ಅಝಂಗಢ : ಯುಪಿ ಪೊಲೀಸರ ಕರಾಳ ಕ್ರೌರ್ಯಗಳನ್ನು ಬಯಲಿಗೆಳೆಯುತ್ತಿರುವ ‘ಎನ್ ಕೌಂಟರ್’ ಗಳು!

Prasthutha: August 17, 2020

ಪೂರ್ವ ಉತ್ತರ ಪ್ರದೇಶದ ಅಝಂಗಢ ಜಿಲ್ಲೆಯ ಹಲವರು ಇದೀಗ ಉತ್ತರ ಪ್ರದೇಶ ಪೊಲೀಸರ ಎನ್ ಕೌಂಟರ್ ಗಳ ಕುರಿತು ಪ್ರಶ್ನೆಗಳನ್ನು ಎತ್ತ ತೊಡಗಿದ್ದಾರೆ. ಈ ಎನ್ ಕೌಂಟರ್ ಗಳಲ್ಲಿ ಹಲವರು ಸಾವನ್ನಪ್ಪಿದ್ದು, ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಬಹುತೇಕ ಮಂದಿ ದಲಿತರು, ಹಿಂದುಳಿದ ವರ್ಗದ ಯಾದವರು ಹಾಗೂ ಮುಸ್ಲಿಮರಾಗಿದ್ದಾರೆ. ಈ ಹಿಂದೆಯೂ, ಯೋಗಿ ಸರ್ಕಾರದ ನಕಲಿ ಎನ್ ಕೌಂಟರ್ ಗಳ ಬಗ್ಗೆ ಸಂಶಯಗಳು ಉದ್ಭವಿಸಿದ್ದವು.

ಸಂತ್ರಸ್ತರಲ್ಲಿ ಓರ್ವನಾಗಿರುವ ಅಜಯ್ ಯಾದವ್ ಎಂಬಾತ ಮಾಧ್ಯಮಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದು, ಆ ಮೂಲಕ ಯುಪಿ ಸರ್ಕಾರದ ಪೊಲೀಸರ ಕರಾಳ ಕ್ರೌರ್ಯಗಳು ಅನಾವರಣಗೊಂಡಿವೆ.

“ನಾನು 2018ರ ಮೇ ತಿಂಗಳಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಎದುರಾದ ಪೊಲೀಸರು ನೇರವಾಗಿ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿಂದ ನನ್ನ ಕೈಕಾಲುಗಳನ್ನು ಕಟ್ಟಿ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟಿ ಬಲವಂತವಾಗಿ ಸುಮೋ ವಾಹನದಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದರು. ನಂತರ ಕಟ್ಟಿದ್ದ ಹಗ್ಗ, ಬಟ್ಟೆಯನ್ನು ಬಿಚ್ಚಿ ನನ್ನ ಮೊಣ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಒತ್ತರಿಸಿಕೊಂಡು ಬರುತ್ತಿದ್ದ ಕಣ್ಣೀರನ್ನು ಒರೆಸುತ್ತಾ ಅಜಯ್ ಯಾದವ್ ಅಂದಿನ ಕರಾಳ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಅಜಯ್ ತಂದೆ ಸತ್ಯರಾಮ್ ಮಾತನಾಡುತ್ತಾ, “ಎರಡು ವರ್ಷಗಳ ಹಿಂದೆ ನನ್ನ ಮಗನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದರು, ಈಗಲೂ ಅದಕ್ಕಾಗಿ ಚಿಕಿತ್ಸೆ ನಡೆಯುತ್ತಿದೆ. ಆದರೂ ಪೊಲೀಸರು ಮನಸ್ಸಾದಾಗಲೆಲ್ಲಾ ಬಂದು ಸಣ್ಣ ಪುಟ್ಟ ಪ್ರಕರಣಗಳಿಗಾಗಿ ಅವನನ್ನು ಠಾಣೆಗೆ ಕರೆದುಕೊಂಡು ಹೋಗುತ್ತಾರೆ” ಎಂದು ಅಳಲು ತೋಡಿಕೊಂಡರು. “ನನ್ನ ಕಣ್ಣ ಮುಂದೆಯೇ ಆತನನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಒಂದು ಗಂಟೆಯ ಒಳಗಾಗಿ ಅವನ ವಿರುದ್ಧದ ಎನ್ ಕೌಂಟರ್ ಸುದ್ದಿ ಬಂದಿತ್ತು. ನನ್ನ ಮಗ ಅಮಾಯಕ, ಇದು ನಮ್ಮ ವಿರುದ್ಧದ ಅನ್ಯಾಯವಾಗಿದೆ. ಇನ್ನೂ ನಾವೆಲ್ಲಾ ಯುಪಿ ಪೊಲೀಸರ ಭಯದಿಂದಲೇ ದಿನದೂಡುತ್ತಿದ್ದೇವೆ. ಯಾವ ಕ್ಷಣದಲ್ಲಾದರೂ ಆತನನ್ನು ಪೊಲೀಸರು ಕರೆದುಕೊಂಡು ಹೋಗಬಹುದು” ಎಂದು ಸತ್ಯರಾಮ್ ಆತಂಕ ವ್ಯಕ್ತಪಡಿಸುತ್ತಾರೆ.

