ಜಾತಿಗೊಂದು ನಿಗಮ: ಬಿಜೆಪಿಯ ಓಲೈಕೆ ರಾಜಕಾರಣ

Prasthutha|

-ಎನ್.ರವಿಕುಮಾರ್

- Advertisement -

 ಭಾರತದ ಸಾಮಾಜಿಕ ಸಂರಚನೆಯಲ್ಲಿ ಜಾತಿಯ ಹುಟ್ಟು, ವಿಕಾಸ ಮತ್ತು ಚಲನೆಯನ್ನು ಪ್ರಜ್ಞಾಪೂರ್ವಕವಾಗಿ ಅಧ್ಯಯನ ನಡೆಸದೆ ಹೋದಾಗ ಅಥವಾ ಜಾತಿ ವ್ಯವಸ್ಥೆಯ ಕ್ರೌರ್ಯ, ವಿಕೃತ ನಡವಳಿಗಳ ಪರಿಣಾಮಗಳನ್ನು ಬಚ್ಚಿಟ್ಟುಕೊಂಡು ಹೋಗುವುದೇ ಆದರೆ ಇಂತಹ ಸಮುದಾಯ ವಂಚನೆಯ ಕೃತ್ಯಗಳು ನಡೆಯುತ್ತಲೆ ಇರುತ್ತವೆ.  ದಲಿತ, ದಮನಿತ, ಹಿಂದುಳಿದ ವರ್ಗಗಳ ಆಶಾಕಿರಣವೆಂದು ಎಲ್ಲಾ ಕಾಲಕ್ಕೂ ಗೌರವಿಸಲ್ಪಡುವ ದೇವರಾಜ ಅರಸು ಅವರು ಎಪ್ಪತ್ತರ ದಶಕದಲ್ಲಿ ದಲಿತ-ದಮನಿತ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಏಳಿಗೆಗೆ ನಿರ್ವಂಚನೆಯಿಂದ  ಕಾರ್ಯಕ್ರಮಗಳನ್ನು ರೂಪಿಸಿದರು. ಪಕ್ಷ ಅಥವಾ ವ್ಯಕ್ತಿಗತ ರಾಜಕೀಯ ಲಾಭದ ಲವಲೇಶವೂ ಇಲ್ಲದಂತೆ ಸಾಮಾಜಿಕ ನ್ಯಾಯದ ಹಂಚಿಕೆ ಎಂಬುದು ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಆರಂಭಗೊಳ್ಳಬೇಕೆಂಬ ಅಂತಃಕರಣದಿಂದ ದುಡಿದರು. ಅದರ ಫಲವೇ ದುರ್ಬಲ ಜಾತಿಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಶಕ್ತಿ ತುಂಬಲು ಅಭಿವೃದ್ಧಿ ನಿಗಮಗಳು ನೆಲೆಗೊಂಡವು.

 ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆ ಕಾಲಕ್ಕೆ ಕೇವಲ ಸಭೆ, ಸಮಾರಂಭ ಮತ್ತು ಆಯಾ ಜಾತಿ ಸಮುದಾಯಗಳ ದೇವಸ್ತಾನ, ಸಂಘ, ಸಂಸ್ಥೆಗಳಿಗೆ ಹಣಕಾಸು ಬಕ್ಷೀಸು ಕೊಡುವ ಮಟ್ಟಿಗೆ ಸೀಮಿತವಾಗಿದ್ದ ಜಾತಿ ಓಲೈಕೆಯನ್ನು ಈಗ ನಿಗಮ, ಪ್ರಾಧಿಕಾರಗಳ ರಚನೆ ಮಾಡುವ ಮೂಲಕ ಮುಂದುವರೆಸಲಾಗುತ್ತಿದೆ. ಜಾತಿ ಆಧಾರಿತ ರಾಜಕಾರಣ ಅಕ್ಷಮ್ಯ ಎಂದು ಹೇಳುವ ಎಲ್ಲಾ ರಾಜಕೀಯ ಪಕ್ಷಗಳು ಅಂತಿಮವಾಗಿ ಜಾತಿ ರಾಜಕಾರಣವನ್ನೆ ಅವಲಂಬಿಸಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಈ ಸಮಾಜದ ಅನಾಥ ಜಾತಿಗಳು ಸಂಘಟಿತರಾಗುವುದು ಅತ್ಯಂತ ಜರೂರು ಇದೆ. ಇದನ್ನು ಜಾತೀಯತೆ ಎಂದು ಕರೆಯಲಾಗದು, ಅದೇ ಕಾಲಕ್ಕೆ ಬಲಾಢ್ಯ ಜಾತಿಗಳು ಇನ್ನಷ್ಟು ಸಂಘಟಿತಗೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿಯಾದುದ್ದು. ಇದು ಅಪ್ಪಟ ಜಾತೀಯತೆಯಾಗಿ ಆಗಿರುತ್ತದೆ. ಇಂತಹ ವ್ಯಾಖ್ಯಾನದ ಆಂತರ್ಯವನ್ನು ಅರಿಯದ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಅಧಿಕಾರದ ಅಂಗಳದಲ್ಲೇ ನಿರ್ಲಜ್ಜವಾಗಿ ಜಾತಿ ರಾಜಕಾರಣವನ್ನು ಹೊತ್ತು ಮೆರೆಯತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

