ಕೋಮುಗಲಭೆಗೆ ಸಂಘಪರಿವಾರದ ಷಡ್ಯಂತ್ರ: ಕಠಿಣ ಕಾನೂನು ಕ್ರಮಕ್ಕೆ ಎಸ್.ಡಿ.ಪಿ.ಐ ಆಗ್ರಹ

Prasthutha|

ಕೋಮುಗಲಭೆಗೆ ಸಂಘಪರಿವಾರದ ಷಡ್ಯಂತ್ರ: ಕಠಿಣ ಕಾನೂನು ಕ್ರಮಕ್ಕೆ ಎಸ್.ಡಿ.ಪಿ.ಐ ಆಗ್ರಹ.

- Advertisement -

ಜಿಲ್ಲೆಯ ಸೌಹಾರ್ದವನ್ನು ಕದಡಿ ಕೋಮು ಗಲಭೆ ನಡೆಸಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವ ಸಂಘಪರಿವಾರದ ಪ್ರಯತ್ನವನ್ನು ವಿಫಲಗೊಳಿಸಬೇಕು ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್. ಎಚ್. ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಕಳೆದ ಹಲವಾರು ವರ್ಷಗಳಿಂದ ಶಾಂತಿ ಸೌಹಾರ್ದತೆಯಿಂದ ಮತ್ತು ಸಾಮರಸ್ಯದಿಂದ  ಬದುಕುತ್ತಿದ್ದಾರೆ. ಇದರ ನಡುವೆ ಸಂಘಪರಿವಾರದ ಗೂಂಡಾಗಳು  ಹಲವು ದುಷ್ಕೃತ್ಯಗಳನ್ನು ನಡೆಸುವ ಮೂಲಕ ಜಿಲ್ಲೆಯ ಶಾಂತಿಯನ್ನು ಕೆದಡಲು ಪ್ರಯತ್ನ ಪಡುತ್ತಿದ್ದಾರೆ.

- Advertisement -

ಅಲ್ಪಸಂಖ್ಯಾತ ಭವನದ ಮೇಲೆ ದಾಳಿ, ಆಲಾಡಿಯಲ್ಲಿ ಶರೀಫ್ ಎಂಬ ವ್ಯಕ್ತಿಯ ಹತ್ಯಾಯತ್ನ, ಮುಲ್ಕಿಯ ನೌಶಾದ್ ಎಂಬ ವ್ಯಕ್ತಿಯ ಹತ್ಯಾ ಯತ್ನ, ಕಲ್ಲಡ್ಕ ಸಮೀಪದ ಪರನೀರು ಎಂಬಲ್ಲಿ ದಲಿತ ವ್ಯಕ್ತಿಗೆ ಕ್ಷುಲ್ಲಕ ಕಾರಣಕ್ಕಾಗಿ ಮಾರಣಾಂತಿಕ ಹಲ್ಲೆ, ಜಾನುವಾರು ಸಾಗಾಟಗಾರರ ಮೇಲೆ ನಿರಂತರ ದಾಳಿ , ಇದೆಲ್ಲದರ ಮುಂದುವರಿದ ಭಾಗವಾಗಿ ಇಂದು ಪಂಪ್ ವೆಲ್ ಮಸೀದಿಗೆ ಸೋಡಾ ಬಾಟಲಿ ಎಸೆದು ಹಾನಿ ಮಾಡಿ ಕೋಮು ಗಲಭೆ ನಡೆಸಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿದ್ದಾರೆ.

ಪೋಲಿಸ್ ಇಲಾಖೆ ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದರೂ ಕೂಡ ದುಷ್ಕೃತ್ಯಗಳು ಮುಂದುವರೆಯುತ್ತಲೇ ಇದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಸೆಕ್ಷನ್ ಹಾಕದೆ ಲಘು ಸೆಕ್ಷನ್ ಹಾಕಿ ಕೂಡಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಅದೇರೀತಿ  ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಘಟನೆ, ಹುಸಿ ಬಾಂಬ್ ಕರೆ ಮತ್ತು ಬೆದರಿಕೆ ಸಂದೇಶ ನಿರಂತರವಾಗಿ ನಡೆಯುತ್ತಿದ್ದು ಇದನ್ನು ಕೂಡ ಒಂದು ಸಮುದಾಯಕ್ಕೆ ಎತ್ತಿಕಟ್ಟುವ ಪ್ರಯತ್ನ ನಡೆದಿದೆ. ಆದರೆ ಪೊಲೀಸ್ ಇಲಾಖೆಯ ಕ್ಷಿಪ್ರಗತಿಯ ತನಿಖೆಯಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.

ಆದುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇದೆಲ್ಲದರ ಹಿಂದಿರುವ ಮೂಲವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಶಾಹುಲ್ ಎಸ್. ಎಚ್. ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp