ ಫ್ಯಾಕ್ಟರಿಯಲ್ಲಿ 364 ವಿಧದ ಎನ್ ಸಿಇಆರ್ ಟಿಯ ನಕಲಿ ಎನ್ ಸಿಇಆರ್ ಟಿ ನಕಲಿ ಪುಸ್ತಕಗಳನ್ನು ಮುದ್ರಿಸಲಾಗಿದೆ ಎಂದು ತಿಳಿದುಬಂದಿದೆ.    

Join Whatsapp