- Advertisement -

 ಶಿರಾ ಉಪಚುನಾವಣೆ ಸಂದರ್ಭದಲ್ಲಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಗಳಿಸುವ ಪ್ರಯೋಗದಲ್ಲಿ ಯಶಸ್ವಿಯಾದ ಯಡಿಯೂರಪ್ಪನವರು ಬೆಳಗಾಂ ಲೋಕಸಭಾ ಕ್ಷೇತ್ರ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವಿನ ಬೆಳೆತೆಗೆಯಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ 50 ಕೋ.ರೂ.ಗಳನ್ನು ಕೊಟ್ಟಿದ್ದಾರೆ. ಈ ಜಾತಿಗಳಲ್ಲಿನ ಬಡವರನ್ನು ಆರ್ಥಿಕವಾಗಿ ಸಬಲೀಕರಣದ ಉದ್ದೇಶವೆಂದೇ ಹೇಳಲಾಗುತ್ತಿದ್ದರೂ ಮತಗಳಿಕೆಯ ರಾಜಕಾರಣ ಇದರ ಹಿಂದೆ ಅಡಗಿರುವುದು ರಹಸ್ಯವಾಗಿಲ್ಲ. ಇದು ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ತಂತ್ರಗಾರಿಕೆಯಾಗಿದ್ದರೆ. ಇತ್ತ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಸ್ವಜಾತಿಯ ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ 500 ಕೋ.ರೂ.ಗಳನ್ನು ನೀಡುವ ಮೂಲಕ ಯಡಿಯೂರಪ್ಪ ಅವರು ತಮ್ಮ ಪದಚ್ಯುತಿಗಾಗಿ ಕಸರತ್ತು ನಡೆಸಿರುವ ಸ್ವಪಕ್ಷೀಯ ಶತ್ರುಗಳನ್ನು ನಿಶ್ಯಸ್ತ್ರಗೊಳಿಸಿದ್ದರೆ. ವಿಪಕ್ಷಗಳನ್ನು ಬಾಯಿಕಟ್ಟಿ ಕೂರಿಸಿದ್ದಾರೆ. ಆದರೆ ಸಾಮಾಜಿಕ ನ್ಯಾಯದ ಹಂಚಿಕೆಯ ಹಾದಿ ಮಾತ್ರ ದಿಕ್ಕೆಟ್ಟು ಹೋಗುವಂತೆ ಮಾಡಿದ್ದಾರೆ.

