ಡಿ.ಜೆ ಹಳ್ಳಿ ಗಲಭೆ | ಅಮಾಯಕರ ಬಂಧನ ನಿಲ್ಲಿಸಿ; ಪಾಪ್ಯುಲರ್ ಫ್ರಂಟ್ ಒತ್ತಾಯ

Prasthutha|

ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಡೆಸುತ್ತಿರುವ ಅಮಾಯಕರ ಬಂಧನ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾಯದರ್ಶಿ ನಾಸಿರ್ ಪಾಶಾ ಆಗ್ರಹಿಸಿದ್ದಾರೆ.

- Advertisement -

ಘಟನೆಯಲ್ಲಿ ಪಾಲ್ಗೊಳ್ಳದ ಹಲವು ಅಮಾಯಕ ಯುವಕರನ್ನು ಪೊಲೀಸ್ ಇಲಾಖೆ ಗುರಿಪಡಿಸಿ ಬಂಧಿಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಘಟನೆಯಲ್ಲಿ ಭಾಗಿಯಾದವರೆಂದು 350ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಇದರಲ್ಲಿ ಬಹುತೇಕ ಮಂದಿ ಅಮಾಯಕರು ಎಂದು ಹೇಳಲಾಗಿದೆ. ಮಾತ್ರವಲ್ಲ ದೃಷ್ಟಿಹೀನ, ಮಾನಸಿಕ ಅಸ್ವಸ್ಥ ಯುವಕನೋರ್ವನನ್ನು ಬಂಧಿಸಿರುವ ಬಗ್ಗೆಯೂ ವರದಿಯಾಗಿದೆ.

ಅಮಾಯಕ ಯುವಕರ ಮನೆಮಂದಿ ಆರೋಪಿಸಿರುವಂತೆ, ಬಂಧಿತರು ತಮ್ಮ ಮನೆಯ ಆಧಾರ ಸ್ಥಂಭಗಳಾಗಿದ್ದು, ಇದೀಗ ತಮ್ಮ ಕುಟುಂಬವೇ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಗಲಭೆಯ ನಂತರ ಪೊಲೀಸರು ಕೈಗೊಂಡ ಕ್ರಮಗಳು  ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಗಲಭೆಯಲ್ಲಿ ಪಾಲ್ಗೊಂಡವರಿದ್ದರೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಿ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಘಟನೆಗೆ ಸಂಬಂಧ ಹೊಂದಿರದ ಹಲವು ಅಮಾಯಕರನ್ನು ಬಂಧಿಸಿರುವುದು ಖಂಡನೀಯ.

- Advertisement -

ಪೊಲೀಸರು ಅಮಾಯಕರ ಬಂಧನವನ್ನು ನಿಲ್ಲಿಸಬೇಕು ಮತ್ತು ಬಂಧಿತ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ನಾಸಿರ್ ಪಾಶಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp