ಕತಾರ್ ಬಿಕ್ಕಟ್ಟು ಇತ್ಯರ್ಥಕ್ಕೆ ಸೌದಿ ಒಲವು | ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಹೇಳಿಕೆ

Prasthutha|

ವಾಷಿಂಗ್ಟನ್ : ತನ್ನ ನೆರೆ ರಾಷ್ಟ್ರ ಕತಾರ್ ನೊಂದಿಗಿನ ಮೂರು ವರ್ಷಗಳ ಬಿಕ್ಕಟ್ಟು ಸರಿಪಡಿಸುವ ಬಗ್ಗೆ ಸೌದಿ ಅರೇಬಿಯಾ ವಿದೇಶಾಂಗ ಸಚಿವರು ಮುನ್ಸೂಚನೆ ನೀಡಿದ್ದಾರೆ. ವಾಶಿಂಗ್ಟನ್ ನಲ್ಲಿ ಸೌದಿ ಅರೇಬಿಯಾ ವಿದೇಶಾಂಗ ಸಚಿವ ಯುವರಾಜ ಫೈಸಲ್ ಬಿನ್ ಫರ್ಹಾನ್ ಮತ್ತು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ನಡುವೆ ಮಾತುಕತೆ ಬಳಿಕ ಈ ಹೇಳಿಕೆ ಹೊರಬಿದ್ದಿದೆ.

- Advertisement -

2017ರಲ್ಲಿ ಸೌದಿ ಅರೇಬಿಯಾ ದೋಹಾ ಜೊತೆಗಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಕಡಿದುಕೊಂಡಿತ್ತು ಮತ್ತು ಸಾಗರ, ಭೂಮಿ ಮತ್ತು ವಾಯು ಮಾರ್ಗಗಳಿಗೆ ನಿಷೇಧ ಹೇರಿತ್ತು. “ಪರಿಹಾರ ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ’’ ಎಂದು ಫೈಸಲ್ ಬಿನ್ ಫರ್ಹಾನ್ ಹೇಳಿದ್ದಾರೆ. ವಾಶಿಂಗ್ಟನ್ ಇನ್ಸ್ ಟಿಟ್ಯೂಟ್ ಫಾರ್ ಈಸ್ಟ್ ಪಾಲಿಸಿ ಆಯೋಜಿಸಿದ್ದ ವರ್ಚುವಲ್ ಮಾತುಕತೆಯಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

“ನಾವು ನಮ್ಮ ಕತಾರಿ ಸಹೋದರರ ಜೊತೆ ವ್ಯವಹಾರ ಮುಂದುವರಿಸಲು ಸಿದ್ಧರಿದ್ದೇವೆ ಮತ್ತು ಅವರೂ ಈ ನಿಟ್ಟಿನಲ್ಲಿ ಬದ್ಧರಾಗಿದ್ದಾರೆ ಎಂಬ ಭರವಸೆ ನಮಗಿದೆ’’ ಎಂದು ಅವರು ತಿಳಿಸಿದ್ದಾರೆ. ಇದು ಕತಾರ್ ಗೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲು ಸೌದಿ ಒಲವು ಹೊಂದಿರುವುದರ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದೆ.

- Advertisement -

2017ರಲ್ಲಿ ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಈಜಿಪ್ಟ್ ಕತಾರ್ ವಿರುದ್ಧ ನಿಷೇಧವನ್ನು ಹೇರಿತ್ತು. ಕತಾರ್ ‘ಭಯೋತ್ಪಾದನೆ’ಗೆ ಬೆಂಬಲಿಸುತ್ತಿದೆ ಮತ್ತು ತಮ್ಮ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂಬ ಆರೋಪ ಕತಾರ್ ವಿರುದ್ಧ ಕೇಳಿ ಬಂದಿತ್ತು. ಇರಾನ್ ಜೊತೆಗಿನ ದೋಹಾದ ನಂಟಿನ ಕುರಿತೂ ಆರೋಪಗಳಿವೆ. ಆದರೆ, ಕತಾರ್ ಈ ಆರೋಪಗಳನ್ನು ನಿರಾಕರಿಸುತ್ತಾ ಬಂದಿದೆ.

Join Whatsapp