 ದಲಿತ-ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಈಗಾಗಲೆ ಆದಿಜಾಂಬವ, ದೇವರಾಜ ಅರಸು, ಅಂಬೇಡ್ಕರ್, ವಾಲ್ಮೀಕಿ, ಲಂಬಾಣಿ ಅಭಿವೃದ್ಧ್ದಿ ನಿಗಮಗಳು ಸೇರಿದಂತೆ ಈಗಾಗಲೆ 18 ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳು ಅಸ್ತಿತ್ವದಲ್ಲಿವೆ. ಈ ನಿಗಮಗಳ ಸ್ಥಾಪನೆಯ ಹಿಂದೆ ದಲಿತ, ದಮನಿತ ಜಾತಿಗಳ ಸಾಮಾಜಿಕ ಸ್ಥಿತಿಯೇ ಮುಖ್ಯ ಮಾನದಂಡವಾಗಿತ್ತು. ಜಾತಿ ಶ್ರೇಣಿಕೃತ ವ್ಯವಸ್ಥೆಯ ಕಾರಣವೇ ಬಹುಸಂಖ್ಯಾತ ಜಾತಿಗಳು ಎಲ್ಲಾ ಕಾಲಕ್ಕೂ ಶೋಷಣೆ, ನಿರ್ಲಕ್ಷಕ್ಕೆ ಒಳಗಾಗುತ್ತಿದ್ದು ಅಂತಹ ಜಾತಿಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುನ್ನೆಲೆಗೆ ತರುವ ಮಾರ್ಗಗಳಲ್ಲಿ ಅಭಿವೃದ್ಧಿ ನಿಗಮಗಳೂ ಒಂದು ಮಾರ್ಗವಾಗಿದೆ. ಆದರೆ ಯಡಿಯೂರಪ್ಪ ರಾಜಕೀಯ ಲಾಭಕ್ಕಾಗಿ ಜಾತಿಗೊಂದು ನಿಗಮ ಮಾಡಲೊರಟಿರುವುದು ನಿಗಮ ರಚನೆಯ ಪರಿಕಲ್ಪನೆಯನ್ನು ಮಣ್ಣುಪಾಲು ಮಾಡಿ ಬಲಾಢ್ಯಜಾತಿಗಳನ್ನೇ ಇನ್ನಷ್ಟು ಬಲಪಡಿಸಿ ಜಾತಿಪಾರಮ್ಯದ ಮೆರೆದಾಟಕ್ಕೆ ರತ್ನಗಂಬಳಿ ಹಾಸಿದಂತಾಗಿದೆ.

 ಬ್ರಾಹ್ಮಣ, ಆರ್ಯವೈಶ್ಯ, ಮರಾಠ, ಲಿಂಗಾಯಿತ ಅಭಿವೃದ್ಧಿ ನಿಗಮಗಳ ಜೊತೆಗೆ ಮುಂದೆ ಒಕ್ಕಲಿಗರ ಅಭಿವೃದ್ಧಿ ನಿಗಮವೂ  ಬರಬಹುದು. ಈಗಾಗಲೇ ದನಿ ಇರುವ ಅನೇಕ ಜಾತಿಗಳು ಅಭಿವೃದ್ಧಿ ನಿಗಮಗಳಿಗೆ ಯಡಿಯೂರಪ್ಪ ಅವರ ಮುಂದೆ ಅರ್ಜಿ ಹಿಡಿದು ಸಾಲು ನಿಲ್ಲತೊಡಗಿದೆ. ರಾಜ್ಯದ 1351 ಜಾತಿ, ಉಪಜಾತಿಗಳಲ್ಲಿ  ಅದೆಷ್ಟೋ ತಬ್ಬಲಿ ಜಾತಿಗಳಿಗೆ ಇಂದಿಗೂ ತಮಗೊಂದು ಸಂವಿಧಾನಿಕ ಹಕ್ಕು ಇದೆ ಎಂಬುದರ ಪರಿಕಲ್ಪನೆಯೇ ಇಲ್ಲ. ಹೀಗಿರುವಾಗ ಅವುಗಳು ಮೂಕವಾಗಿ ನೋಡುವುದಷ್ಟೇ ಉಳಿದಿದೆ ಅವುಗಳ ಪಾಲಿಗೆ. ಸಾಚಾರ್ ವರದಿ ಜಾರಿಗಾಗಿ ಕಾದು ಕುಳಿತಿರುವ ಈ ನೆಲದ ಮುಸ್ಲಿಮ್ ಸಮುದಾಯ ಎಲ್ಲಾ ಕಾಲಕ್ಕೂ, ಎಲ್ಲಾ ರಾಜಕೀಯ ಪಕ್ಷಗಳಿಂದಲೂ ವಂಚನೆಗೊಳಗಾಗುತ್ತಲೇ ಬಂದಿದೆ. ಮುಸ್ಲಿಮ್ ಸಮುದಾಯ ಕಳೆದ ಒಂದು ದಶಕದಿಂದೀಚೆಗೆ ಸಾಚಾರ್ ವರದಿ ಜಾರಿಗೆ ಹಕ್ಕು ಪ್ರತಿಪಾದಿಸುವುದಿರಲಿ, ನಿರ್ಭಯವಾಗಿ ಸಂವಿಧಾನದ ಹಕ್ಕುಗಳ ಬಗ್ಗೆಯೂ ಉಸಿರು ಎತ್ತದಷ್ಟು ಭಯವನ್ನು ಹುಟ್ಟು ಹಾಕಲಾಗಿದೆ.

