ಫ್ಯಾಕ್ಟ್ ಚೆಕ್ । ಅಮಿತಾಬ್ ಬಚ್ಚನ್ ದಾವೂದ್ ಇಬ್ರಾಹಿಂ ಭೇಟಿಯ ಫೋಟೋ ವೈರಲ್ !

Prasthutha|

ಹೊಸದಿಲ್ಲಿ: ನಟ ಅಮಿತಾಬ್ ಬಚ್ಚನ್ ಓರ್ವ ವ್ಯಕ್ತಿಯೊಂದಿಗೆ ಹಸ್ತಲಾಘವ ಮಾಡುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊ ಬಚ್ಚನ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹೀಂ ನಡುವಿನ ಸಂಪರ್ಕಕ್ಕೆ ಪುರಾವೆಯಾಗಿದೆ ಎಂದು ಕೆಲವರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕಿದ್ದಾರೆ.. ಇಬ್ಬರ ನಡುವಿನ ಈ ಸಂಪರ್ಕವೇ ಡ್ರಗ್ ಸಂಪರ್ಕದ ಆರೋಪದ ಮೇಲೆ ಭಾರತೀಯ ಚಿತ್ರೋದ್ಯಮವನ್ನು ಗುರಿಯಾಗಿಸಿಕೊಂಡವರನ್ನು ಹಿಮ್ಮೆಟ್ಟಿಸಲು ಜಯಾ ಬಚ್ಚನ್‌ರನ್ನು ಪ್ರೇರೇಪಿಸಿತು ಎಂದವರು ಇದಕ್ಕೆ ತಮ್ಮದೇ ಶೈಲಿಯ ಒಕ್ಕಣೆಯನ್ನೂ ಹಾಕಿದ್ದಾರೆ.  

- Advertisement -

 ಸೆಪ್ಟೆಂಬರ್ 18ರಂದು ಫೇಸ್‌ಬುಕ್ ಬಳಕೆದಾರ ಶೈಲೇಂದ್ರ ಜೋರಾ ಈ ಚಿತ್ರವನ್ನು ಪೋಸ್ಟ್ ಮಾಡಿ, ‘‘ನಾನು ರಕ್ತದಿಂದ ನಿಮ್ಮ ತಂದೆ. ಆದರೆ ನಾನು ನಿಮ್ಮ ಗುಲಾಮ….! ದಾವೂದ್ ಇಬ್ರಾಹಿಂ ಮತ್ತು ಅಮಿತಾಬ್ ಬಚ್ಚನ್‌ರವರ ಈ ಹಳೆಯ ಫೋಟೊ ಇದೀಗ ಬಿಡುಗಡೆಯಾಗಿದೆ. ಅದಕ್ಕಾಗಿಯೇ ಬಾಲಿವುಡ್ ಡ್ರಗ್ ಆರೋಪದಲ್ಲಿ ಜಯಾ ಬಚ್ಚನ್‌ ಇತ್ತೀಚೆಗೆ ತುಸು ಹೆಚ್ಚಾಗಿ ಮಾತನಾಡಿರುವುದು. ಅಮಿತಾಬ್ ಬಚ್ಚನ್‌ಗೆ ನಾಚಿಕೆಯಾಗುವುದಿಲ್ಲವೇ….!’’ ಎಂದು ಬರೆದಿದ್ದರು. ಅವರು ಪೋಸ್ಟನ್ನು ಅಳಿಸಿ ಹಾಕುವ ಮೊದಲು 1,100 ಮಂದಿಗೆ ಶೇರ್ ಆಗಿದೆ.

ಫ್ಯಾಕ್ಟ್‌ಚೆಕ್:

- Advertisement -

 ಈ ಫೋಟೊದ ಮೂಲವನ್ನು ಪರಿಶೀಲಿಸಿದಾಗ, 2010 ಮಾರ್ಚ್ 25ರ ಟೈಮ್ಸ್ ಆಫ್ ಇಂಡಿಯಾದ ಲೇಖನವೊಂದರಲ್ಲಿ ಅದರ ಕುರಿತು ಇಲ್ಲೇಖವಿದೆ. ಈ ವರದಿಯ ಪ್ರಕಾರ, ಅಮಿತಾಬ್ ಬಚ್ಚನ್‌ರವರೊಂದಿಗೆ ಹಸ್ತಲಾಘವ ಮಾಡುವ ವ್ಯಕ್ತಿ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಆಗಿದ್ದಾರೆ.  ದಿ ಹಿಂದೂ, ಇಂಡಿಯಾ ಟಿವಿ, ಎನ್‌ಡಿಟಿವಿ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಮಾಧ್ಯಮಗಳು ಅಮಿತಾಬ್ ಬಚ್ಚನ್ ಮತ್ತು ರಾಜಕಾರಣಿಗಳ ಸಭೆಯ ಅಂದಿನ ಫೋಟೊವನ್ನು ಹಂಚಿಕೊಂಡಿದ್ದವು.

 2010 ಮಾರ್ಚ್ 27ರ ‘ದಿ ಹಿಂದೂ’ ಪತ್ರಿಕೆಯ ವರದಿಯ ಪ್ರಕಾರ, ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚವಾಣ್‌ರವರು 2010 ಮಾರ್ಚ್ 24ರಂದು ಬಾಂದ್ರಾ-ವರ್ಲಿ ಸೀ ಲಿಂಕ್ ಉದ್ಘಾಟನೆಯ ಸಮಾರಂಭದಲ್ಲಿ ನಟರನ್ನು ಭೇಟಿಯಾಗಿದ್ದರು. ಅಮಿತಾಬ್ ಬಚ್ಚನ್ ಬಿಜೆಪಿ ಆಡಳಿತದ ಗುಜರಾತ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಕಾಂಗ್ರಸ್ಸಿನ ವಿವಿಧ ಹಿರಿಯ ನಾಯಕರೂ ಈ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

 ಅಭಿಷೇಕ್ ಬಚ್ಚನ್‌ರವರು ಸೆಪ್ಟೆಂಬರ್ 18ರಂದು ಟ್ವಿಟರ್‌ನಲ್ಲಿ ಚಿತ್ರದ ಮೂಲವನ್ನು ಸ್ಪಷ್ಟಪಡಿಸಿದ್ದರು. ನಂತರ ಬಳಕೆದಾರ ತಮ್ಮ ಪೋಸ್ಟನ್ನು ಅಳಿಸಿಹಾಕಿದ್ದಾರೆ.

Join Whatsapp