ದಿಲ್ಲಿ ಗಲಭೆ: ಆಮ್ ಆದ್ಮಿ ಕೌನ್ಸಿಲರ್ ತಾಹಿರ್ ಹುಸೈನ್ ಸಹಾಯಕನಿಗೆ ಜಾಮೀನು

ಹೊಸದಿಲ್ಲಿ: ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಹುಸೈನ್ ಸಹಾಯಕ ಇರ್ಶಾದ್ ಅಹ್ಮದ್ ರಿಗೆ ದಿಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ಅಹ್ಮದ್ ವಿರುದ್ಧ ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ಅಹ್ಮದ್ ಗೆ ಜಾಮೀನು ನಿರಾಕರಿಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರ ಆದೇಶವನ್ನು ನ್ಯಾಯಮೂರ್ತಿ ಸುರೇಶ್ ಕೈಟ್ ನೇತೃತ್ವದ ಪೀಠವು ತಿರಸ್ಕರಿಸಿದೆ. ಸಂಘರ್ಷದ ವೇಳೆ ಗಲಭೆ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡಿದ ಆರೋಪವನ್ನು ಅಹ್ಮದ್ ಮೇಲೆ ಹೊರಿಸಲಾಗಿತ್ತು.

- Advertisement -

ಆದರೆ ಅಹ್ಮದ್ ರನ್ನು ಬಿಡುಗಡೆಗೊಳಿಸಲಾಗುವುದಿಲ್ಲ. ಅಹ್ಮದ್ ವಿರುದ್ಧ ಒಟ್ಟು ಏಳು ಪ್ರಕ್ರಣಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ಒಂದರಲ್ಲಷ್ಟೆ ಜಾಮೀನು ದೊರಕಿದೆ.

“ಪೊಲೀಸ್ ಪೇದೆಗಳಾದ ಪವನ್ ಮತ್ತು ಅಂಕಿತ್ ರ (ಇಬ್ಬರೂ ನೇರ ಸಾಕ್ಷಿಗಳಾಗಿದ್ದರು ಮತ್ತು ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದರು)  ಹೇಳಿಕೆಗಳ ಪ್ರಕಾರ ಅವರು ಅರ್ಜಿದಾರರು ಮತ್ತು ಸಹ ಆರೋಪಿಗಳನ್ನು ಗುರುತಿಸಿದ್ದರು. ಆದರೆ ಘಟನೆ ನಡೆದ ದಿನ ಫೆ.25ರಂದು ಅವರು ದೂರನ್ನು ದಾಖಲಿಸಿಲ್ಲ. ಬದಲಾಗಿ ಫೆ.28ರಂದು ಎಫ್.ಐ.ಆರ್ ದಾಖಲಿಸಿದ್ದರು. ಹಾಗಾಗಿ ಸಾಕ್ಷಿಗಳನ್ನು ಸೃಷ್ಟಿ ಮಾಡಲಾಗಿರುವಂತೆ ತೋರುತ್ತದೆ” ಎಂದು ನ್ಯಾ.ಕೈಟ್ ಹೇಳಿದ್ದಾರೆ.