 ಲಿಂಗಾಯಿತ/ವೀರಶೈವ ಸಮುದಾಯ ಬಲಾಢ್ಯ ಜಾತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಹಾಗಂತ ಇಲ್ಲಿ ಇರುವವರೆಲ್ಲಾ ಅನುಕೂಲಸ್ಥರೆ ಎಂದು ಹೇಳಲಾಗದು, ಆದರೆ ಈ ಸಮುದಾಯಗಳು ಸಾಮಾಜಿಕವಾಗಿ ಗೌರವದ ಮತ್ತು ಮೇಲ್ಜಾತಿಯ ಹಿರಿಮೆಗಳಿಂದ ಕೂಡಿದೆ. ಈ ಸಮುದಾಯ ಸಾಮಾಜಿಕವಾಗಿ ಜಾತಿ ನಿಂದನೆ, ಶೋಷಣೆ, ದೌರ್ಜನ್ಯದ ನೋವಿಗೆ ತುತ್ತಾದ ಯಾವ ಸಂದರ್ಭವಾದರೂ ಇದೆಯಾ? ಈ ಜಾತಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿರುವ ಹತ್ತಾರು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಅನಾಥವಾಗಿ ನರಳುತ್ತಿರುವುದು ಯಡಿಯೂರಪ್ಪನವರಿಗೆ ಯಾಕೆ ಕಾಣುತ್ತಿಲ್ಲ. ಬಡವರನ್ನು ಜಾತಿ ಆಧಾರಿತವಾಗಿಯೇ ವಿಂಗಡಿಸುವುದಾದರೂ ಬಲಾಢ್ಯ ಜಾತಿಗಳ ಮತ್ತು ದಮನಿ ಜಾತಿಗಳ ಕಷ್ಟಗಳು ಜಾತಿ ಆಧಾರಿತವಾಗಿಯೇ ವಿಭಾಗಿಸಲ್ಪಟ್ಟಿರುತ್ತವೆ.  ಅವುಗಳನ್ನು ನೋಡುವ ಬಗೆಯೇ ಜಾತಿ ಸೋಂಕಿನಿಂದ ಒಳಗೊಂಡಿರುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ದಕ್ಕುತ್ತವೆ. ಆತ್ಮಶುದ್ಧಿ, ಕಾಯಕ, ಸಮಭಾವ, ದಾಸೋಹ ಎಂಬ ಮಹಾನ್ ಶರಣತತ್ವಗಳ ಪರಂಪರೆಯ ಲಿಂಗಾಯಿತ/ವೀರಶೈವ ಸಮುದಾಯವನ್ನು ರಾಜಕೀಯ ಕಾರಣಕ್ಕಾಗಿ ಭಿಕ್ಷೆ ಬೇಡುವ ದುಸ್ಥಿತಿಗೆ ತಂದು ನಿಲ್ಲಿಸಲಾಗಿರುವುದು ಬಸವಾದಿ ಶರಣರಿಗೆ ಮಾಡಿದ ಅವಮಾನ.