ಅಜಯ್ ನ ತಾಯಿ ಮಾತನಾಡುತ್ತಾ, “ನಾವು ಕಡು ಬಡವರು. ಮಗನಿಗೂ ಈಗ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಮನೆಯ ನಿರ್ವಹಣೆ ಬಲು ಕಷ್ಟವಾಗಿದೆ. ನನ್ನ ಕುಟುಂಬದ ಈ ಪರಿಸ್ಥಿತಿಗೆ ಕಾರಣವಾದ ಪೊಲೀಸರಿಗೆ ಧನ್ಯವಾದಗಳು ಎಂದವರು ಮಾರ್ಮಿಕವಾಗಿ ಹೇಳುತ್ತಾರೆ. ಪೊಲೀಸರ ಈ ಅಮಾನವೀಯ ಕೃತ್ಯದಿಂದಾಗಿ ನಮ್ಮ ಇಡೀ ಕುಟುಂಬವೇ ಕಂಗೆಟ್ಟಿದೆ ಎನ್ನುತ್ತಾರೆ.

ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಎನ್ ಕೌಂಟರ್ ಗೆ 9 ಮಂದಿ ಜೀವ ತೆತ್ತಿದ್ದಾರೆ. ಹನ್ನೆರಡಕ್ಕೂ ಹೆಚ್ಚಿನ ಜನರ ಕಾಲಿಗೆ ಗುಂಡು ಹೊಡೆಯಲಾಗಿದೆ. ಅಚ್ಚರಿಯೆಂದರೆ ಇವರಲ್ಲಿ ಬಹುತೇಕರು ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.

ರಿಹಾಯಿ ಮಂಚ್ ಮುಖ್ಯಸ್ಥ ರಾಜೀವ್ ಯಾದವ್ ಪ್ರಕಾರ, ಯೋಗಿ ಸರ್ಕಾರದ ಅವಧಿಯಲ್ಲಿ ಯುಪಿಯಲ್ಲಿ ಸುಮಾರು 1800 “ಅರೆ ಎನ್ ಕೌಂಟರ್” ಗಳು ನಡೆದಿವೆ. ಇವರ ಪ್ರಕಾರ ಅರೆ ಎನ್ ಕೌಂಟರ್ ಎಂದರೆ ಕೊಲ್ಲುವ ಉದ್ದೇಶವಿಲ್ಲದೆ ಕಾಲಿಗೆ ಗಂಭೀರ ಗಾಯಗೊಳಿಸುವುದಾಗಿದೆ. ಅವರ ಪ್ರಕಾರ ರಾಜ್ಯದಲ್ಲಿ 2014ರ ಜನವರಿಯಿಂದ 2018 ಅಕ್ಟೋಬರ್ ವರೆಗೆ ಒಟ್ಟು 31 ಮಂದಿಯ ಎನ್ ಕೌಂಟರ್ ಗಳು ನಡೆದಿದ್ದು, ಅದರಲ್ಲಿ 22 ಮಂದಿಯ ಎಡಗಾಲಿಗೆ ಹಾಗೂ 9 ಮಂದಿಯ ಬಲಗಾಲಿಗೆ ಮೊಣಕಾಲಿಗೆ ಗುಂಡು ತಾಗಿವೆ. ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ ಈ ಎನ್ ಕೌಂಟರ್ ಗಳು ಪ್ರಾರಂಭವಾಗಿದ್ದು, ಎಲ್ಲಾ ಪ್ರಕರಣಗಳ ವಿಧಾನಗಳು ಬಹುತೇಕ ಸಾಮ್ಯತೆಗಳನ್ನು ಹೊಂದಿದೆ. ರಾಜೀವ್ ಯಾದವ್ ಹೇಳುವ ಪ್ರಕಾರ, ನಾವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಮೀಪಿಸಿದ್ದು, ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶಗಳನ್ನು ನೀಡಿದ್ದಾರೆ. ಆದರೆ ಈ ವರೆಗೂ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

ಉತ್ತರ ಪ್ರದೇಶದಲ್ಲಿ ಅರಾಜಕತೆ ಎದ್ದು ಕಾಣುತ್ತಿದ್ದು, ಜನರು ಭಯದ ವಾತಾವರಣದಲ್ಲಿಯೇ ಬದುಕುತ್ತಿದ್ದಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!