ನನ್ನ ಮೇಲಿನ ಹಲ್ಲೆಗೂ ಎಸ್ಡಿಪಿಐಗೂ ಸಂಬಂಧ ಖಚಿತವಾಗಿಲ್ಲ; ರಾಜಕೀಯ ಪಕ್ಷಗಳನ್ನು ಸೈದ್ಧಾಂತಿಕವಾಗಿ ಎದುರಿಸಿ : ತನ್ವೀರ್ ಸೇಠ್

Prasthutha|

“ನನ್ನ ಮೇಲಿನ ಹಲ್ಲೆ ನಡೆಸಿದವರು ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ (SDPI) ಸದಸ್ಯರು ಎನ್ನುವುದು ಇನ್ನೂ ಖಚಿತತೆಯಿಲ್ಲ.ಅದನ್ನು ನಡೆಸಿದವರು ಎಸ್ಡಿಪಿಐಯವರು ಎಂದು ನಿಮ್ಮಲ್ಲಿ ಹೇಳಿದವರಾರು” ಎಂದು ಶಾಸಕ್ ತನ್ವೀರ್ ಸೇಠ್ ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳು ಊಹಾಪೋಹಗಳ, ವದಂತಿಗಳ ಆಧಾರದ ಮೇಲಿನ ಸುದ್ದಿಗಳನ್ನು ಹರಿಯಬಿಟ್ಟು ಜನರನ್ನು ಗೊಂದಲಗೊಳಿಸಬಾರದು ಎಂದು ಶಾಸಕ ತನ್ವೀರ್ ಸೇಠ್ ವಿನಂತಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಮತಾಂಧನೋರ್ವ ಪ್ರವಾದಿ ಮುಹಮ್ಮದರ ವಿರುದ್ಧದ ಫೇಸ್ಬುಕ್ ಪೋಸ್ಟ್ ಒಂದು ವೈರಲ್ ಆದ ನಂತರ ಬೆಂಗಳೂರಿನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಬೆಂಗಳೂರಿನ ಘಟನೆಯ ಕುರಿತು ಚರ್ಚೆ ನಡೆಸುವಾಗ, ನನ್ನ ಮೇಲೆ ಹಲ್ಲೆ ನಡೆಸಿದ್ದು ಕೂಡಾ SDPI ಎಂದು ಮಾಧ್ಯಮಗಳು ಅನಗತ್ಯವಾಗಿ ತಳುಕು ಹಾಕಿವೆ. ನನ್ನ ಮೇಲಿನ ಹಲ್ಲೆ ಘಟನೆಯಲ್ಲಿ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ 5 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದಾರೆ. ಇನ್ನುಳಿದ ಮೂರು ಮಂದಿ ಜೈಲಿನಲ್ಲಿದ್ದಾರೆ. ಪ್ರಕರಣವನ್ನು ನನ್ನ ವಕೀಲರ ಮೂಲಕವೇ ನಾನು ನಿಭಾಯಿಸುತ್ತಿದ್ದೇನೆ. ತನಿಖೆಯ ಸತ್ಯಾಂಶ ಹೊರಬರುವ ವರೆಗೆ ಏನನ್ನೂ ಮಾತನಾಡುವುದು ಸರಿಯಲ್ಲವೆಂದು ಅವರು ತಿಳಿಸಿದ್ದಾರೆ. 

ಬೆಂಗಳೂರಿನ ಘಟನೆಗೆ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ. ಈಗಲಭೆಯ ಕುರಿತು ಸೂಕ್ತ ತನಿಖೆ ನಡೆಸಬೇಕು. ಗಲಭೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ನೀವೇ ಹೇಳುತ್ತಿರುವಂತೆ ಎಸ್ಡಿಪಿಐಯನ್ನು ನಿಷೇಧಿಸಬೇಕೆಂದಾದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ. ಅದು ಬಿಟ್ಟು ಅನಗತ್ಯ ಹೇಳಿಕೆಗಳನ್ನು ಕೊಡುತ್ತಾ ಪ್ರತಿಯೊಂದನ್ನೂ ರಾಜಕೀಯ ದೃಷ್ಟಿಕೋನದಲ್ಲಿ ನೋಡಬಾರದು ಎಂದವರು ಹೇಳಿದ್ದಾರೆ.

- Advertisement -

SDPI ಒಂದು ರಾಜಕೀಯ ಪಕ್ಷ, ನನಗೂ ಅದು ವಿರೋಧ ಪಕ್ಷವೇ ನಿಜ, ಅವರ ತತ್ವ ಸಿದ್ಧಾಂತದ ಆಧಾರದ ಮೇಲೆ ಅವರು ರಾಜಕೀಯ ಮಾಡುತ್ತಾರೆ. ಅದನ್ನೇ ಮುಂದಿಟ್ಟುಕೊಂಡು ಇತರರು ಕೆಳಮಟ್ಟದ ರಾಜಕಾರಣ ಮಾಡಬಾರದು ಎಂದವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಗಲಭೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಈ ಪ್ರಕರಣದಲ್ಲಿ ನ್ಯಾಯಯುತವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದೇ ನಾನೂ ಸೇರಿದಂತೆ ಎಲ್ಲರ ಆಗ್ರಹವಾಗಿದೆ ಎಂದು ತನ್ವೀರ್ ಸೇಠ್ ಹೇಳಿದರು.

Join Whatsapp