 ಯಡಿಯೂರಪ್ಪ ಅವರು ಇಂತಹ ಜಾತಿ ಆಧಾರಿತ ರಾಜಕಾರಣವನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಅವರು 2008ರಲ್ಲಿ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಮಠಗಳಿಗೆ ಅನುದಾನದ ಹೆಸರಲ್ಲಿ ಸರಕಾರಿ ಖಜಾನೆಯಿಂದ ಬೊಗಸೆ ತುಂಬಿ ಕೊಡುವ ಮೂಲಕ ಮಠಗಳನ್ನು ರಾಜಕೀಯ ಹಂಗಿನ ಸುಪರ್ದಿಗೆ ತಂದುಕೊಂಡರು, ಮಠಗಳ ನಡುವೆಯೇ ತಾರತಮ್ಯವೆಸಗಿದರು. ಅಹಿಂದ ವರ್ಗದ ಮಠಗಳ ತುಟಿಗೆ ತುಪ್ಪಸವರಿದರೆ, ಸ್ವಜಾತಿಯ ಮಠಗಳಿಗೆ ಉದಾರವಾಗಿ ಕೈ ಚಾಚಿದರು. ಮಠಗಳು ರಾಜಸೇವಾಸಕ್ತ ಕೇಂದ್ರಗಳಾಗಿಬಿಟ್ಟವು.  ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡದ ಜೆಡಿಎಸ್‌ ನ ವಚನ ಭ್ರಷ್ಟತೆ ಸಂದರ್ಭವನ್ನೇ ತಮ್ಮ ಪಾಲಿನ ವರದಾನವನ್ನಾಗಿಸಿಕೊಂಡು ಹೊರಟ ಯಡಿಯೂರಪ್ಪ ಅವರ ತಮ್ಮ ಪರವಾಗಿ ಬೀದಿಗಿಳಿದ ಮಠಗಳಿಗೆ ಋಣ ಸಮರ್ಪಿಸುತ್ತಾ ಬಂದಿದ್ದಾರೆ. ಇದೆಲ್ಲದರ ಪರಿಣಾಮವೇ ಯಡಿಯೂರಪ್ಪ ಇಂದು ಲಿಂಗಾಯಿತ/ವೀರಶೈವ ಸಮುದಾಯದ ಏಕೈಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಮಗ ವಿಜಯೇಂದ್ರ ದಿನ ಬೆಳಗಾಗುವುದರೊಳಗೆ ಲಿಂಗಾಯಿತ ಜನಮಾನಸದ ನಾಯಕನಾಗಿ ಬೆಳೆದು ನಿಂತಿದ್ದಾರೆ. ಕರ್ನಾಟಕದಲ್ಲಿ ತನ್ನ ಜಾತಿಯನ್ನು ಇಷ್ಟರ ಮಟ್ಟಿಗೆ ಸಂಘಟಿಸಿಕೊಂಡು ನಿಸ್ಸಂಕೋಚದಿಂದ ಬಹಿರಂಗವಾಗಿ ರಾಜಕಾರಣ ಮಾಡಿದ ಯಡಿಯೂರಪ್ಪ ಅವರಲ್ಲದೆ ಮತ್ತೋರ್ವ ವ್ಯಕ್ತಿ ಕಾಣ ಸಿಗುವುದಿಲ್ಲ.  

 ಇನ್ನೂ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿ ಎದ್ದುಹೋಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪಿ.ಎಚ್.ಡಿ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಲಾಗಿದೆ.  ಎಸ್ಸಿ/ಎಸ್ಟಿ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಇದುವರೆಗೂ ಒಂದು ಲ್ಯಾಪ್‌ ಟಾಪ್, ಶಿಷ್ಯವೇತನಕ್ಕೆ ದುಡ್ಡಿಲ್ಲ ಎಂಬ ಸಬೂಬು ಕೇಳಿ ಬರುತ್ತಿದೆ. ಕೊರೋನ ಸಂಕಷ್ಟವನ್ನು ಎದುರಿಸುವಲ್ಲಿ ಸರಕಾರ ಸಂಪೂರ್ಣ ನೆಲಕಚ್ಚಿ ಹೋಗಿರುವುದು ಬಿಳಿ ಹಾಳೆಯ ಮೇಲಿನ ಅಕ್ಷರಗಳಷ್ಟೆ ನಿಚ್ಚಳ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣವಿಲ್ಲ.  ಕೆ.ಎಸ್‌.ಆರ್‌.ಟಿ.ಸಿ ಸಿಬ್ಬಂದಿಗಳಿಗೆ, ಶಿಕ್ಷಕರಿಗೆ ಸಂಬಳ ಕೊಡಲೂ ದುಡ್ಡಿಲ್ಲ ಎನ್ನುವ ಸರಕಾರ ಮಾತ್ರ ಮರಾಠ, ಲಿಂಗಾಯಿತ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿಗಳ ಕೊಡುಗೆ ನೀಡಿ ಜಾತಿ ಪ್ರೇಮದ ಬಚ್ಚಲು ನೀರು ಹರಿಯತೊಡಗಿದೆ. 

 ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳ ರಚನೆಗೆ ಆ ಜಾತಿಯ ಕುರಿತಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ವೈಜ್ಞಾನಿಕ ಅಂಕಿಅಂಶಗಳ ಅವಶ್ಯಕತೆ ಇದೆ ಎನ್ನುವುದಾದರೂ ಈ ಸರ್ಕಾರಕ್ಕೆ ಅರಿವಿಲ್ಲವೆ? 2014ರ ವರೆಗೂ ಈ ರಾಜ್ಯದ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಅಂಕಿಅಂಶಗಳೇ ಇರಲಿಲ್ಲ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧ್ಯಯನ ನಡೆಸಿ ಅದರ ವರದಿಯೂ ಸರಕಾರದ ಮುಂದೆ ಇದೆ. ಇದು ಸಂವಿಧಾನದತ್ತ ಮೀಸಲಾತಿ ಮತ್ತು ಜಾತಿ ಆಧಾರಿತ ಸವಲತ್ತುಗಳ ಹಂಚಿಕೆಗೂ ಒಂದು ಕೈಪಿಡಿಯಾಗಿ ಕಂಡು ಬರುತ್ತಿದೆ. ಈ ಅಂಕಿಅಂಶಗಳ ಮುಂದಿಟ್ಟುಕೊಂಡು ನಿರ್ವಂಚನೆಯಿಂದ ಜಾತಿ ಜಾತಿಗಳ ನಡುವೆ ಸಾಮಾಜಿಕ ನ್ಯಾಯದ ಫಲವನ್ನು ಹಂಚುವ ಮೂಲಕ ಬಹುಜನರ ಪಾಲಿಗೆ ಮತ್ತೊರ್ವ ದೇವರಾಜ ಅರಸು ಆಗಬಹುದಾಗಿದ್ದ ಅವಕಾಶವನ್ನು ಯಡಿಯೂರಪ್ಪ ಅವರು ನಿರ್ಲಜ್ಜ ಸ್ವಜಾತಿ ಪ್ರೇಮದಿಂದ ಕಳೆದುಕೊಳ್ಳತೊಡಗಿದ್ದಾರೆ.    

 ಜಾತಿಗೊಂದು ಅಭಿವೃದ್ಧಿ ನಿಗಮಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮತ ಬೇಟೆಯ ಸಂರಕ್ಷಿತ ಕಾಡಿನಂತೆ ಈಗ ಮೈದಳೆಯುತ್ತಿದ್ದು, ಯಡಿಯೂರಪ್ಪ ಕೋಮುವಾದಿ ಪಕ್ಷ ಬಿಜೆಪಿಯಲ್ಲಿದ್ದರೂ, ಅವರು ಕೋಮುವಾದಿಯಲ್ಲ ಎಂಬ ಸಮರ್ಥನೆಯ ಮಾತುಗಳನ್ನು ಆಡುವವರಿಗೆ ಯಡಿಯೂರಪ್ಪ ಜಾತಿವಾದಿಯಲ್ಲ ಎಂದು ಹೇಳಲು ಈಗ ಧೈರ್ಯವಿಲ್ಲದಂತಾಗಿದೆ.

Join Whatsapp